ADVERTISEMENT

ಪಾಕಿಸ್ತಾನಕ್ಕೆ ಇನಿಂಗ್ಸ್‌ ಜಯ

ರಾವಲ್ಪಿಂಡಿಯ ಮೊದಲ ಟೆಸ್ಟ್‌

ಏಜೆನ್ಸೀಸ್
Published 10 ಫೆಬ್ರುವರಿ 2020, 15:57 IST
Last Updated 10 ಫೆಬ್ರುವರಿ 2020, 15:57 IST

ರಾವಲ್ಪಿಂಡಿ: ವೇಗ ಮತ್ತು ಸ್ಪಿನ್ ದಾಳಿಯೆದುರು ತತ್ತರಿಸಿದ ಬಾಂಗ್ಲಾದೇಶ, ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ನಾಲ್ಕನೇ ದಿನವಾದ ಸೋಮವಾರ ಪಾಕಿಸ್ತಾನ ತಂಡದ ಎದುರು ಇನಿಂಗ್ಸ್‌ ಮತ್ತು 44 ರನ್‌ಗಳಿಂದ ಸೋಲನುಭವಿಸಿತು.

ಆತಿಥೇಯರು ಎರಡು ಟೆಸ್ಟ್‌ಗಳ ಸರಣಿಯಲ್ಲಿ 1–0 ಮುನ್ನಡೆ ಪಡೆದರು. ಈ ಗೆಲುವಿನಿಂದಪಾಕಿಸ್ತಾನ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ತನ್ನ ಖಾತೆಗೆ 60 ಪಾಯಿಂಟ್ಸ್ ಸೇರಿಸಿಕೊಂಡಿತು. ಒಟ್ಟಾರೆ 140 ಪಾಯಿಂಟ್ಸ್‌ ಸಂಗ್ರಹಿಸಿದೆ.

ಭಾರತ, 9 ತಂಡಗಳ ಚಾಂಪಿಯನ್‌ಷಿಪ್‌ನಲ್ಲಿ 360 ಪಾಯಿಂಟ್ಸ್‌ ಸಂಗ್ರಹಿಸಿ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ (246) ಮತ್ತು ಇಂಗ್ಲೆಂಡ್‌ (146) ನಂತರದ ಸ್ಥಾನಗಳಲ್ಲಿವೆ.

ADVERTISEMENT

ಭಾನುವಾರ ದಿನದಾಟ ಮುಗಿದಾಗ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 126 ರನ್‌ ಗಳಿಸಿದ್ದ ಬಾಂಗ್ಲಾದೇಶ ನಾಲ್ಕನೇ ದಿನ ಹೆಚ್ಚು ಪ್ರತಿರೋಧ ತೋರದೇ 90 ನಿಮಿಷಗಳ ಆಟದಲ್ಲಿ 168 ರನ್‌ಗಳಿಗೆ ಆಲೌಟ್‌ ಆಯಿತು.

ಮೂರನೇ ದಿನದಾಟದ ಕೊನೆಯ ಅವಧಿಯಲ್ಲಿ ಹ್ಯಾಟ್ರಿಕ್‌ ಪಡೆದು, ಈ ಗೌರವಕ್ಕೆ ಪಾತ್ರರಾದ ಅತಿ ಕಿರಿಯ ಬೌಲರ್‌ ಎನಿಸಿದ್ದ ನಸೀಮ್‌ ಶಾ (16 ವರ್ಷ, 359 ದಿನ) ಅವರಿಗೆ ಪಂದ್ಯ ಶ್ರೇಷ್ಠ ಪುರಸ್ಕಾರ ನೀಡಲಾಯಿತು. ಪಕ್ಕೆಲುಬು ನೋವಿನಿಂದ ಮೈದಾನದಿಂದ ನಿರ್ಗಮಿಸುವ ಮೊದಲು ಅವರು 26 ರನ್ನಿಗೆ 4 ವಿಕೆಟ್‌ ಪಡೆದಿದ್ದರು. ಸೋಮವಾರ ಅವರು ಆಡಲಿಲ್ಲ. ಲೆಗ್‌ ಸ್ಪಿನ್ನರ್‌ ಯಾಸಿರ್‌ ಶಾ ನಾಲ್ಕು ವಿಕೆಟ್‌ ಪಡೆದರು.

ನಾಯಕ ಮೊಮಿನುಲ್‌ ಹಕ್‌, ಶಹೀನ್‌ ಶಾ ಅಫ್ರೀದಿ ಬೌಲಿಂಗ್‌ನಲ್ಲಿ ಬೌಂಡರಿಯೊಡನೆ ದಿನದಾಟ ಆರಂಭಿಸಿದರೂ, ಅದೇ ಓವರ್‌ನಲ್ಲಿ ಲೆಗ್‌ಬಿಫೋರ್‌ ಬಲೆಗೆ ಬಿದ್ದರು. ನಂತರ ಯಾಸಿರ್‌ ಶಾ ಪೆಟ್ಟುಕೊಟ್ಟರು.

ಇದು ಕಳೆದ 14 ತಿಂಗಳಲ್ಲಿ ಬಾಂಗ್ಲಾದೇಶ ಅನುಭವಿಸಿದ ಆರನೇ ಸೋಲು.

ಎರಡು ತಿಂಗಳ ವಿರಾಮದ ನಂತರ, ಕರಾಚಿಯಲ್ಲಿ ಏಪ್ರಿಲ್‌ 5 ರಿಂದ 9ರವರೆಗೆ ಎರಡನೇ ಟೆಸ್ಟ್‌ ಆರಂಭವಾಗಲಿದೆ. ಅದಕ್ಕೆ ಮೊದಲು ಏ. 3ರಂದು ಇವೆರಡು ತಂಡಗಳ ನಡುವೆ ಏಕೈಕ ಏಕದಿನ ಪಂದ್ಯ ನಡೆಯಲಿದೆ.

ಸ್ಕೋರುಗಳು:

ಬಾಂಗ್ಲಾದೇಶ: 233 ಮತ್ತು 168 (ಮೊಮಿನುಲ್‌ ಹಕ್‌ 41, ಲಿಟನ್ ದಾಸ್‌ 29; ನಸೀಮ್‌ ಶಾ 26ಕ್ಕೆ4, ಯಾಸಿರ್‌ ಶಾ 58ಕ್ಕೆ4); ಪಾಕಿಸ್ತಾನ: 445

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.