ADVERTISEMENT

IND vs NZ ಟಿ20 ಪಂದ್ಯ: ಪ್ರೇಕ್ಷಕರ ಪ್ರವೇಶಕ್ಕೆ ಕಠಿಣ ನಿರ್ಬಂಧಗಳಿಲ್ಲ

ಪಿಟಿಐ
Published 11 ನವೆಂಬರ್ 2021, 14:49 IST
Last Updated 11 ನವೆಂಬರ್ 2021, 14:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜೈಪುರದಲ್ಲಿ ಇದೇ 17ರಂದು ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಟಿ20 ಪಂದ್ಯಕ್ಕೆ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.

ಕ್ರೀಡಾಂಗಣದ ಗ್ಯಾಲರಿ ಸಾಮರ್ಥ್ಯದ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಲು ಆತಿಥೇಯ ಸಂಸ್ಥೆ ಸಿದ್ಧವಾಗಿದೆ. ಕೋವಿಡ್ –19 ತಡೆ ಲಸಿಕೆಯ ಒಂದೂ ಡೋಸ್ ಹಾಕದವರಿಗೂ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ, ಅವರು ತಮ್ಮ ಕೋವಿಡ್ ನೆಗೆಟಿವ್ ಪ್ರಮಾಣಪತ್ರಗಳನ್ನು ನೀಡಬೇಕು. ಪಂದ್ಯ ನಡೆಯಲಿರುವ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ 25 ಸಾವಿರ ಜನರು ಕುಳಿತುಕೊಳ್ಳಬಹುದಾದ ಗ್ಯಾಲರಿಯಿದೆ. ಎಂಟು ವರ್ಷಗಳ ನಂತರ ಈ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಪಂದ್ಯ ನಡೆಯಲಿದೆ.

‘ರಾಜ್ಯ ಸರ್ಕಾರದ ಮಾರ್ಗಸೂಚಿಯನ್ವಯ ಪೂರ್ಣಪ್ರಮಾಣದಲ್ಲಿ ಪ್ರೇಕ್ಷಕರ ಗ್ಯಾಲರಿ ತುಂಬಿಸಲು ಅವಕಾಶ ಇದೆ. ಒಂದೂ ಡೋಸ್ ಲಸಿಕೆ ಹಾಕಿಸದಿದ್ದರೂ ನಡೆಯುತ್ತದೆ. ಆದರೆ, ನೆಗೆಟಿವ್ ಪ್ರಮಾಣಪತ್ರವನ್ನು ಪ್ರವೇಶದ್ವಾರದಲ್ಲಿ ತೋರಿಸಬೇಕು. ಮಾಸ್ಕ್ ಧರಿಸುವುದು ಕಡ್ಡಾಯ’ ಎಂದು ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಮಹೇಂದ್ರ ಶರ್ಮಾ ಹೇಳಿದ್ದಾರೆ.

ADVERTISEMENT

ಕೋವಿಡ್ ಕಾಲಘಟ್ಟದಲ್ಲಿ ಯಾವುದೇ ನಿರ್ಬಂಧಗಳಿಲ್ಲದೇ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಇದಾಗಲಿದೆ.

ನವೆಂಬರ್ 14ರಂದು ಯುಎಇಯಲ್ಲಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ನಡೆಯಲಿದೆ. ನ್ಯೂಜಿಲೆಂಡ್ ಫೈನಲ್ ತಲುಪಿದೆ. ಭಾರತ ತಂಡವು ಸೆಮಿಫೈನಲ್ ತಲುಪುವಲ್ಲಿ ವಿಫಲವಾಗಿತ್ತು.. ಕಿವೀಸ್ ಬಳಗವು ನ.15ರಂದು ಭಾರತಕ್ಕೆ ಬಂದಿಳಿಯಲಿದೆ. ಮೂರು ಟಿ20 ಪಂದ್ಯಗಳ ಸರಣಿ ಮತ್ತು ಎರಡು ಟೆಸ್ಟ್‌ಗಳ ಸರಣಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.