ADVERTISEMENT

2011ರ ವಿಶ್ವಕಪ್: ಪ್ರಧಾನಿಗಳ ಉಪಸ್ಥಿತಿಯಲ್ಲಿ ರಂಗೇರಿದ ಕ್ರಿಕೆಟ್‌ ವೈಭವ

​ಪ್ರಜಾವಾಣಿ ವಾರ್ತೆ
Published 25 ಮೇ 2019, 17:20 IST
Last Updated 25 ಮೇ 2019, 17:20 IST
ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ವೈಭವ–ಪ್ರಜಾವಾಣಿ ಚಿತ್ರ
ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ವೈಭವ–ಪ್ರಜಾವಾಣಿ ಚಿತ್ರ   

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್ ಪಂದ್ಯ ಎಂದರೆ ಅದೊಂದು ಹಬ್ಬವೇ ಸರಿ. ವಿಶ್ವಕಪ್‌ ಟೂರ್ನಿಯಲ್ಲಿ ಈ ಎರಡು ತಂಡಗಳು ಸೆಣಸಾಡಿದರೆ...? ಅದು ಕೂಡ ತವರಿನಲ್ಲಿ...? ಮೊಹಾಲಿಯಲ್ಲಿ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಕ್ರಿಕೆಟ್‌ನ ವೈಭವ ರಂಗೇರಿತು. ಭಾರತದ ಪ್ರಧಾನಿ ಮನಮೋಹನ್ ಸಿಂಗ್‌ ಮತ್ತು ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರು ಗಣ್ಯರ ಸಾಲಿನಲ್ಲಿ ಇದ್ದ ಕಾರಣ ಪೈಪೋಟಿ ಕ್ಷಣ ಕ್ಷಣವೂ ರೋಚಕವಾಗಿತ್ತು.

* ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಸ್ಫೋಟಕ ಆರಂಭದ ಕಾರಣ ಭಾರತ ಒಂಬತ್ತು ವಿಕೆಟ್‌ಗಳಿಗೆ 260 ರನ್‌ ಗಳಿಸಿತ್ತು. ಸೆಹ್ವಾಗ್ 38 ರನ್‌ ಗಳಿಸಿ ಔಟಾಗಿದ್ದರೆ, ಸಚಿನ್ 115 ಎಸೆತಗಳಲ್ಲಿ 85 ರನ್‌ ಗಳಿಸಿದ್ದರು. 11 ಬೌಂಡರಿಗಳು ಅವರ ಬ್ಯಾಟ್‌ನಿಂದ ಸಿಡಿದಿದ್ದವು.

* ಅಗ್ರ ಕ್ರಮಾಂಕದ ಮೂವರು ಉತ್ತಮ ಬ್ಯಾಟಿಂಗ್ ಮಾಡಿದರೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಪಾಕಿಸ್ತಾನ ಬೌಲರ್‌ಗಳು ಕಟ್ಟಿ ಹಾಕಿದರು. ನಂತರ ಚೇತರಿಸಿಕೊಂಡ ಭಾರತ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ ಅವರ ಉತ್ತಮ ಆಟದ ನೆರವಿನಿಂದ ಸವಾಲಿನ ಮೊತ್ತ ಪೇರಿಸಿತು.

ADVERTISEMENT

* ಗುರಿ ಬೆನ್ನತ್ತಿದ ಪಾಕಿಸ್ತಾನ ಮೊಹಮ್ಮದ್ ಹಫೀಜ್ ಮತ್ತು ಅಸಾದ್ ಶಫೀಕ್ ಅವರ ಕೆಚ್ಚೆದೆಯ ಬ್ಯಾಟಿಂಗ್‌ ನೆರವಿನಿಂದ ಗೆಲುವಿನತ್ತ ಹೆಜ್ಜೆ ಹಾಕಿತ್ತು. ಅರ್ಧಶತಕ ಗಳಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮಿಸ್ಬಾ ಉಲ್ ಹಕ್ ಭರವಸೆ ಮೂಡಿಸಿದ್ದರು. ಆದರೆ ನಂತರ ಭಾರತ ಹಿಡಿತ ಬಿಗಿಗೊಳಿಸಿ ಜಯವನ್ನು ಕಸಿದುಕೊಂಡಿತು.

* ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಸಮಬಲದ ಹೋರಾಟ ಸಾಧಿಸುವರು ಎಂದು ಪಂದ್ಯಕ್ಕೂ ಮೊದಲು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದರು. ಈ ಭವಿಷ್ಯ ನುಡಿಗಳಿಗೆ ತಕ್ಕಂತೆ ಪಂದ್ಯದಲ್ಲಿ ಎರಡೂ ತಂಡಗಳ
ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಮೆರೆದಾಡಿದರು. ಪಾಕಿಸ್ತಾನದ ವಹಾಬ್ ರಿಯಾಜ್ ಐದು ವಿಕೆಟ್‌ಗಳನ್ನು ಕಬಳಿಸಿದರೆ, ಸಯೀದ್ ಅಜ್ಮಲ್ ಎರಡು ವಿಕೆಟ್ ಬುಟ್ಟಿಗೆ ಹಾಕಿಕೊಂಡರು. ಭಾರತದ ಜಹೀರ್ ಖಾನ್, ಆಶಿಶ್ ನೆಹ್ರಾ, ಮುನಾಫ್ ಪಟೇಲ್, ಹರಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ತಲಾ ಎರಡು ವಿಕೆಟ್ ತಮ್ಮದಾಗಿಸಿಕೊಂಡರು.

* ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳ ಮೇಲಾಟದಲ್ಲಿ ಗೆದ್ದ ಭಾರತದ ಸಚಿನ್ ತೆಂಡೂಲ್ಕರ್ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು. ಈ ಗೆಲುವಿನೊಂದಿಗೆ ಭಾರತ ಮುಂಬೈನಲ್ಲಿ ಶ್ರೀಲಂಕಾ ಎದುರು ಫೈನಲ್‌ ಪಂದ್ಯ ಆಡಲು ಸಿದ್ಧವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.