ADVERTISEMENT

ನಮ್ಮ ಆಟಗಾರರಿಗೆ ಬಯೋಬಬಲ್ ಸುರಕ್ಷಿತವಾಗಿತ್ತು: ಗ್ರೇಮ್ ಸ್ಮಿತ್‌

ಐಪಿಎಲ್ ಕುರಿತು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯ ನಿರ್ದೇಶಕ ಅಭಿಮತ

ಪಿಟಿಐ
Published 7 ಮೇ 2021, 12:06 IST
Last Updated 7 ಮೇ 2021, 12:06 IST
ಗ್ರೇಮ್ ಸ್ಮಿತ್‌– ಎಎಫ್‌ಪಿ ಚಿತ್ರ
ಗ್ರೇಮ್ ಸ್ಮಿತ್‌– ಎಎಫ್‌ಪಿ ಚಿತ್ರ   

ಜೋಹಾನ್ಸ್‌ಬರ್ಗ್‌: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ರಚಿಸಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಬಯೋಬಬಲ್‌ನಲ್ಲಿ ನಮ್ಮ ದೇಶದ ಆಟಗಾರರು ಸುರಕ್ಷಿತ ಭಾವ ಅನುಭವಿಸಿದ್ದರು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ನಿರ್ದೇಶಕ ಗ್ರೇಮ್ ಸ್ಮಿತ್ ಹೇಳಿದ್ದಾರೆ.

ಬಯೋಬಬಲ್‌ನಲ್ಲಿ ಕೆಲವು ಆಟಗಾರರಿಗೆ ಕೋವಿಡ್‌ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್‌) ಟೂರ್ನಿಯನ್ನು ಮೇ 4ರಂದು ಮುಂದೂಡಲಾಗಿತ್ತು. ಲೀಗ್‌ನಲ್ಲಿ ಭಾಗವಹಿಸಿದ್ದ ದಕ್ಷಿಣ ಆಫ್ರಿಕಾದ 11 ಮಂದಿ ಈಗಾಗಲೇ ಜೋಹಾನ್ಸ್‌ಬರ್ಗ್‌ಗೆ ತೆರಳಿದ್ದಾರೆ.

‘ನಮ್ಮ ಆಟಗಾರರಿಗೆ ಐಪಿಎಲ್‌ ಬಯೋಬಬಲ್‌ ಸುರಕ್ಷಿತ ಎನಿಸಿತ್ತು. ಭಾರತದಲ್ಲಿನ ಜೀವಸುರಕ್ಷಾ ವಾತಾವರಣ ಒಂದು ಉತ್ತಮ ಅನುಭವ. ಕೋವಿಡ್‌ ಬಿಕ್ಕಟ್ಟಿನಲ್ಲಿ ಅವರು ಅಪಾಯಕ್ಕೆ ಸಿಲುಕಲಿಲ್ಲ‘ ಎಂದು ಸುದ್ದಿಗೋಷ್ಠಿಯಲ್ಲಿ ಸ್ಮಿತ್ ನುಡಿದರು.

ADVERTISEMENT

‘ಕೊರೊನಾ ಸೋಂಕು ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವಾಗ ಅಪಾಯ ಸಾಮಾನ್ಯವಾಗಿ ಇರುತ್ತದೆ. ಇದಕ್ಕೆ ಸಂಘಟಕರನ್ನು ದೂಷಿಸುವಂತಿಲ್ಲ. ಒಂದೇ ವೇಳೆ ವೈರಸ್‌ ಬಯೋಬಬಲ್ ಪ್ರವೇಶಿಸಿದರೆ ಏನಾಗಲಿದೆ ಎಂದು ಹೇಳುವುದು ಕಷ್ಟ‘ ಎಂದೂ ಸ್ಮಿತ್ ಪ್ರತಿಪಾದಿಸಿದರು.

ಟೂರ್ನಿಯಲ್ಲಿ ಭಾಗವಹಿಸಿದ್ದ ದಕ್ಷಿಣ ಆಫ್ರಿಕಾದ ಎಲ್ಲ ಆಟಗಾರರಿಗೆ ಸುರಕ್ಷಿತ ಪ್ರಯಾಣ ಖಚಿತಪಡಿಸಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಸ್ಮಿತ್ ಇದೇ ವೇಳೆ ಶ್ಲಾಘಿಸಿದರು.

‘ನಮ್ಮ ಆಟಗಾರರ ದೃಷ್ಟಿಯಿಂದ ನಮ್ಮ ಗಡಿಗಳನ್ನು ಇನ್ನೂ ಬಂದ್ ಮಾಡಿಲ್ಲ. ಹೀಗಾಗಿ ಅವರ ಮರಳುವಿಕೆ ಸುಲಭವಾಯಿತು‘ ಎಂದು ಸ್ಮಿತ್ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.