ADVERTISEMENT

20,000 ಡಾಲರ್‌ಗೆ ಬಾಂಗ್ಲಾದೇಶದ ಮುಷ್ಫಿಕರ್ ಕ್ರಿಕೆಟ್ ಬ್ಯಾಟ್ ಖರೀದಿಸಿದ ಅಫ್ರಿದಿ

ಏಜೆನ್ಸೀಸ್
Published 16 ಮೇ 2020, 7:59 IST
Last Updated 16 ಮೇ 2020, 7:59 IST
ಮುಷ್ಫಿಕರ್‌ ರಹೀಮ್ ಮತ್ತು ಶಾಹಿದ್ ಅಫ್ರಿದಿ
ಮುಷ್ಫಿಕರ್‌ ರಹೀಮ್ ಮತ್ತು ಶಾಹಿದ್ ಅಫ್ರಿದಿ    

ನವದೆಹಲಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ ಬಾಂಗ್ಲಾದೇಶ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌–ಬ್ಯಾಟ್ಸ್‌ಮನ್‌ ಮುಷ್ಫಿಕರ್‌ ರಹೀಮ್‌ ಅವರ ಬ್ಯಾಟ್‌ಗೆ 20,000 ಡಾಲರ್‌ ನೀಡಿ ಖರೀದಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಕೋವಿಡ್‌–19 ಪರಿಹಾರ ಕಾರ್ಯಾಚರಣೆಗಳಿಗಾಗಿ ಹಣ ಸಂಗ್ರಹಿಸಲು ಮುಷ್ಫಿಕರ್‌ ರಹೀಮ್‌,ಬ್ಯಾಟ್‌ ಹಾರಾಜಿಗೆ ಇಟ್ಟಿರುವುದಾಗಿ ಪ್ರಕಟಿಸಿದ್ದರು. ಶ್ರೀಲಂಕಾ ಕ್ರಿಕೆಟ್‌ ತಂಡದ ವಿರುದ್ಧ 2013ರಲ್ಲಿ ದ್ವಿಶತಕ ಸಿಡಿಸಿದ್ದ ಬ್ಯಾಟ್‌ನ್ನು ಹಾರಾಜಿಗೆ ಇಟ್ಟಿದ್ದರು.

ಸಾಧನೆಯ ನೆನಪುಗಳನ್ನು ಹೊತ್ತಿರುವ ಬ್ಯಾಟ್‌ ಶಾಹಿದ್‌ ಅಫ್ರಿದಿ ತಮ್ಮ ಫೌಂಡೇಷನ್‌ಗಾಗಿ 20,000 ಡಾಲರ್‌ (ಸುಮಾರು ₹15 ಲಕ್ಷ) ನೀಡಿ ಖರೀದಿಸಿದ್ದಾರೆ.

ADVERTISEMENT

'ಶಾಹಿದ್ ಅಫ್ರಿದಿ ಅವರ ಫೌಂಡೇಷನ್‌ಗಾಗಿ ಬ್ಯಾಟ್‌ ಖರೀದಿಸಿದ್ದಾರೆ. ಸಹಾಯಾರ್ಥವಾಗಿ ನಡೆಸಿದ ಈ ಪ್ರಕ್ರಿಯೆಯಲ್ಲಿ ಅಂತಹ ವ್ಯಕ್ತಿಯೊಬ್ಬರು ಸೇರಿದ್ದು ನನ್ನ ಭಾಗ್ಯ ಹಾಗೂ ಬಹು ದೊಡ್ಡ ಗೌರವ' ಎಂದು ರಹೀಮ್‌ ಹೇಳಿರುವುದಾಗಿ ಇಎಸ್‌ಪಿಎನ್‌ಕ್ರಿಕ್‌ಇನ್ಫೊ ವರದಿ ಮಾಡಿದೆ.

ಕಳೆದ ವಾರ ಕೆಲವರು ಮೋಸದ ಬಿಡ್ಡಿಂಗ್‌ ನಡೆಸಿಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರಿಂದಪ್ರಕ್ರಿಯೆಯನ್ನೇ ರದ್ದು ಪಡಿಸಲಾಯಿತು. ಆದರೆ, ಅಫ್ರಿದಿ ಅವರು ರಹೀಮ್‌ ಸಂಪರ್ಕಿಸಿ ಬ್ಯಾಟ್‌ ಖರೀದಿಸಿದ್ದಾರೆ.

ಮೇ 13ರಂದು ಖರೀದಿ ಆಸಕ್ತಿ ಪತ್ರ ರವಾನಿಸಿ, 20 ಸಾವಿರ ಡಾಲರ್‌ಗಳಿಗೆ ಖರೀದಿಸುವುದಾಗಿ ತಿಳಿಸಿದರು ಎಂದು ರಹೀಮ್‌ ಹೇಳಿದ್ದಾರೆ. ಟ್ವಿಟರ್‌ನಲ್ಲಿ ಅಫ್ರಿದಿ ಅವರ ವಿಡಿಯೊ ಸಂದೇಶವನ್ನೂ ಪ್ರಕಟಿಸಿಕೊಂಡಿದ್ದಾರೆ.

'ನೀವು ಮಾಡುತ್ತಿರುವುದು ನಿಜಕ್ಕೂ ದೊಡ್ಡ ಕಾರ್ಯ. ವಾಸ್ತವದ ಬದುಕಿನ ಹೀರೊಗಳು ಮಾತ್ರವೇ ಇದನ್ನು ಮಾಡಲು ಸಾಧ್ಯ. ನಾವು ಈಗ ಕಠಿಣ ಕಾಲಘಟ್ಟದಲ್ಲಿದ್ದೇವೆ. ನಮಗೀಗ ಪರಿಸ್ಪರ ಪ್ರೀತಿ ಮತ್ತು ಸಹಕಾರದ ಅಗತ್ಯವಿದೆ...ಇದೆಲ್ಲ ಮುಗಿದ ನಂತರ ಮತ್ತೆ ಕ್ರಿಕೆಟ್‌ ಮೈದಾನದಲ್ಲಿ ಭೇಟಿಯಾಗೋಣ...' ಎಂದು ಅಫ್ರಿದಿ ಹೇಳಿದ್ದಾರೆ.

ಜಗತ್ತಿನಾದ್ಯಂತ ಹಲವು ಕ್ರಿಕೆಟಿಗರು ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಹೋರಾಟಕ್ಕಾಗಿ ಆಟದಲ್ಲಿ ಬಳಸಿದ ವಸ್ತುಗಳನ್ನು ಹರಾಜಿಗೆ ಇಡುತ್ತಿದ್ದಾರೆ. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಮಾಜಿ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌, 2016ರ ಐಪಿಎಲ್‌ನಲ್ಲಿ ಗುಜರಾತ್‌ ಲಯನ್ಸ್‌ ವಿರುದ್ಧದ ಪಂದ್ಯದಲ್ಲಿ ಬಳಸಿದ ಕಿಟ್‌ ಹರಾಜಿಗಿಟ್ಟಿದ್ದಾರೆ. ಇಂಗ್ಲೆಂಡ್‌ ವಿಕೆಟ್‌ ಕೀಪರ್‌ ಜಾಸ್‌ ಬಟ್ಲರ್‌ ವಿಶ್ವ ಕಪ್‌ ಕ್ರಿಕೆಟ್‌ ಫೈನಲ್‌ನಲ್ಲಿ ಧರಿಸಿದ್ದ ಶರ್ಟ್‌ ಹರಾಜು ಮಾಡುವ ಮೂಲಕ 65,000 ಪೌಂಡ್ಸ್‌ ಸಂಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.