ADVERTISEMENT

ಬೌಲರ್‌ಗಳು ಬೆರಳು ನೆಕ್ಕುವ ಚಟ ಬಿಡುವುದು ಕಷ್ಟ: ಗಿಲೆಸ್ಪಿ

ಪಿಟಿಐ
Published 14 ಜೂನ್ 2020, 7:11 IST
Last Updated 14 ಜೂನ್ 2020, 7:11 IST
ಜೇಸನ್ ಗಿಲೆಸ್ಪಿ
ಜೇಸನ್ ಗಿಲೆಸ್ಪಿ   

ಚೆನ್ನೈ: ಕ್ರಿಕೆಟ್‌ನಲ್ಲಿ ಚೆಂಡಿನ ಹೊಳಪು ನಿರ್ವಹಿಸಲು ಎಂಜಲು ಬಳಸುವುದನ್ನು ಐಸಿಸಿ ತಾತ್ಕಾಲಿಕವಾಗಿ ನಿಷೇಧಿಸಿದೆ. ಆದರೆ, ಹಲವು ವರ್ಷಗಳಿಂದ ಎಂಜಲು ಬಳಕೆಗಾಗಿ ಬೌಲರ್‌ಗಳು ಬೆರಳುಗಳನ್ನು ಬಾಯಿಗೆ ಹಾಕಿಕೊಳ್ಳುವ ಚಟವನ್ನು ಬಿಡುವುದು ಅಷ್ಟು ಸುಲಭವೇ?

’ಇಲ್ಲ. ಅಷ್ಟು ಸುಲಭ ಅಲ್ಲ. ಅದೊಂದು ಕಠಿಣ ಸವಾಲು‘ ಎಂದಿದ್ದಾರೆ ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಜೇಸನ್ ಗಿಲೆಸ್ಪಿ.

’ಕೊರೊನಾ ನಂತರದ ಕ್ರಿಕೆಟ್‌ನಲ್ಲಿ ಆಟಗಾರರು ಮತ್ತು ವೇಗದ ಬೌಲರ್‌ಗಳು ತಾವು ರೂಢಿಸಿಕೊಂಡಿರುವ ಕೆಲವು ಹವ್ಯಾಸಗಳನ್ನು ಹೇಗೆ ನಿಯಂತ್ರಿಸುತ್ತಾರೆ ನೋಡಬೇಕು. ಹಲವು ವರ್ಷಗಳಿಂದ ಚೆಂಡಿಗೆ ಎಂಜಲು ಹಚ್ಚುವುದು ರೂಢಿಯಾಗಿರುತ್ತದೆ. ಬೌಲಿಂಗ್ ಮಾಡುವಾಗ ನಮಗರಿವಿಲ್ಲದಂತೆ ನಮ್ಮ ಕೈಬೆರಳುಗಳನ್ನು ಬಾಯಿಗೆ ಹಾಕಿ ಎಂಜಲು ತೆಗೆದು ಚೆಂಡಿಗೆ ಒರೆಸುತ್ತೇವೆ. ಈಗ ಹಾಗೆ ಮಾಡುವಂತಿಲ್ಲ‘ ಎಂದು ಯೂಟ್ಯೂಬ್‌ನ ಫ್ಯಾನ್‌ ಪ್ಲೇ ಸ್ಪೋರ್ಟ್ಸ್‌ ರೂಲರ್ ಇನ್‌ಸೈಡ್ ಔಟ್ ವಿತ್ ಬ್ಯಾಗ್ಸ್‌ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ.

ADVERTISEMENT

’ಬಹುತೇಕ ಎಲ್ಲ ದೇಶಗಳ ಕ್ರಿಕೆಟ್ ಬೌಲರ್‌ಗಳು ಬೆರಳು ನೆಕ್ಕುವುದನ್ನು ರೂಢಿಸಿಕೊಂಡಿರುತ್ತಾರೆ. ಅದರಲ್ಲೂ ಬಹಳಷ್ಟು ಮಂದಿ ಚೆಂಡಿನ ಮೇಲೆ ಬೆರಳುಗಳ ಹಿಡಿತವನ್ನು ಸಾಧಿಸಲೂ ಬೆರಳು ನೆಕ್ಕಿ ಹಸಿ ಮಾಡಿಕೊಳ್ಳುತ್ತಾರೆ. ಇಂತಹ ರೂಢಿಗಳನ್ನು ನಿಯಂತ್ರಿಸಿಕೊಳ್ಳುವುದು ದೊಡ್ಡ ಸವಾಲಾಗಲಿದೆ‘ ಎಂದು ಜೇಸನ್ ಹೇಳಿದ್ದಾರೆ.

