ADVERTISEMENT

ಸುಲಭದ ತುತ್ತಾದ ನಮೀಬಿಯಾ: ಗೆಲುವಿನೊಡನೆ ಸೂಪರ್ 8ಗೆ ಪಾಕ್

ಏಜೆನ್ಸೀಸ್
Published 18 ಫೆಬ್ರುವರಿ 2026, 15:54 IST
Last Updated 18 ಫೆಬ್ರುವರಿ 2026, 15:54 IST
<div class="paragraphs"><p>ಪಾಕಿಸ್ತಾನ ಕ್ರಿಕೆಟ್ ತಂಡ</p></div>

ಪಾಕಿಸ್ತಾನ ಕ್ರಿಕೆಟ್ ತಂಡ

   

ಕೊಲಂಬೊ: ಆರಂಭ ಆಟಗಾರ ಸಾಹಿಬ್‌ಝಾದಾ ಫರ್ಹಾನ್ ಅವರ ಆಕರ್ಷಕ ಅಜೇಯ ಶತಕದ ನೆರವಿನಿಂದ ಪಾಕಿಸ್ತಾನ ತಂಡ 102 ರನ್‌ಗಳ ದೊಡ್ಡ ಅಂತರದಿಂದ ನಮಿಬಿಯಾ ತಂಡವನ್ನು ಸೋಲಿಸಿ ಟಿ20 ವಿಶ್ವಕಪ್ ಸೂಪರ್ ಎಂಟರ ಹಂತಕ್ಕೆ ಮುನ್ನಡೆಯಿತು.

ಫರ್ಹಾನ್ ಕೇವಲ 58 ಎಸೆತಗಳಲ್ಲಿ ಬರೋಬ್ಬರಿ 100 ರನ್ ಬಾರಿಸಿದರು. ಇದರಲ್ಲಿ ನಾಲ್ಕು ಸಿಕ್ಸರ್, ಹತ್ತು ಬೌಂಡರಿಗಳಿದ್ದವು. ‍ಪಾಕಿಸ್ತಾನ 20 ಓವರುಗಳಲ್ಲಿ 3 ವಿಕೆಟ್‌ಗೆ 199 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಫರ್ಹಾನ್ ಪ್ರಯತ್ನಕ್ಕೆ ಪೂರಕವಾಗಿ ಸ್ಪಂದಿಸಿದ ಸ್ಪಿನ್ನರ್‌ಗಳು ನಮೀಬಿಯಾ ತಂಡವನ್ನು 17.3 ಓವರುಗಳಲ್ಲಿ 97 ರನ್‌ಗಳಿಗೆ ಉರುಳಿಸಿದರು. 

ADVERTISEMENT

ಈ ಗೆಲುವಿನಿಂದ ಪಾಕಿಸ್ತಾನ ಎ ಗುಂಪಿನಲ್ಲಿ 4 ಪಂದ್ಯಗಳಿಂದ ಆರು ಪಾಯಿಂಟ್ಸ್ ಸಂಗ್ರಹಿಸಿ ಗುಂಪಿನಿಂದ ಎರಡನೇ ತಂಡವಾಗಿ ಸೂಪರ್ ಎಂಟಕ್ಕೆ ಮುನ್ನಡೆದರು. ಭಾರತ ಈಗಾಗಲೇ ಅಗ್ರಸ್ಥಾನ ಪಡೆದಿದೆ. ನಾಲ್ಕು ಪಾಯಿಂಟ್ಸ್ ಸಂಗ್ರಹಿಸಿದ ಅಮೆರಿಕ ಹೊರಬಿತ್ತು. ಸೂಪರ್ ಎಂಟರಲ್ಲಿ ಎರಡನೇ ಗುಂಪಿನಲ್ಲಿರುವ ಪಾಕ್ ತಂಡ ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.

ಭಾರತ ಎದುರು 61 ರನ್‌ಗಳಿಂದ ಸೋಲನುಭವಿಸಿ ಮಾನಸಿಕವಾಗಿ ಕುಗ್ಗಿದ ಪಾಕಿಸ್ತಾನಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು.

