ADVERTISEMENT

ವಿಶ್ವಕಪ್ ಕ್ರಿಕೆಟ್ ಸೂ‍ಪರ್ ಲೀಗ್ ಸೀರಿಸ್‌ಗೆ ನಾಳೆ ಮರುಚಾಲನೆ

‌ಪಾಕಿಸ್ತಾನ–ಜಿಂಬಾಬ್ವೆ ತಂಡಗಳ ನಡುವೆ ಹಣಾಹಣಿ; ಅಗ್ರಸ್ಥಾನದಲ್ಲಿರುವ ಚಾಂಪಿಯನ್ ಇಂಗ್ಲೆಂಡ್‌

ಏಜೆನ್ಸೀಸ್
Published 28 ಅಕ್ಟೋಬರ್ 2020, 14:36 IST
Last Updated 28 ಅಕ್ಟೋಬರ್ 2020, 14:36 IST
ಪಾಕಿಸ್ತಾನದ ಬಾಬರ್ ಆಜಂ ರಾವಲ್ಪಿಂಡಿಯಲ್ಲಿ ಬುಧವಾರ ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ
ಪಾಕಿಸ್ತಾನದ ಬಾಬರ್ ಆಜಂ ರಾವಲ್ಪಿಂಡಿಯಲ್ಲಿ ಬುಧವಾರ ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ   

ದುಬೈ/ರಾವಲ್ಪಿಂಡಿ: ಮಾಜಿ ವಿಶ್ವ ಚಾಂಪಿಯನ್ ಪಾಕಿಸ್ತಾನ ತಂಡ ಐಸಿಸಿ ಪುರುಷರ ವಿಶ್ವಕಪ್ ಸೂಪರ್ ಲೀಗ್ ಸೀರಿಸ್‌ನಲ್ಲಿ ಶುಕ್ರವಾರದಿಂದಜಿಂಬಾಬ್ವೆ ಎದುರು ಸೆಣಸಲಿದೆ. ರಾವಲ್ಪಿಂಡಿಯಲ್ಲಿ ಪಂದ್ಯಗಳು ನಡೆಯಲಿದ್ದು 2023ರಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿಗೆ ಈ ಮೂಲಕ ಮರುಚಾಲನೆ ಸಿಗಲಿದೆ.

ಏಕದಿನ ಕ್ರಿಕೆಟ್‌ನಲ್ಲಿ ಸ್ಪರ್ಧೆಯನ್ನು ಹೆಚ್ಚಿಸುವ ಸಲುವಾಗಿ ಸೂಪರ್ ಲೀಗ್ ಸರಣಿಯನ್ನು ಆರಂಭಿಸಲಾಗಿದೆ. ಆತಿಥೇಯ ಭಾರತ ಮತ್ತು ಅಗ್ರ ಕ್ರಮಾಂಕದ ಏಳು ತಂಡಗಳು ವಿಶ್ವಕಪ್‌ಗೆ ನೇರ ಪ್ರವೇಶ ಪಡೆದುಕೊಳ್ಳಲಿವೆ. ಐಸಿಸಿಯಲ್ಲಿ ಪೂರ್ಣ ಸದಸ್ಯತ್ವ ಹೊಂದಿರುವ 12 ತಂಡಗಳು ಮತ್ತು 2015–17ರ ಐಸಿಸಿ ವಿಶ್ವ ಕ್ರಿಕೆಟ್ ಲೀಗ್ ಚಾಂಪಿಯನ್‌ಷಿಪ್‌ನ ಚಾಂಪಿಯನ್ ನೆದರ್ಲೆಂಡ್ಸ್ ಸ್ಪರ್ಧೆಯಲ್ಲಿದೆ. ಪ್ರತಿ ತಂಡಗಳು ಮೂರು ಪಂದ್ಯಗಳ ಎಂಟು ಸರಣಿಗಳಲ್ಲಿ ಪಾಲ್ಗೊಳ್ಳಲಿವೆ. ಈ ಪೈಕಿ ತಲಾ ಮೂರು ಸರಣಿ ತವರಿನಲ್ಲಿ ಮತ್ತು ಮೂರು ತವರಿನಾಚೆ ನಡೆಯಲಿವೆ.

ಪ್ರತಿ ಪಂದ್ಯದಲ್ಲಿ ಜಯ ಗಳಿಸುವ ತಂಡಕ್ಕೆ 10 ಪಾಯಿಂಟ್ ಲಭಿಸಲಿದ್ದು ಪಂದ್ಯ ಟೈ ಆದರೆ ಅಥವಾ ಫಲಿತಾಂಶವಿಲ್ಲದೆ ಮುಗಿದರೆ ತಲಾ ಐದು ಪಾಯಿಂಟ್ ಲಭಿಸಲಿದೆ. ಸೋತ ತಂಡಕ್ಕೆ ಪಾಯಿಂಟ್ ಇಲ್ಲ. ಎಂಟು ಸರಣಿಗಳಲ್ಲಿ ಕಲೆ ಹಾಕುವ ಪಾಯಿಂಟ್‌ಗಳ ಆಧಾರದಲ್ಲಿ ರ‍್ಯಾಂಕಿಂಗ್ ನೀಡಲಾಗುತ್ತದೆ. ನೇರ ಪ್ರವೇಶ ಗಿಟ್ಟಿಸಿಕೊಳ್ಳಲು ವಿಫಲವಾಗುವ ತಂಡಗಳಿಗೆ ಅರ್ಹತಾ ಸುತ್ತಿನ ಮೂಲಕ ಪ್ರವೇಶಿಸಲು ಮತ್ತೊಂದು ಅವಕಾಶ ಸಿಗಲಿದೆ.

