ADVERTISEMENT

ಪ್ರಖರವಾಗಿ ಬೆಳಗಿದ ಶಮಿ; ಗೆದ್ದ ಭಾರತ

ನೇಪಿಯರ್‌ನಲ್ಲಿ ಮಿಂಚಿದ ಕುಲದೀಪ್‌ l ಸರಣಿಯಲ್ಲಿ 1–0 ಮುನ್ನಡೆ l ಶಿಖರ್ ಧವನ್‌ ಅರ್ಧ ಶತಕ

ಪಿಟಿಐ
Published 23 ಜನವರಿ 2019, 20:15 IST
Last Updated 23 ಜನವರಿ 2019, 20:15 IST
ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ   

ನೇಪಿಯರ್: ಆಸ್ಟ್ರೇಲಿಯಾದ ನೆಲದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಸಾಧಿಸಿದ್ದ ಐತಿಹಾಸಿಕ ಗೆಲುವಿನ ಸಂಭ್ರಮವನ್ನು ನ್ಯೂಜಿಲೆಂಡ್‌ನಲ್ಲಿಯೂ ಮುಂದುವರಿಸುವ ಭಾರತ ತಂಡದ ಕನಸಿಗೆ ಬುಧವಾರ ಮೊಹಮ್ಮದ್ ಶಮಿ ಅಡಿಪಾಯ ಹಾಕಿದರು.

ಇಲ್ಲಿಯ ಮೆಕ್‌ಲೀನ್ ಪಾರ್ಕ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶಮಿ (19ಕ್ಕೆ3) ಮೊನಚಾದ ಬೌಲಿಂಗ್‌ ಬಲದಿಂದ ಭಾರತ ತಂಡವು 8 ವಿಕೆಟ್‌ಗಳಿಂದ ಸುಲಭವಾಗಿ ಜಯಿಸಿತು. ಐದು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು 38 ಓವರ್‌ಗಳಲ್ಲಿ 157 ರನ್‌ ಗಳಿಸಿತು. ಆದರೆ ಊಟದ ವಿರಾಮದ ಮುನ್ನ ಪ್ರಖರ ಸೂರ್ಯನ ಬೆಳಕಿನಿಂದಾಗಿ ಸುಮಾರು 25 ನಿಮಿಷಗಳ ಆಟ ಸ್ಥಗಿತವಾಯಿತು. ಅದರಿಂದಾಗಿ ಡಕ್ವರ್ಥ್–ಲೂಯಿಸ್‌ ನಿಯಮದ ಅನ್ವಯ ಭಾರತಕ್ಕೆ 156 ರನ್‌ಗಳ ಗುರಿ ನೀಡಲಾಯಿತು. 34.5 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡ ತಂಡವು ಗುರಿ ಸಾಧಿಸಿತು. ಶಿಖರ್ ಧವನ್ (ಅಜೇಯ 75) ಮತ್ತು ವಿರಾಟ್ ಕೊಹ್ಲಿ (45 ರನ್) ಗೆಲುವನ್ನು ಸುಲಭಗೊಳಿಸಿದರು.

ADVERTISEMENT

ವೇಗದ 100 ವಿಕೆಟ್: ಭಾರತದ ಮೊಹಮ್ಮದ್‌ ಶಮಿ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ ನೂರು ವಿಕೆಟ್ ಗಳಿಸಿದ ಸಾಧನೆ ಮಾಡಿದರು. ಇನಿಂಗ್ಸ್‌ನ ಎರಡನೇ ಮತ್ತು ನಾಲ್ಕನೇ ಓವರ್ ಬೌಲಿಂಗ್ ಮಾಡಿದ ಶಮಿ ಅವರು ಕ್ರಮವಾಗಿ ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಮನ್ರೊ ವಿಕೆಟ್ ಕಬಳಿಸಿದರು. ಇದರೊಂದಿಗೆ ‘ಶತಕ’ ಸಾಧಿಸಿದರು. ಇದು ಅವರ 56ನೇ ಪಂದ್ಯ. ಈ ಮೊದಲು ಎಡಗೈ ಮಧ್ಯಮವೇಗಿ ಇರ್ಫಾನ್ ಪಠಾಣ್ ಅವರು 59 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಅವರ ನಂತರದ ಸ್ಥಾನದಲ್ಲಿ ಜಹೀರ್ ಖಾನ್ (65), ಅಜಿತ್ ಅಗರ್ಕರ್ (67) ಮತ್ತು ಜಾವಗಲ್ ಶ್ರೀನಾಥ್ (68) ಅವರಿದ್ದಾರೆ.

