ಪುಣೆ: ಸಯ್ಯದ್ ಮುಷ್ತಾಕ್ ಅಲಿ ಟಿ–20 ಟೂರ್ನಿಯಲ್ಲಿ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಆಂಧ್ರಪ್ರದೇಶ ತಂಡದ ನಿತೀಶ್ ಕುಮಾರ್ ರೆಡ್ಡಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಂಧ್ರಪ್ರದೇಶ ತಂಡವು 19.1 ಓವರ್‌ಗಳಲ್ಲಿ 112 ರನ್‌ಗಳಿಗೆ ಸರ್ವಪತನ ಕಂಡಿತ್ತು.
112 ರನ್‌ಗಳ ಸುಲಭ ಗುರಿ ಬೆನ್ನತ್ತಿದ್ದ ರಜತ್ ಪಾಟೀದಾರ್ ನಾಯಕತ್ವದ ಮಧ್ಯಪ್ರದೇಶ ತಂಡಕ್ಕೆ ಪಂದ್ಯದ 2ನೇ ಓವರ್‌ನಲ್ಲಿ ನಿತೀಶ್ ರೆಡ್ಡಿ ಆಘಾತ ನೀಡಿದರು.
ನಿತೀಶ್ ರೆಡ್ಡಿ ಎಸೆದ 2ನೇ ಓವರ್‌ನ 4ನೇ ಎಸೆತದಲ್ಲಿ ಆರಂಭಿಕ ಆಟಗಾರ ಹರ್ಷ್ ಗಾವ್ಲಿ ಕ್ಲೀನ್ ಬೌಲ್ಡ್ ಆದರೆ, 5ನೇ ಎಸೆತದಲ್ಲಿ ಹರ್‌ಪ್ರಿತ್ ಸಿಂಗ್ ಭಾಟಿಯಾ, ರಿಕಿ ಭುಯಿಗೆ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್ ಸೇರಿದರು. 6ನೇ ಎಸೆತದಲ್ಲಿ ನಾಯಕ ರಜತ್ ಪಾಟೀದಾರ್‌ರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದರು.
ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರತಿರೋಧ ತೋರಿದ್ದ ನಿತೀಶ್ ರೆಡ್ಡಿ 27 ಎಸೆತಗಳಲ್ಲಿ 25 ರನ್ ಗಳಿಸಿದ್ದರು.
ನಿತೀಶ್ ರೆಡ್ಡಿ ಆಲ್‌ರೌಂಡರ್ ಆಟದ ಹೊರತಾಗಿಯೂ, ಮಧ್ಯಪ್ರದೇಶ ತಂಡವು 17.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗುರಿ ತಲುಪುವ ಮೂಲಕ 4 ವಿಕೆಟ್‌ಗಳ ಜಯಗಳಿಸಿತು.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ–20 ಸರಣಿಯಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನಪಡೆಯಲು ವಿಫಲವಾಗಿರುವ ನಿತೀಶ್ ರೆಡ್ಡಿ, ದೇಶಿ ಟೂರ್ನಿಯಲ್ಲಿ ಆಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.