ADVERTISEMENT

ICC World Cup 2023 | ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ದಕ್ಷಿಣ ಆಫ್ರಿಕಾ

ಪಿಟಿಐ
Published 16 ಅಕ್ಟೋಬರ್ 2023, 14:15 IST
Last Updated 16 ಅಕ್ಟೋಬರ್ 2023, 14:15 IST
<div class="paragraphs"><p>ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ (ಸಂಗ್ರಹ ಚಿತ್ರ)</p></div>

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ (ಸಂಗ್ರಹ ಚಿತ್ರ)

   

ರಾಯಿಟರ್ಸ್

ಧರ್ಮಶಾಲಾ: ಎದುರಾಳಿ ತಂಡಗಳ ಬೌಲರ್‌ಗಳನ್ನು ಹಿಗ್ಗಾಮುಗ್ಗ ದಂಡಿಸಿ ಗೆಲುವಿನ ನಾಗಾಲೋಟದಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಹಾಲಿ ವಿಶ್ವಕಪ್‌ನಲ್ಲಿ ಉತ್ತಮ ಆರಂಭ ಮಾಡಿದೆ. ಪ್ರಕೃತಿ ಸೌಂದರ್ಯದ ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪಾಯಿಂಟ್ ಪಟ್ಟಿಯ ತಳದಲ್ಲಿರುವ ನೆದರ್ಲೆಂಡ್ಸ್‌ ತಂಡವನ್ನು ಎದುರಿಸಲಿದ್ದು, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ADVERTISEMENT

ಈ ಹಿಂದಿನ ವಿಶ್ವಕಪ್ ನಿರ್ಣಾಯಕ ಪಂದ್ಯಗಳಲ್ಲಿ ಸೋತು ‘ಚೋಕರ್ಸ್’ ಹಣೆಪಟ್ಟಿ ಹೊತ್ತಿರುವ ಸ್ಪ್ರಿಂಗ್‌ಬಾಕ್‌ ಹರಿಣಗಳ ತಂಡ, ಈ ಸಲ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸುಲಭ ಜಯಗಳಿಸಿದರೆ, ಎರಡನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಮುಟ್ಟಿನೋಡಿಕೊಳ್ಳುವಂಥ ಪೆಟ್ಟು ನೀಡಿದೆ. ಹೀಗಾಗಿ ಈ ತಂಡದ ಪ್ರದರ್ಶನದ ಮೇಲೆ ಎಲ್ಲರ ಗಮನ ನೆಟ್ಟಿದೆ.

ಈ ಬಾರಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಆರಂಭದಲ್ಲೇ ಹಿನ್ನಡೆ ಕಂಡಿವೆ. ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಈ ವಿಶ್ವಕಪ್‌ನಲ್ಲಿ ಕಣ್ಣುಕೋರೈಸಿದೆ. ಅನುಭವಿ ಬ್ಯಾಟರ್‌– ಕೀಪರ್ ಕ್ವಿಂಟನ್ ಡಿ ಕಾಕ್, ರಸಿ ವ್ಯಾನ್ ಡೆರ್‌ ಡಸೆ, ಏಡನ್ ಮರ್ಕರಂ ಅವರು ಮೊದಲ ಪಂದ್ಯದಲ್ಲೇ ಶತಕ ಹೊಡೆದಿದ್ದರು. ಹೆನ್ರಿಕ್‌ ಕ್ಲಾಸೆನ್, ಡೇವಿಡ್‌ ಮಿಲ್ಲರ್ ಕೂಡ ಮಿಂಚಿನ ಇನಿಂಗ್ಸ್‌ ಆಡಬಲ್ಲವರು.

ಮೊದಲ ಪಂದ್ಯದಲ್ಲಿ ಆಫ್ರಿಕಾ ಬೌಲರ್‌ಗಳ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಆದರೆ ಆ ಕೊರತೆಯನ್ನು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸರಿದೂಗಿಸಿಕೊಂಡಿತು. ಆ ಪಂದ್ಯದಲ್ಲೂ ಡಿ ಕಾಕ್ ಶತಕ ಬಾರಿಸಿದ್ದರು.

ನೆದರ್ಲೆಂಡ್ಸ್ ತಂಡದಲ್ಲಿ, ಗಮನ ಸೆಳೆಯುವ ರೀತಿಯ ಪ್ರದರ್ಶನ ಇದುವರೆಗೆ ಯಾರಿಂದಲೂ ಬಂದಿಲ್ಲ. ಆದರೆ ಆ ತಂಡ ಹಿಂದೆ ಸವಾಲೆಸೆಯುವ ಆಟ ತೋರಿದ್ದಿದೆ. 2009ರ ಟಿ–20 ವಿಶ್ವಕಪ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡವನ್ನೇ ಲಾರ್ಡ್ಸ್‌ನಲ್ಲಿ ಸೋಲಿಸಿ ಬೆರಗು ಮೂಡಿಸಿತ್ತು. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ–20 ವಿಶ್ವಕಪ್‌ನ ಸೂಪರ್ 12 ಹಂತದಲ್ಲಿ 13 ರನ್‌ಗಳಿಂದ ಪ್ರಬಲ ದಕ್ಷಿಣ ಆಫ್ರಿಕಾವನ್ನು ಸೋಲಿಸಿ, ಆ ತಂಡದ ಕಪ್ ಆಸೆ ಭಗ್ನಗೊಳಿಸಿತ್ತು.

ಆದರೆ ಈ ಮಾದರಿಯಲ್ಲಿ ತಂಡ ಅಂಥ ಪ್ರದರ್ಶನ ನೀಡಿಲ್ಲ. ಆದರೆ ಅಚ್ಚರಿಯ ಫಲಿತಾಂಶಕ್ಕೆ ಯತ್ನಿಸುವುದಂತೂ ಖಚಿತ. ಇಂಗ್ಲೆಂಡ್‌ ತಂಡವನ್ನು, ಅಫ್ಗಾನಿಸ್ತಾನ ಸೋಲಿಸಿದ್ದು ಆ ತಂಡಕ್ಕೆ ಪ್ರೇರಣೆ ನೀಡಬಹುದು.

ಮುಖಾಮುಖಿ

ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್‌ ತಂಡಗಳು ಇದುವರೆಗೆ ಏಳು ಬಾರಿ ಮುಖಾಮುಖಿಯಾಗಿವೆ. ಆರು ಬಾರಿ ದಕ್ಷಿಣ ಆಫ್ರಿಕ ಜಯಗಳಿಸಿದೆ. ಒಂದು ಪಂದ್ಯ (2021 ನವೆಂಬರ್‌) ಮಳೆಯಿಂದಾಗಿ ಅರ್ಧದಲ್ಲೇ ಮೊಟಕುಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.