ಶಮಿಯೊಂದಿಗೆ ಉತ್ತಮ ದಾಳಿ ನಡೆಸಿದ ಸ್ಪಿನ್ನರ್ ಕುಲದೀಪ್ ಯಾದವ್ (39ಕ್ಕೆ4) ಮತ್ತು ಯಜುವೇಂದ್ರ ಚಾಹಲ್
(43ಕ್ಕೆ2) ನ್ಯೂಜಿಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು. ಕೇನ್ ವಿಲಿಯಮ್ಸನ್ (64; 81ಎಸೆತ, 7ಬೌಂಡರಿ) ಅರ್ಧಶತಕ ಗಳಿಸಿದರು.

ಆಟ ನಿಲ್ಲಿಸಿದ ಸೂರ್ಯನ ಪ್ರಖರತೆ!

ಮಂದ ಬೆಳಕು, ಮಳೆಯ ಕಾರಣಗಳಿಂದ ಕ್ರಿಕೆಟ್‌ ಪಂದ್ಯಗಳು ಸ್ಥಗಿತವಾದ ಉದಾಹರಣೆಗಳು ಹಲವಾರಿವೆ. ಆದರೆ ಸೂರ್ಯನ ಬೆಳಕು ಹೆಚ್ಚಾಗಿ ಕೆಲಹೊತ್ತು ಆಟ ಸ್ಥಗಿತವಾದ ಘಟನೆ ಬುಧವಾರ ನಡೆಯಿತು

ಪಂದ್ಯದಲ್ಲಿ ರಾತ್ರಿ ಭೋಜನ ವಿರಾಮದ ನಂತರ ಈ ಘಟನೆ ನಡೆಯಿತು. ಅಸ್ತಂಗತವಾಗುತ್ತಿದ್ದ ಸೂರ್ಯನ ಬೆಳಕು ಪ್ರಖರಗೊಂಡಿತು. ಕಣ್ಣುಕೊರೈಸುವ ಬೆಳಕಿನಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟವಿದ್ದ ಕಾರಣ ಅಂಪೈರ್ ಶಾನ್ ಜಾರ್ಜ್ ಆಟವನ್ನು ಸ್ವಲ್ಪ ಹೊತ್ತು ಸ್ಥಗಿತಗೊಳಿಸಿದರು.ಈ ಸಂದರ್ಭದಲ್ಲಿ ಭಾರತ ತಂಡವು 10 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 44 ರನ್ ಗಳಿಸಿತ್ತು.

ಸುಮಾರು 25 ನಿಮಿಷಗಳ ನಂತರ ಆಟವನ್ನು ಹೊನಲು ಬೆಳಕಿನಲ್ಲಿ ಮರು ಆರಂಭವಾಯಿತು. ಮಳೆಯಲ್ಲಿದಿದ್ದರೂ ಡಕ್ವರ್ಥ್ ಲೂಯಿಸ್ ನಿಯಮ ಅನ್ವಯ ಗುರಿ ನಿಗದಿ ಮಾಡಲಾಯಿತು!

ನ್ಯೂಜಿಲೆಂಡ್ ಮೈದಾನಗಳಲ್ಲಿ ಇಂತಹ ಘಟನೆಗಳು ಸಹಜ. ದೇಶಿ ಪಂದ್ಯಗಳು ನಡೆಯುವಾಗಲೆಲ್ಲ ಈ ಘಟನೆಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.