ADVERTISEMENT

ಆ್ಯಷಸ್ ಟೆಸ್ಟ್‌ ಸರಣಿಯ ಪಿಂಕ್‌ ಡೇ: ನೋವುಂಡ ಬೇಸ್ಟೋಗೆ ಶತಕದ ಸಂಭ್ರಮ

ಬೆ‌ನ್ ಸ್ಟೋಕ್ಸ್‌ ಅರ್ಧಶತಕ; 5ನೇ ವಿಕೆಟ್‌ಗೆ 128 ರನ್‌ಗಳ ಜೊತೆಯಾಟ

ಏಜೆನ್ಸೀಸ್
Published 7 ಜನವರಿ 2022, 13:49 IST
Last Updated 7 ಜನವರಿ 2022, 13:49 IST
ಶತಕ ಗಳಿಸಿ ಸಂಭ್ರಮಿಸಿದ ಜಾನಿ ಬೇಸ್ಟೊ –ಎಎಫ್‌ಪಿ ಚಿತ್ರ
ಶತಕ ಗಳಿಸಿ ಸಂಭ್ರಮಿಸಿದ ಜಾನಿ ಬೇಸ್ಟೊ –ಎಎಫ್‌ಪಿ ಚಿತ್ರ   

ಸಿಡ್ನಿ: ಬ್ಯಾಟಿಂಗ್ ವೈಫಲ್ಯದಿಂದ ಕುಸಿತಕ್ಕೊಳಗಾಗಿ ಫಾಲೊ ಆನ್‌ ಆತಂಕದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಆಸರೆಯಾದ ಜಾನಿ ಬೇಸ್ಟೊ ಮೂರಂಕಿ ಮೊತ್ತ ದಾಟಿದ ನಂತರ ಆಕಾಶದತ್ತ ನೋಟ ಬೀರಿದರು. ಈ ಮೂಲಕ ತಂದೆಯನ್ನು ನೆನೆದುಕೊಂಡರು. ಹೆಬ್ಬೆರಳಿಗೆ ಆದ ಗಾಯವನ್ನೂ ಲೆಕ್ಕಿಸದೆ ಕ್ರೀಸ್‌ನಲ್ಲಿ ಲಂಗರು ಹಾಕಿದ ಅವರು ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಶತಕ ಸಿಡಿಸಿದ ಸಂಭ್ರಮದ ಅಲೆಯಲ್ಲಿ ತೇಲಿದರು.

ಬೇಸ್ಟೊ ಅವರ ಅಮೋಘ ಶತಕ (ಬ್ಯಾಟಿಂಗ್ 103; 140 ಎಸೆತ, 8 ಬೌಂಡರಿ, 3 ಸಿಕ್ಸರ್‌) ಮತ್ತು ಅವರು ಬೆನ್ ಸ್ಟೋಕ್ಸ್‌ (66; 91 ಎ, 9 ಬೌಂ, 1 ಸಿ‌) ಜೊತೆ ಸೇರಿಸಿದ 128 ರನ್‌ಗಳ ಬಲದಿಂದ ಇಂಗ್ಲೆಂಡ್ ತಂಡ ಚೇತರಿಕೆ ಕಂಡಿತು. ಆ್ಯಷಸ್ ಸರಣಿಯ ನಾಲ್ಕನೇ ಪಂದ್ಯದ ಮೂರನೇ ದಿನದಾಟ ಮುಕ್ತಾಯಗೊಂಡಾಗ ಪ್ರವಾಸಿಗರು 7 ವಿಕೆಟ್‌ಗಳಿಗೆ 258 ರನ್ ಗಳಿಸಿದ್ದು ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ ಮೊತ್ತ ಹಿಂದಿಕ್ಕಲು ಇನ್ನೂ 158 ರನ್ ಬೇಕಾಗಿದೆ.

ಮೊದಲ ಮೂರು ಪಂದ್ಯಗಳಲ್ಲಿ ಸೋತಿರುವ ಇಂಗ್ಲೆಂಡ್ ಈ ಪಂದ್ಯದಲ್ಲೂ ಎರಡು ದಿನ ನೀರಸ ಆಟವಾಡಿತ್ತು. ಆಸ್ಟ್ರೇಲಿಯಾ 8ಕ್ಕೆ 416 ರನ್‌ ಗಳಿಸಿ ಮೊದಲ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತ್ತು. ಇಂಗ್ಲೆಂಡ್‌ 36 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಬೆನ್‌ ಸ್ಟೋಕ್ಸ್ ಜೊತೆಗೂಡಿದ ಬೇಸ್ಟೊ 60 ರನ್ ಗಳಿಸಿದ್ದಾಗ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಹೆಬ್ಬೆರಳಿಗೆ ಗಾಯಗೊಂಡು ಕ್ರೀಸ್‌ನಿಂದ ತೆರಳುವ ಸ್ಥಿತಿ ಉಂಟಾಗಿತ್ತು. ಆದರೆ ದಿಟ್ಟತನ ಪ್ರದರ್ಶಿಸಿದ ಅವರು ಬ್ಯಾಟಿಂಗ್ ಮುಂದುವರಿಸಲು ನಿರ್ಧರಿಸಿದರು.

