ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್‌ನ ಮೂರನೇ ಆವೃತ್ತಿಯ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಿದ್ದ 150 ರನ್‌ಗಳ ಸಾಧಾರಣ ಗುರಿಯನ್ನು ಸಮರ್ಥವಾಗಿ ತಡೆದಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಬೌಲರ್‌ಗಳ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಹರ್ಮನ್‌ಪ್ರೀತ್ (66;44ಎ) ಅವರ ಆಕರ್ಷಕ ಅರ್ಧಶತಕದ ಬಲದಿಂದ ಮುಂಬೈ ತಂಡವು 7 ವಿಕೆಟ್‌ಗೆ 149 ರನ್ ಗಳಿಸಿತ್ತು. ನಂತರ ಬೌಲರ್‌ಗಳು ಸಾಂಘಿಕ ದಾಳಿ ನಡೆಸಿ ಕ್ಯಾಪಿಟಲ್ಸ್ ತಂಡವನ್ನು 9 ವಿಕೆಟ್‌ಗೆ 141 ರನ್‌ಗಳಿಗೆ ಕಟ್ಟಿ ಹಾಕಿದ್ದರು. ನಾಟ್ ಶಿವರ್ ಬ್ರಂಟ್ (30ಕ್ಕೆ 3), ಅಮೆಲಿಯಾ ಕೆರ್ (25ಕ್ಕೆ 2) ಮತ್ತು ಶಬ್ನಿಂ ಇಸ್ಮಾಯಿಲ್ (15ಕ್ಕೆ 1) ಅವರು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
‘ಲೆಕ್ಕಾಚಾರದಂತೆ ರನ್ ಗಳಿಸಲು ನಮಗೆ ಸಾಧ್ಯವಾಗಲಿಲ್ಲ. ನಾವು ಗಳಿಸಿದ 149 ರನ್ ಉತ್ತಮ ಮೊತ್ತವಾಗಿರಲಿಲ್ಲ. ನಮ್ಮ ಬೌಲರ್‌ಗಳು ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ದಾಳಿ ನಡೆಸಿದರು. ಈ ಗೆಲುವಿನ ಸಂಪೂರ್ಣ ಶ್ರೇಯ ಬೌಲರ್‌ಗಳಿಗೆ ಸಲ್ಲಬೇಕು’ ಎಂದು ಪಂದ್ಯದ ನಂತರ ಟ್ರೋಫಿ ಪ್ರದಾನದ ವೇಳೆ ಪ್ರತಿಕ್ರಿಯಿಸಿದರು.
‘ಪವರ್‌ಪ್ಲೇ ಅವಧಿಯಲ್ಲೇ ತಂಡಕ್ಕೆ ಮೇಲುಗೈ ಒದಗಿಸುವ ಗುರಿ ಬೌಲರ್‌ಗಳ ಮುಂದಿತ್ತು. ಅದರಂತೆ ಶಬ್ನಿಂ ಮತ್ತು ಬ್ರಂಟ್ ಅವರು ಪ್ರಮುಖ ಎರಡು ವಿಕೆಟ್ ಪಡೆದು ಎದುರಾಳಿ ತಂಡಕ್ಕೆ ಆರಂಭದಲ್ಲೇ ಪೆಟ್ಟು ನೀಡಿದರು. ತಂಡದ ಪ್ರತಿಯೊಬ್ಬ ಬೌಲರ್‌ಗಳ ಆಟದ ಬಗ್ಗೆ ನಿಜವಾಗಿಯೂ ಸಂತೋಷವಾಗಿದೆ’ ಎಂದು ಹೇಳಿದರು.
ಮುಂಬೈ ತಂಡವು 8 ರನ್‌ಗಳಿಂದ ಡೆಲ್ಲಿ ತಂಡವನ್ನು ಮಣಿಸಿ ಎರಡನೇ ಬಾರಿ ಕಿರೀಟಕ್ಕೆ ಮುತ್ತಿಕ್ಕಿತು. 2023ರ ಮೊದಲ ಆವೃತ್ತಿಯಲ್ಲೂ ಮುಂಬೈ ಚಾಂಪಿಯನ್ ಆಗಿತ್ತು. ಡೆಲ್ಲಿ ತಂಡವು ಸತತ ಮೂರನೇ ಬಾರಿ ಫೈನಲ್‌ನಲ್ಲಿ ಮುಗ್ಗರಿಸಿತು. ಹರ್ಮನ್‌ಪ್ರೀತ್ ಅವರು ಪಂದ್ಯದ ಆಟಗಾರ್ತಿ ಗೌರವಕ್ಕೆ ಪಾತ್ರವಾದರು.
ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರ ವಿಕೆಟ್ ಬೇಗನೇ ಪತನವಾಗಿದ್ದರಿಂದ ಪಂದ್ಯ ತಿರುವು ಪಡೆದು, ಮುಂಬೈಗೆ ಗೆಲ್ಲಲು ಸಹಕಾರಿಯಾಯಿತು ಎಂದು ಮುಂಬೈ ತಂಡದ ಮುಖ್ಯ ಕೋಚ್ ಶಾರ್ಲೆಟ್ ಎಡ್ವರ್ಡ್ಸ್ ಅಭಿಪ್ರಾಯಪಟ್ಟರು.
ಲ್ಯಾನಿಂಗ್ (13) ಮತ್ತು ಶಫಾಲಿ (4) ಅವರು ತಂಡದ ಮೊತ್ತ 17 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿದ್ದರು.
ಹಲವು ಪಂದ್ಯಗಳಲ್ಲಿ ಲ್ಯಾನಿಂಗ್ ಮತ್ತು ಶಫಾಲಿ ಅವರ ಆರಂಭಿಕ ಜೊತೆಯಾಟ ನಮ್ಮ ತಂಡಕ್ಕೆ ಕಠಿಣ ಸವಾಲಾಗಿತ್ತು. ಅವರ ವಿಕೆಟ್ ಬೇಗನೇ ಪಡೆಯಲು ಸಾಧ್ಯವಾದರೆ ಗೆಲುವು ಸಾಧಿಸಬಹುದು ಎಂಬುದು ನಮಗೆ ತಿಳಿದಿತ್ತು ಎಂದು ಹೇಳಿದರು.
ನಾಯಕಿ ಹರ್ಮನ್‌ಪ್ರೀತ್ ಅವರ ಆಟವನ್ನು ಕೊಂಡಾಡಿದ ಅವರು, ಮತ್ತೊಂದು ಪ್ರಶಸ್ತಿ ಗೆಲ್ಲಬೇಕೆಂಬ ಛಲ ಆಕೆಯ ಆಟದಲ್ಲಿ ವ್ಯಕ್ತವಾಗುತ್ತಿತ್ತು. ಒತ್ತಡದ ಮಧ್ಯೆಯೂ ಉತ್ತಮ ಇನಿಂಗ್ಸ್ ಕಟ್ಟಿದರು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.