ADVERTISEMENT

‘ದೊಡ್ಡ ಇನಿಂಗ್ಸ್‌ ಕಟ್ಟುವ ಸಂಕಲ್ಪ ತೊಟ್ಟಿರುವೆ’: ಕರುಣ್‌ ನಾಯರ್‌

ಪಿಟಿಐ
Published 16 ಆಗಸ್ಟ್ 2025, 16:09 IST
Last Updated 16 ಆಗಸ್ಟ್ 2025, 16:09 IST
ಕರುಣ್‌ ನಾಯರ್‌
ಕರುಣ್‌ ನಾಯರ್‌   

ಬೆಂಗಳೂರು: ‘ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಸರಣಿಯಲ್ಲಿ ನನ್ನ ಆಟವು ಹತಾಶೆ ಮೂಡಿಸಿದ್ದು ನಿಜ. ಆದರೆ, ಒಳ್ಳೆಯ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವ  ದೃಢಸಂಕಲ್ಪವನ್ನು ಆ ಸರಣಿಯು ನನ್ನಲ್ಲಿ ಮೂಡಿಸಿದೆ’ ಎಂದು ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ಬ್ಯಾಟರ್‌ ಕರುಣ್‌ ನಾಯರ್‌ ಹೇಳಿದ್ದಾರೆ.

‘ಇಂಗ್ಲೆಂಡ್‌ ಎದುರಿನ ಸರಣಿಯುದ್ದಕ್ಕೂ ಉತ್ತಮವಾಗಿಯೇ ಇನಿಂಗ್ಸ್‌ ಆರಂಭಿಸಿದ್ದೆ. ಆದರೆ, ಅವುಗಳನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ಎಡವಿದೆ. 30–40ರನ್‌ಗಳ ಆಸುಪಾಸಿನಲ್ಲಿ ವಿಕೆಟ್‌ ಕಳೆದುಕೊಂಡಾಗ ಹತಾಶೆಗೊಳಗಾಗುತ್ತಿದ್ದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಲವರೊಂದಿಗೆ ಚರ್ಚಿಸಿದ್ದೇನೆ. ಮುಂದೆ ದೊರೆಯುವ ಅವಕಾಶಗಳಲ್ಲಿ ನನಗೆ ಅದು ನೆರವಾಗಲಿದೆ’ ಎಂದು ಕರುಣ್‌ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮುಂಬರುವ ಸರಣಿಗಳಿಗೆ ತಂಡಕ್ಕೆ ಆಯ್ಕೆಯಾಗುವ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸದ್ಯ, ಫಿಟ್‌ನೆಸ್‌ ಕಾಯ್ದುಕೊಳ್ಳುವುದರ ಜೊತೆಗೆ ಕೌಶಲಗಳನ್ನು ಸುಧಾರಿಸಿಕೊಳ್ಳುವುದರ ಬಗ್ಗೆಯಷ್ಟೇ ಆಲೋಚಿಸುತ್ತಿರುವೆ ಎಂದು 34 ವರ್ಷದ ಕರ್ನಾಟಕದ ಆಟಗಾರ ತಿಳಿಸಿದ್ದಾರೆ.

ADVERTISEMENT

ದೇಶಿ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡಕ್ಕೆ ಮರಳುತ್ತಿರುವ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ವೈಯಕ್ತಿಕ ಕಾರಣಗಳಿಂದಾಗಿ ವಿದರ್ಭ ತಂಡವನ್ನು ತೊರೆಯುವ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಈ ಬಗ್ಗೆ ಆಡಳಿತ ಮಂಡಳಿಗೆ ಮನವರಿಕೆ ಮಾಡಿಕೊಟ್ಟಿರುವೆ’ ಎಂದರು.

8 ವರ್ಷಗಳ ಬಳಿಕ ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿದ್ದ ಕರುಣ್, ಇಂಗ್ಲೆಂಡ್‌ ಪ್ರವಾಸದಲ್ಲಿ ಏಕೈಕ ಅರ್ಧಶತಕ ಗಳಿಸಿದ್ದರು. ಎಂಟು ಇನಿಂಗ್ಸ್‌ಗಳಲ್ಲಿ 25.62ರ ಸರಾಸರಿಯಲ್ಲಿ 205 ರನ್‌ಗಳನ್ನಷ್ಟೇ ಗಳಿಸಿ, ನಿರಾಶೆ ಅನುಭವಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.