ADVERTISEMENT

ಪಾಕ್ ಮೂಲದ ವ್ಯಕ್ತಿಗೆ ಟಿಕೆಟ್ ಕೊಡಿಸಿದ ಧೋನಿ

ಪಿಟಿಐ
Published 14 ಜೂನ್ 2019, 20:00 IST
Last Updated 14 ಜೂನ್ 2019, 20:00 IST
ಮ್ಯಾಂಚೆಸ್ಟರ್ ಹೋಟೆಲ್‌ನಲ್ಲಿ ಸಾನಿಯಾ ಮಿರ್ಜಾ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಶಿಕಾಗೊ ಚಾಚಾ ಆಕಾ ಮೊಹಮ್ಮದ್ ಬಶೀರ್–ಪಿಟಿಐ ಚಿತ್ರ
ಮ್ಯಾಂಚೆಸ್ಟರ್ ಹೋಟೆಲ್‌ನಲ್ಲಿ ಸಾನಿಯಾ ಮಿರ್ಜಾ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಶಿಕಾಗೊ ಚಾಚಾ ಆಕಾ ಮೊಹಮ್ಮದ್ ಬಶೀರ್–ಪಿಟಿಐ ಚಿತ್ರ   

ನವದೆಹಲಿ: ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿ ಶಿಕಾಗೋದಲ್ಲಿ ನೆಲೆಸಿರುವ ‘ಚಾಚಾ ಶಿಕಾಗೊ’ ಮೊಹಮ್ಮದ್ ಬಶೀರ್ ಆಕಾ ಅವರಿಗೆ ಭಾರತ ತಂಡದ ಮಹೇಂದ್ರಸಿಂಗ್ ಧೋನಿ ಅವರು ಭಾನುವಾರದ ಪಂದ್ಯದ ಟಿಕೆಟ್‌ಗಳನ್ನು ನೀಡಿದ್ದಾರೆ.

ಅಂದು ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ನಡೆಯಲಿರುವ ಮ್ಯಾಂಚೆಸ್ಟರ್‌ಗೆ ಬಶೀರ್ ಅವರು ಬಂದಿದ್ದಾರೆ.

2011ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕ್ ನಡುವಣ ನಡೆದಿದ್ದ ಸೆಮಿಫೈನಲ್‌ ಪಂದ್ಯಕ್ಕೂ ಬಶೀರ್ ತೆರಳಿದ್ದರು.

ADVERTISEMENT

‘ನಾನು ನಿನ್ನೆ ಇಲ್ಲಿಗೆ ತಲುಪಿದೆ. ಭಾರತ ಮತ್ತು ಪಾಕ್ ನಡುವಣ ಪಂದ್ಯದ ಟಿಕೆಟ್‌ಗೆ 800–900 ಪೌಂಡ್‌ಗಳನ್ನು ನೀಡಲೂ ಜನರು ಸಿದ್ಧರಾಗಿದ್ದಾರೆ. ಆದರೂ ಟಿಕೆಟ್‌ ಲಭ್ಯವಿಲ್ಲ. ಆದರೆ ನನಗೆ ಧೋನಿ ಟಿಕೆಟ್‌ ತೆಗೆದಿಟ್ಟಿದ್ದರು.ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು’ ಎಂದು 63 ವರ್ಷದ ಬಶೀರ್ ಭಾವುಕರಾದರು. ಅವರು ಅಮೆರಿಕ ಪಾಸ್‌ಪೋರ್ಟ್ ಹೊಂದಿದ್ದಾರೆ. ಅವರು ಶಿಕಾಗೊದಲ್ಲಿ ರೆಸ್ಟೋರೆಂಟ್ ಮಾಲೀಕರಾಗಿದ್ದಾರೆ.

‘ಸುಮಾರು ಎಂಟು–ಒಂಬತ್ತು ವರ್ಷಗಳಿಂದ ನನ್ನ ಮತ್ತು ಧೋನಿ ಸ್ನೇಹವಿದೆ. ಅವರು ದೊಡ್ಡ ಆಟಗಾರ. ಅವರಿಗೆ ಕರೆ ಮಾಡುವುದು ಕಮ್ಮಿ. ಆದರೆ, ಸಂದೇಶಗಳ ಮೂಲಕ ಸಂಪರ್ಕದಲ್ಲಿದ್ದೇನೆ. ಬಹಳ ಹಿಂದೆಯೇ ಅವರು ಇಲ್ಲಿಗೆ ಬಂದಾಗ ಈ ಪಂದ್ಯದ ಟಿಕೆಟ್ ಕೊಡುವುದಾಗಿ ಹೇಳಿದ್ದರು. ತಮ್ಮ ಮಾತು ಉಳಿಸಿಕೊಂಡಿದ್ದಾರೆ. ಅವರು ತುಂಬಾ ಒಳ್ಳೆಯ ವ್ಯಕ್ತಿ’ ಎಂದು ಬಶೀರ್ ಹೇಳಿದರು.

ಬಶೀರ್ ಅವರು ಮ್ಯಾಂಚೆಸ್ಟರ್‌ಗೆ ಬಂದ ನಂತರ ಪಾಕಿಸ್ತಾನ ತಂಡವು ತಂಗಿರುವ ಹೋಟೆಲ್‌ಗೆ ತೆರಳಿದರು. ಆಟಗಾರರಾದ ಶೋಯಬ್ ಮಲಿಕ್ ಮತ್ತು ಅವರ ಪತ್ನಿ, ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಆಸಿಫ್ ಅಲಿ, ಸರ್ಫರಾಜ್ ಅಹಮದ್, ಹಸನ್ ಅಲಿ, ಮೊಹಮ್ಮದ್ ಅಮೀರ್ ಅವರನ್ನು ಭೇಟಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.