ADVERTISEMENT

ಸೂಪರ್ ಲೀಗ್ ಸರಣಿಯಲ್ಲಿ ಈ ವರೆಗೆ ಎರಡು ಹಣಾಹಣಿಗಳು ನಡೆದಿವೆ. ಕಳೆದ ಬಾರಿ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದ ಮತ್ತು ಚಾಂಪಿಯನ್ ಆಗಿದ್ದ ಇಂಗ್ಲೆಂಡ್ ಆ ಎರಡೂ ಸರಣಿಗಳಲ್ಲಿ ಆಡಿದೆ. ಐರ್ಲೆಂಡ್ ವಿರುದ್ಧ 2–1ರ ಗೆಲುವು ದಾಖಲಿಸಿರುವ ಆ ತಂಡ ಆಸ್ಟ್ರೇಲಿಯಾ ಎದುರು 1–2ರಿಂದ ಸೋತಿತ್ತು. ತಂಡ ಸದ್ಯ 30 ಪಾಯಿಂಟ್‌ಗಳೊಂದಿಗೆ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿದೆ.

ಭರವಸೆಯಲ್ಲಿ ಬಾಬರ್ ಆಜಂ

ಪಾಕಿಸ್ತಾನವು ಜಿಂಬಾಬ್ವೆ ವಿರುದ್ಧ ತವರಿನಲ್ಲಿ ನಡೆದ ಆರು ಸರಣಿಗಳ 19 ಪಂದ್ಯಗಳ ಪೈಕಿ 19ರಲ್ಲಿ ಗೆಲುವು ಸಾಧಿಸಿದೆ. ಈ ದಾಖಲೆಯು ಹೊಸ ನಾಯಕ ಬಾಬರ್ ಆಜಂ ಅವರ ಭರವಸೆಯನ್ನು ಹೆಚ್ಚಿಸಿದೆ. ವರ್ಷದ ಹಿಂದೆ ಶ್ರೀಲಂಕಾ ಎದುರು ನಡೆದಿದ್ದ ಸರಣಿಯಲ್ಲಿ ಕೊನೆಯದಾಗಿ ಏಕದಿನ ಪಂದ್ಯ ಆಡಿರುವ ಬಾಬರ್ ಐಸಿಸಿ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್‌, ಫಖ್ರ್ ಜಮಾನ್, ಹ್ಯಾರಿಸ್ ಸೊಹೇಲ್‌, ಮೊಹಮ್ಮದ್ ಹಫೀಜ್ ಮುಂತಾದವರ ಬಲ ಪಾಕಿಸ್ತಾನ ತಂಡಕ್ಕಿದೆ. ಮೊಹಮ್ಮದ್ ಅಮೀರ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ಎಡಗೈ ಮಧ್ಯಮ ವೇಗಿ ಶಹೀನ್ ಅಫ್ರಿದಿ ಬೌಲಿಂಗ್ ವಿಭಾಗದ ಚುಕ್ಕಾಣಿ ಹಿಡಿಯಲಿದ್ದಾರೆ. ಅವರಿಗೆ ಸ್ಪಿನ್ನರ್‌ಗಳಾದ ಶಾಬಾದ್ ಖಾನ್ ಮತ್ತು ಇಮದ್ ವಾಸಿಮ್ ಅವರ ಸಹಕಾರವಿದೆ.

ಚಾಮು ಚಿಬಾಬ ನಾಯಕತ್ವದ ಜಿಂಬಾಬ್ವೆ ತಂಡದಲ್ಲಿ ಸಿಕಂದರ್ ರಜಾ, ಬ್ರೆಂಡನ್ ಟೇಲರ್, ಸೀನ್ ವಿಲಿಯಮ್ಸ್, ವೇಗದ ಬೌಲರ್ ತೆಂಡೈ ಚಟಾರ, ಸ್ಪಿನ್ನರ್ ವಿಲಿಯಮ್ಸ್‌ ನಿರೀಕ್ಷೆ ಮೂಡಿಸಿದ್ದಾರೆ.

ಕೋವಿಡ್‌ ‘ಪರೀಕ್ಷೆ’ ಪಾಸಾದ ಆಟಗಾರರು

ಎರಡೂ ತಂಡಗಳ ಆಟಗಾರರು ಕೋವಿಡ್‌–19 ಪರೀಕ್ಷೆಗೆ ಒಳಗಾಗಿದ್ದು ಯಾರಲ್ಲಿಯೂ ಸೋಂಕು ಕಂಡುಬಂದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ತಿಳಿಸಿದೆ. ಪಿಸಿಬಿಯ ಕೋವಿಡ್‌–19 ತಡೆ ಮಾರ್ಗಸೂಚಿಗಳ ಪ್ರಕಾರ ಕಡ್ಡಾಯವಾಗಿ ಆಟಗಾರರು, ಅಧಿಕಾರಿಗಳು, ನೆರವು ಸಿಬ್ಬಂದಿ, ಕೋಚ್‌ ಸೇರಿದಂತೆ 107 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲ ಆಟಗಾರರು, ಸಿಬ್ಬಂದಿಗೆ ಜೀವಸುರಕ್ಷಾ ವಾತಾವರಣವಿರುವ ಇಸ್ಲಾಮಾಬಾದ್‌ನ ಹೊಟೇಲೊಂದರಲ್ಲಿ ವಸತಿಗೆ ಅವಕಾಶ ಕಲ್ಪಿಸಲಾಗಿದೆ. ಪಿಂಡಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಉಭಯ ತಂಡಗಳು ತರಬೇತಿ ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.