‘ಪಾಝ್‌ ಬೌಲರ್’ ಉಸ್ಮಾನ್ ತಾರಿಖ್ ಆಫ್‌ ಸ್ಪಿನ್ ದಾಳಿಯಲ್ಲಿ 16 ರನ್ನಿಗೆ 4 ವಿಕೆಟ್ ಪಡೆದರೆ, ಲೆಗ್‌ ಸ್ಪಿನ್ನರ್ ಶದಾಬ್ ಖಾನ್ 19 ರನ್ನಿಗೆ 3 ವಿಕೆಟ್ ಪಡೆದು ಅನನುಭವಿ ನಮಿಬಿಯಾ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಆರಂಭ ಆಟಗಾರ ಲಾರೆನ್‌ ಸ್ಟೀನ್‌ಕ್ಯಾಂಪ್ ಗಳಿಸಿದ 23 ರನ್‌ಗಳೇ ತಂಡದ ವೈಯಕ್ತಿಕ ಗರಿಷ್ಠ ಮೊತ್ತವೆನಿಸಿತು.

ಇದಕ್ಕೆ ಮೊದಲು, ಫರ್ಹಾನ್ ಅವರು ಗೆರ್ಹಾರ್ಡ್ ಎರಾಸ್ಮಸ್ ಮಾಡಿದ ಕೊನೆಯ ಓವರಿನಲ್ಲಿ ಒಂದು ರನ್ ಗಳಿಸಿ ಶತಕ ಪೂರೈಸಿದರು. ಅವರು ಟಿ20 ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಪಾಕಿಸ್ತಾನದ ಎರಡನೇ ಆಟಗಾರ ಎನಿಸಿದರು. ಈ ಹಿಂದೆ ಅಹ್ಮದ್ ಶೆಹಝಾದ್ 2014ರಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ (111*) ಗಳಿಸಿದ್ದರು. ಬಾಬರ್ ಆಜಂ ಅವರಿಗಿಂತ ಮೊದಲೇ ಐದನೇ ಕ್ರಮಾಂಕದಲ್ಲಿ ಆಡಿದ ಶದಾಬ್ ಖಾನ್ 22 ಎಸೆತಗಳಲ್ಲಿ 36 ರನ್ ಬಾರಿಸಿದರು. ಪಾಕ್ ಕೊನೆಯ 3 ಓವರುಗಳಲ್ಲಿ 42 ರನ್ ಬಾಚಿತು. ಮುರಿಯದ ನಾಲ್ಕನೇ ವಿಕೆಟ್‌ಗೆ ಫರ್ಹಾನ್– ಶದಾಬ್ 81 ರನ್ ಸೇರಿಸಿದರು. ಫರ್ಹಾನ್, ನಾಯಕ ಸಲ್ಮಾನ್ ಆಘಾ (38) ಜೊತೆ ಎರಡನೇ ವಿಕೆಟ್‌ಗೆ 67 ರನ್ ಸೇರಿಸಿದ್ದರು.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 20 ಓವರುಗಳಲ್ಲಿ 3ಕ್ಕೆ 99 (ಸಾಹಿಬ್‌ಝಾದಾ ಫರ್ಹಾನ್ ಔಟಾಗದೇ 100, ಸಲ್ಮಾನ್ ಆಘಾ 38, ಶದಾಬ್ ಖಾನ್ ಔಟಾಗದೇ 36; ಜಾಕ್ ಬ್ರಸೆಲ್ 48ಕ್ಕೆ2); ನಮಿಬಿಯಾ: 17.3 ಓವರುಗಳಲ್ಲಿ 97 (ಲಾರೆನ್‌ ಸ್ಟೀನ್‌ಕ್ಯಾಂಪ್ 23, ಶದಾಬ್ ಖಾನ್ 19ಕ್ಕೆ3, ಉಸ್ಮಾನ್ ತಾರಿಖ್ 16ಕ್ಕೆ4) ಪಂದ್ಯದ ಆಟಗಾರ: ಸಾಹಿಬ್‌ಝಾದಾ ಫರ್ಹಾನ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.