ADVERTISEMENT

ನಾಯಕತ್ವ ವಿವಾದ: ಎಲ್ಲವನ್ನೂ ಬಿಸಿಸಿಐ ನೊಡಿಕೊಳ್ಳುತ್ತದೆ– ಸೌರವ್ ಗಂಗೂಲಿ

ಪಿಟಿಐ
Published 16 ಡಿಸೆಂಬರ್ 2021, 13:31 IST
Last Updated 16 ಡಿಸೆಂಬರ್ 2021, 13:31 IST
ಐಎಎನ್‌ಎಸ್ ಚಿತ್ರ
ಐಎಎನ್‌ಎಸ್ ಚಿತ್ರ   

ಕೋಲ್ಕತ್ತ: ಭಾರತದ ಏಕದಿನ ಮತ್ತು ಟಿ–20 ತಂಡಗಳ ನಾಯಕತ್ವ ವಿವಾದದ ಕುರಿತಂತೆ ತಮ್ಮ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿರಾಕರಿಸಿದ್ದಾರೆ. ಎಲ್ಲವನ್ನೂ ಬಿಸಿಸಿಐ ನೋಡಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಟಿ–20 ನಾಯಕನ ಸ್ಥಾನವನ್ನು ತೊರೆಯುವ ನಿರ್ಧಾರ ತಿಳಿಸಿದಾಗ, ನನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಿಸಿಸಿಐ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬದಲಾಗಿ, ಅದನ್ನು ಸ್ವಾಗತಿಸಲಾಗಿತ್ತು ಎಂದು ವಿರಾಟ್ ಕೊಹ್ಲಿ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಕೊಹ್ಲಿ ಅವರ ಈ ಹೇಳಿಕೆಯು, ಟಿ–20 ನಾಯಕತ್ವ ತೊರೆಯದಂತೆ ವಿರಾಟ್ ಕೊಹ್ಲಿಗೆ ಮನವಿ ಮಾಡಿದ್ದೆನು ಎಂಬ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಹೇಳಿಕೆಗೆ ವ್ಯತಿರಿಕ್ತವಾಗಿತ್ತು.

ADVERTISEMENT

ಜೊತೆಗೆ, ಏಕದಿನ ಕ್ರಿಕೆಟ್ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ನಾನು ಮತ್ತು ಆಯ್ಕೆ ಸಮಿತಿ ಅಧ್ಯಕ್ಷರು ಕೊಹ್ಲಿ ಜೊತೆ ಮಾತನಾಡಿದ್ದೇವು ಎಂಬ ಗಂಗೂಲಿ ಹೇಳಿಕೆಯನ್ನು ಕೊಹ್ಲಿ ಅಲ್ಲಗಳೆದಿದ್ದರು.

ಆದರೆ, ಈ ಕುರಿತಂತೆ ‘ಯಾವುದೇ ಹೇಳಿಕೆ, ಪತ್ರಿಕಾಗೋಷ್ಠಿ ನಡೆಸುವುದಿಲ್ಲ. ನಾವು ಅದನ್ನು ನೋಡಿಕೊಳ್ಳುತ್ತೇವೆ. ಬಿಸಿಸಿಐಗೆ ಬಿಟ್ಟುಬಿಡಿ’ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಹೇಳಿಕೆ ಬೆನ್ನಲ್ಲೇ ಅಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮಾ ಅವರಿಗೆ ಪತ್ರಿಕಾಗೋಷ್ಠಿ ನಡೆಸುವಂತೆ ಬಿಸಿಸಿಐ ಸೂಚಿಸಿತ್ತು ಎಂಬ ಮಾತುಗಳಿವೆ. ಆದರೆ, ಬಳಿಕ ಆ ಕುರಿತಂತೆ ಯಾವುದೇ ಪ್ರತಿ ಹೇಳಿಕೆ ನೀಡುವುದು ಬೇಡ ಎಂಬ ನಿರ್ಧಾರಕ್ಕೆ ಕ್ರಿಕೆಟ್ ಮಂಡಳಿ ಬಂದಿದೆ ಎನ್ನಲಾಗಿದೆ.

ನಾಯಕನ ಸ್ಥಾನ ಕುರಿತ ವಿವಾದಗಳ ಬಗ್ಗೆ ಕೊಹ್ಲಿ ಮತ್ತು ಗಂಗೂಲಿ ಹೇಳಿಕೆಗಳು ಇಲ್ಲಿವೆ.

ವಿರಾಟ್ ಕೊಹ್ಲಿ ಟಿ–20 ನಾಯಕನ ಸ್ಥಾನ ತೊರೆದ ಬಗ್ಗೆ:

ಸೌರವ್ ಗಂಗೂಲಿ: ಟಿ–20 ನಾಯಕನ ಸ್ಥಾನ ತೊರೆಯದಂತೆ ವಿರಾಟ್ ಕೊಹ್ಲಿಗೆ ಬಿಸಿಸಿಐ ಮನವಿ ಮಾಡಿತ್ತು. ಆದರೆ, ಕೊಹ್ಲಿ ಅದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಹಾಗಾಗಿ, ವೈಟ್‌ಬಾಲ್ ಕ್ರಿಕೆಟ್‌ನ ಎರಡೂ ಮಾದರಿಗೆ ಬೇರೆ ಬೇರೆ ನಾಯಕನಿರುವುದು ಬೇಡ ಎಂಬ ನಿರ್ಧಾರಕ್ಕೆ ಮಂಡಳಿ ಬಂದಿತು ಎಂದು ಸೌರವ್ ಗಂಗೂಲಿ ಹೇಳಿದ್ದರು.