71 ಟೆಸ್ಟ್ ಪಂದ್ಯಗಳನ್ನು ಆಡಿರುವ ವೇಗದ ಬೌಲರ್ ಜೇಸನ್ 259 ವಿಕೆಟ್‌ಗಳನ್ನು ಗಳಿಸಿದ್ದಾರೆ.

’ಪಂದ್ಯಗಳಲ್ಲಿ ಮಿಡ್ ಆಫ್‌ ಅಥವಾ ಸ್ಲಿಪ್‌ನಲ್ಲಿರುವ ಫೀಲ್ಡರ್‌ಗೆ ಸಾಮಾನ್ಯವಾಗಿ ಚೆಂಡಿನ ಹೊಳಪು ನಿರ್ವಹಣೆಯ ಹೊಣೆ ನೀಡಲಾಗಿರುತ್ತದೆ. ಬೌಲರ್‌ ಕೈಸೇರುವ ಮುನ್ನ ಚೆಂಡು ಕೆಲವು ಫೀಲ್ಡರ್‌ಗಳಿಂದ ಉಜ್ಜಿಸಿಕೊಂಡು ಕೈಬದಲಾಗಿ ಬಂದಿರುತ್ತದೆ. ಮುಂದಿನ ದಿನಗಳಲ್ಲಿ ಈ ನಿಷೇಧ ನಿಯಮದ ಉಲ್ಲಂಘನೆಗಳು ಖಂಡಿತವಾಗಿಯೂ ಆಗುತ್ತವೆ. ಅದರಲ್ಲಿ ಸಂಶಯವೇ ಬೇಡ‘ ಎಂದು ಜೇಸನ್ ಹೇಳಿದ್ದಾರೆ.

’ಕ್ರಿಕೆಟ್‌ ಪಂದ್ಯಗಳು ನಡೆಯದ ಹೊರತು ಈ ನಿಯಮಗಳ ನಿಜವಾದ ಸಾಧಕ–ಬಾಧಕಗಳು ಗೊತ್ತಾಗುವುದಿಲ್ಲ. ಆದ್ದರಿಂದ ಕಾದು ನೋಡಬೇಕು. ನಂತರ ವಿಶ್ಲೇಷಿಸಬೇಕು‘ ಎಂದು ಅಭಿಪ್ರಾಯಪಟ್ಟಿದ್ದಾರೆ.

’ಇನ್ನೊಂದು ಆಯಾಮದಲ್ಲಿ ಯೋಚಿಸಿದರೆ, ಈ ನಿಯಮವು ಬೌಲರ್‌ಗಳನ್ನು ಹೊಸ ಪ್ರಯೋಗ ಮಾಡಲು ಪ್ರೇರೆಪಿಸುತ್ತದೆ. ತಮ್ಮ ಬೌಲಿಂಗ್ ಅನ್ನು ಉತ್ತಮಗೊಳಿಸಿಕೊಳ್ಳಲು ಪರ್ಯಾಯ ಮಾರ್ಗಗಳನ್ನು ಕಂಡುಹಿಡಿಯುವ ಅನಿವಾರ್ಯತೆ ಸೃಷ್ಟಿಸುತ್ತದೆ. ಚೆಂಡನ್ನು ಗ್ರಿಪ್ ಮಾಡುವ ವಿಧಾನಗಳಲ್ಲಿ ಪ್ರಯೋಗಗಳಾಗಬಹುದು. ಸ್ವಿಂಗ್ ಪರಿಣಾಮ ಹೆಚ್ಚಿಸಲು ವೇಗ ಮತ್ತು ಚೆಂಡನ್ನು ಪಿಚ್ ಮಾಡುವ ರೀತಿ ಬೇರೆ ಯಾಗಬಹುದು‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.