ADVERTISEMENT

ಓಲ್ಡ್‌ ಟ್ರಾಫರ್ಡ್ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಎಂಜಿನಿಯರ್‌, ಲಾಯ್ಡ್‌ ಹೆಸರು

ಲ್ಯಾಂಕೇಶೈರ್‌ ಕ್ಲಬ್‌ನಿಂದ ಗೌರವ

ಪಿಟಿಐ
Published 21 ಜುಲೈ 2025, 12:27 IST
Last Updated 21 ಜುಲೈ 2025, 12:27 IST
<div class="paragraphs"><p>ಓಲ್ಡ್‌ ಟ್ರಾಫರ್ಡ್ ಕ್ರೀಡಾಂಗಣ</p></div>

ಓಲ್ಡ್‌ ಟ್ರಾಫರ್ಡ್ ಕ್ರೀಡಾಂಗಣ

   

ಪಿಟಿಐ ಚಿತ್ರ

ಮ್ಯಾಂಚೆಸ್ಟರ್: ಇಲ್ಲಿನ ಹೆಗ್ಗುರುತಾದ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಭಾರತ ತಂಡದ ಮಾಜಿ ವಿಕೆಟ್‌ ಕೀಪರ್ ಫರೂಖ್ ಎಂಜಿನಿಯರ್ ಮತ್ತು ವೆಸ್ಟ್‌ ಇಂಡೀಸ್‌ನ ದಿಗ್ಗಜ ಬ್ಯಾಟರ್‌ ಕ್ಲೈವ್‌ ಲಾಯ್ಡ್‌ ಅವರ ಹೆಸರಿಟ್ಟು ಗೌರವಿಸಲು ಲ್ಯಾಂಕೇಶೈರ್‌ ಕೌಂಟಿ ತೀರ್ಮಾನಿಸಿದೆ.

ADVERTISEMENT

ಬುಧವಾರ ಆರಂಭವಾಗುವ ಭಾರತ ಮತ್ತು ಇಂಗ್ಲೆಂಡ್‌ ತಂಡಗಳ ನಡುವೆ ನಾಲ್ಕನೇ ಟೆಸ್ಟ್‌ ಸಂದರ್ಭದಲ್ಲಿ, ಈ ದಿಗ್ಗಜರ ಹೆಸರನ್ನಿಡಲಾಗುವುದು. ಇವರಿಬ್ಬರು ಕ್ಲಬ್‌ಗೆ ನೀಡಿದ ಕಾಣಿಕೆ ಗುರುತಿಸಿ ಈ ಗೌರವ ಸಲ್ಲಿಸಲಾಗುತ್ತಿದೆ. ಸುಮಾರು ಒಂದು ದಶಕ ಕಾಲ ಎಂಜಿನಿಯರ್ ಅವರು ಲ್ಯಾಂಕೇಶೈರ್‌ಗೆ ಆಡಿದ್ದರು. ಲಾಯ್ಡ್‌ ಅವರು ಎರಡು ದಶಕಗಳ ಕಾಲ ಈ ಕ್ಲಬ್‌ ಪ್ರತಿನಿಧಿಸಿದ್ದರು.

87 ವರ್ಷ ವಯಸ್ಸಿನ ಎಂಜಿನಿಯರ್‌, 1968 ರಿಂದ 1976ರ ಅವಧಿಯಲ್ಲಿ ಕ್ಲಬ್ ಪರ 175 ಪಂದ್ಯಗಳನ್ನಾಡಿದ್ದು,  5942 ರನ್, 429 ಕ್ಯಾಚ್‌ ಹಿಡಿದಿದ್ದಾರೆ. ಹಾಗೂ 35 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಅವರು ತಂಡಕ್ಕೆ ಸೇರ್ಪಡೆಯಾಗುವ 15 ವರ್ಷಗಳ ಮೊದಲ ಈ ಕ್ಲಬ್ ಯಾವುದೇ ಪ್ರಮುಖ ಪ್ರಶಸ್ತಿ ಗೆದ್ದಿರಲಿಲ್ಲ. ಆದರೆ ಅವರ ಆಟದಿಂದ 1970 ರಿಂದ 1975ರ ಅಧಿಯಲ್ಲಿ ತಂಡ ನಾಲ್ಕು ಬಾರಿ ಜಿಲೈಟ್‌ ಕಪ್‌ ಗೆದ್ದುಕೊಂಡಿತು.

ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಎಂಜಿನಿಯರ್ ಅವರು ದೀರ್ಘ ಕಾಲ ಆಡಿದ್ದರೂ ಅಲ್ಲಿ ಅವರ ಹೆಸರಿನ ಸ್ಟ್ಯಾಂಡ್‌ ಇಲ್ಲ ಎಂಬುದು ಕುತೂಹಲದ ಸಂಗತಿ. ನಿವೃತ್ತಿಯ ನಂತರ ಎಂಜಿನಿಯರ್ ಅವರು ಮ್ಯಾಂಚೆಸ್ಟರ್‌ನಲ್ಲೇ ನೆಲೆಸಿದ್ದಾರೆ.

ಖಾಸಗಿ ಭೇಟಿಗಾಗಿ ಇಲ್ಲಿಗೆ ಬಂದಿರುವ  ಭಾರತ ತಂಡದ ಮಾಜಿ ನಾಯಕ ದಿಲೀಪ್‌ ವೆಂಗಸರ್ಕರ್ ಅವರೂ ನಾಮಕರಣ ಸಂದರ್ಭದಲ್ಲಿ ಹಾಜರಿರುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.