ವಿರಾಟ್ ಕೊಹ್ಲಿ: ‘ನಾನು ಟಿ–20 ನಾಯಕತ್ವವನ್ನು ತೊರೆದಾಗ ಬಿಸಿಸಿಐ ಗಮನಕ್ಕೆ ತಂದಿದ್ದೆ. ಬಿಸಿಸಿಐನ ಉನ್ನತ ಸ್ಥಾನದಲ್ಲಿರುವವರ ಮುಂದೆಯೇ ನನ್ನ ಅಭಿಪ್ರಾಯ ತಿಳಿಸಿದ್ದೆ. ನಾನು ಏಕೆ ನಾಯಕತ್ವ ತ್ಯಜಿಸುತ್ತಿದ್ದೇನೆ ಎಂಬ ಕಾರಣ ನೀಡಿದ್ದೆ. ಅಲ್ಲಿ ನನಗೆ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ. ನಾಯಕತ್ವ ತೊರೆಯದಂತೆ ಒಮ್ಮೆಯೂ ಯಾರೂ ಹೇಳಲಿಲ್ಲ’.

‘ನನ್ನ ನಿರ್ಧಾರವನ್ನು ಬಿಸಿಸಿಐ ಪ್ರಗತಿಪರ ಹೆಜ್ಜೆ ಎಂದು ಬಣ್ಣಿಸಿತ್ತು. ಅದೇ ವೇಳೆ, ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ತಂಡದ ನಾಯಕನ ಸ್ಥಾನದಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದೆ. ಆದರೆ, ಆ ಜವಾಬ್ದಾರಿಯಲ್ಲಿ ಮುಂದುವರಿಯುವುದು ಬೇಡ ಎಂಬ ನಿರ್ಧಾರಕ್ಕೆ ಆಯ್ಕೆಗಾರರು ಬಂದಿದ್ದಾರೆ’.

ಏಕದಿನ ತಂಡದ ನಾಯಕನಾಗಿ ಮುಂದುವರಿಸುವುದಿಲ್ಲ ಎಂದು ಕೊಹ್ಲಿಗೆ ಬಿಸಿಸಿಐ ಮಾಹಿತಿ:

ಸೌರವ್ ಗಂಗೂಲಿ: ‘ಟೆಸ್ಟ್ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಮತ್ತು ವೈಟ್‌ಬಾಲ್ ಕ್ರಿಕೆಟ್‌ ತಂಡಗಳ ನಾಯಕರಾಗಿ ರೋಹಿತ್ ಶರ್ಮಾ ಅವರನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಬಿಸಿಸಿಐ ಅಧ್ಯಕ್ಷನಾಗಿ ನಾನು ವಿರಾಟ್ ಕೊಹ್ಲಿ ಜೊತೆ ಮಾತನಾಡಿದ್ದೇನೆ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷರೂ ಸಹ ಚರ್ಚಿಸಿದ್ದಾರೆ’ಎಂದು ಸೌರವ್ ಗಂಗೂಲಿ ಹೇಳಿರುವುದಾಗಿ ಎಎನ್‌ಐ ಟ್ವೀಟ್ ಮಾಡಿತ್ತು.

ವಿರಾಟ್ ಕೊಹ್ಲಿ: ‘ನಾಯಕತ್ವ ಬದಲಿಸುವ ನಿರ್ಧಾರದ ಕುರಿತು ಮಾಡಲಾಗಿದೆ ಎಂಬ ಸಂವಹನದ ಕುರಿತಾದ ಹೇಳಿಕೆ ನಿಖರವಾಗಿಲ್ಲ’

‘ಡಿಸೆಂಬರ್ 8ರಂದು ಟೆಸ್ಟ್ ತಂಡದ ಫೋಷಣೆಗೂ ಒಂದೂವರೆ ಗಂಟೆ ಮುನ್ನವಷ್ಟೆ ನನ್ನನ್ನು ಸಂಪರ್ಕಿಸಲಾಗಿದೆ. ದಕ್ಕೂ ಮುನ್ನ, ನಾನು ಟಿ–20 ನಾಯಕತ್ವ ತ್ಯಜಿಸಿದ ಬಳಿಕ ನನಗೆ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ’

‘ನನಗೆ ಮಾಡಲಾಗಿದ್ದ ದೂರವಾಣಿ ಕರೆ ಅಂತ್ಯವಾಗುವುದಕ್ಕೂ ಮುನ್ನ, ಆಯ್ಕೆ ಸಮಿತಿಯ ಐವರು ಸದಸ್ಯರು ನನ್ನನ್ನು ಮುಂದುವರಿಸದಿರಲು ನಿರ್ಧರಿಸಿದ್ದಾರೆ ಎಂದು ತಿಳಿಸಲಾಯಿತು. ಓಕೆ ಫೈನ್ ಎಂದು ಉತ್ತರಿಸಿದೆ’ಎಂದು ಕೊಹ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.