ADVERTISEMENT

ತಂದೆ ಡೇವಿಡ್ ಅವರ ಅಕಾಲ ಮರಣ ಸಂಭವಿಸಿ 24 ವರ್ಷ ತುಂಬಿದ ದಿನದಂದು ನಾಲ್ಕನೇ ಟೆಸ್ಟ್ ಆರಂಭವಾಗಿತ್ತು. ಪ್ರತಿ ವರ್ಷ ಆ್ಯಷಸ್ ಸರಣಿಯ ನಾಲ್ಕನೇ ಟೆಸ್ಟ್‌ನ ಮೂರನೇ ದಿನವನ್ನು ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾ ಅವರ ಪತ್ನಿಯ ನೆನಪಿಗಾಗಿ ‘ಪಿಂಕ್ ಡೇ’ಯನ್ನಾಗಿ ಆಚರಿಸಲಾಗುತ್ತಿದೆ. ಈ ವಿಶಿಷ್ಟ ದಿನದಂದು ಮಿಂಚಿದ ಬೇಸ್ಟೊಗೆ ಉತ್ತಮ ಸಹಕಾರ ನೀಡಿದ ಬೆನ್ ಸ್ಟೋಕ್ಸ್ ಕೂಡ ಗಾಯದ ಸಮಸ್ಯೆಯ ನಡುವೆಯೇ ಕಣಕ್ಕೆ ಇಳಿದಿದ್ದರು. ಬೇಸ್ಟೊ, 2018ರ ನವೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ಕೊನೆಯದಾಗಿ ಶತಕ ಗಳಿಸಿದ್ದರು.

ಕಮಿನ್ಸ್‌, ಬೊಲ್ಯಾಂಡ್ ದಾಳಿ

ಎರಡನೇ ದಿನ ವಿಕೆಟ್ ಕಳೆದುಕೊಳ್ಳದೆ 13 ರನ್ ಗಳಿಸಿದ್ದ ಇಂಗ್ಲೆಂಡ್‌ಗೆ ಶುಕ್ರವಾರ ಬೆಳಿಗ್ಗೆ ಪ್ಯಾಟ್ ಕಮಿನ್ಸ್ ಮತ್ತು ಸ್ಕಾಟ್‌ ಬೊಲ್ಯಾಂಡ್ ಪೆಟ್ಟುಕೊಟ್ಟರು. ಹಸೀಬ್ ಹಮೀದ್‌, ಡೇವಿಡ್ ಮಲಾನ್ ಮತ್ತು ಜೋ ರೂಟ್ ಎರಡಂಕಿ ಮೊತ್ತ ದಾಟದೆ ವಾಪಸಾದರೆ ಜ್ಯಾಕ್ ಕ್ರಾವ್ಲಿ 18 ರನ್ ಗಳಿಸಿ ಔಟಾದರು. 36 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಸ್ಟೋಕ್ಸ್ ಮತ್ತು ಬೇಸ್ಟೊ ಇನಿಂಗ್ಸ್ ಮುನ್ನಡೆಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು. ಸ್ಟೋಕ್ಸ್ ಔಟಾದ ನಂತರ ಜೋಸ್ ಬಟ್ಲರ್ ಶೂನ್ಯಕ್ಕೆ ಮರಳಿದರು. ನಂತರ ಬೇಸ್ಟೊ ಜೊತೆಗೂಡಿದ ಮಾರ್ಕ್‌ ವುಡ್‌ 7ನೇ ವಿಕೆಟ್‌ಗೆ 72 ರನ್‌ಗಳನ್ನು ಸೇರಿಸಿ ಮೊತ್ತವನ್ನು 200ರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ 8ಕ್ಕೆ 416; ಇಂಗ್ಲೆಂಡ್‌ (ಗುರುವಾರ 5 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 13): 70 ಓವರ್‌ಗಳಲ್ಲಿ 7ಕ್ಕೆ 258 (ಬೆನ್‌ ಸ್ಟೋಕ್ಸ್‌ 66, ಜಾನಿ ಬೇಸ್ಟೊ ಬ್ಯಾಟಿಂಗ್ 103, ಮಾರ್ಕ್ ವುಡ್‌ 39, ಜ್ಯಾಕ್ ಲೀಚ್ ಬ್ಯಾಟಿಂಗ್ 4; ಪ್ಯಾಟ್ ಕಮಿನ್ಸ್ 68ಕ್ಕೆ2‌, ಮಿಚೆಲ್ ಸ್ಟಾರ್ಕ್ 49ಕ್ಕೆ1, ಸ್ಕಾಟ್ ಬೊಲ್ಯಾಂಡ್ 25ಕ್ಕೆ2, ಕ್ಯಾಮರಾನ್ ಗ್ರೀನ್ 24ಕ್ಕೆ1, ನೇಥನ್ ಲಯನ್ 71ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.