ADVERTISEMENT

ಚಾಂಪಿಯನ್ಸ್ ಟ್ರೋಫಿ: ನಾಳೆ ಪಾಕ್‌ಗೆ ಐಸಿಸಿ ತಂಡ

ಪಿಟಿಐ
Published 24 ಮಾರ್ಚ್ 2024, 14:37 IST
Last Updated 24 ಮಾರ್ಚ್ 2024, 14:37 IST
   

ಲಾಹೋರ್‌: ಪ್ರತಿಷ್ಠಿತ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ನಡೆಯುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ನಿಯೋಗ ಸೋಮವಾರ ಇಲ್ಲಿಗೆ ಬರಲಿದೆ. ಈ ಮಧ್ಯೆ ಮುಂದಿನ ವರ್ಷ ಈ ಟೂರ್ನಿಯ ಆತಿಥ್ಯ ವಹಿಸಲು ತನಗೆ ಸಾಧ್ಯವಾಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಶಾವಾದ ವ್ಯಕ್ತಪಡಿಸಿದೆ.

ಭದ್ರತಾ ತಜ್ಞರನ್ನು ಒಳಗೊಂಡ ನಿಯೋಗವು ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಗೆ ಭೇಟಿ ನೀಡಲಿದೆ. 1996ರ ವಿಶ್ವಕಪ್‌ ಟೂರ್ನಿಯನ್ನು ಭಾರತ, ಶ್ರೀಲಂಕಾ ಜೊತೆ ಜಂಟಿಯಾಗಿ ಆಯೋಜಿಸಿದ ಬಳಿಕ ಮೊದಲ ಬಾರಿಗೆ ಪಾಕಿಸ್ತಾನವು ಐಸಿಸಿ ಟೂರ್ನಿಯೊಂದರ ಆತಿಥ್ಯ ವಹಿಸುತ್ತಿದೆ.

‘ಸಿದ್ಧತೆಗಳ ಬಗ್ಗೆ ನಿಯೋಗಕ್ಕೆ ಸಂಕ್ಷಿಪ್ತ ಮಾಹಿತಿ ನೀಡಲಾಗುವುದು. ಚಾಂಪಿಯನ್ಸ್ ಟ್ರೋಫಿಗಾಗಿ ನಾವು ಕೈಗೊಳ್ಳಲಿರುವ ನವೀಕರಣ ಕಾರ್ಯಗಳನ್ನು ಪರಿಶೀಲಿಸಲು ತಂಡದ ಸದಸ್ಯರು ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಗೆ ಭೇಟಿ ನೀಡಲಿದ್ದಾರೆ’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಕ್ವಿ ಭಾನುವಾರ ಹೇಳಿದ್ದಾರೆ.

ADVERTISEMENT

ಕಳೆದ ತಿಂಗಳು, ನ್ಯೂಜಿಲೆಂಡ್ ಕ್ರಿಕೆಟ್ (ಎಝೆಡ್‌ಸಿ) ನಿಯೋಗವು ಪಾಕಿಸ್ತಾನಕ್ಕೆ ಭೇಟಿ ನೀಡಿ ಏಪ್ರಿಲ್ ಮಧ್ಯದಲ್ಲಿ ಐದು ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಗಾಗಿ ತಮ್ಮ ತಂಡದ ಪ್ರವಾಸದ ಭದ್ರತೆ ಮತ್ತು ಇತರ ವ್ಯವಸ್ಥೆಗಳನ್ನು ಪರಿಶೀಲಿಸಿತ್ತು.

ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದ ಏಷ್ಯಾ ಕಪ್‌ಗೆ ಭಾರತ ತನ್ನ ತಂಡ ಕಳುಹಿಸಲು ನಿರಾಕರಿಸಿತ್ತು. ಇದರಿಂದಾಗಿ ಟೂರ್ನಿಯ ಹಲವು  ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.