ADVERTISEMENT

ಶಾಹೀನ್, ನೂಮಾನ್ ಪರಿಣಾಮಕಾರಿ ದಾಳಿ: ಸರಣಿ ಕ್ಲೀನ್ ಸ್ವೀಪ್‌ ಮಾಡಿದ ಪಾಕಿಸ್ತಾನ

ಏಜೆನ್ಸೀಸ್
Published 10 ಮೇ 2021, 13:42 IST
Last Updated 10 ಮೇ 2021, 13:42 IST
ಸರಣಿ ಗೆದ್ದ ಪಾಕಿಸ್ತಾನ ತಂಡದ ಆಟಗಾರರ ಸಂಭ್ರಮ –ಪಿಟಿಐ ಚಿತ್ರ
ಸರಣಿ ಗೆದ್ದ ಪಾಕಿಸ್ತಾನ ತಂಡದ ಆಟಗಾರರ ಸಂಭ್ರಮ –ಪಿಟಿಐ ಚಿತ್ರ   

ಹರಾರೆ : ಅಬಿದ್‌ ಅಲಿ ದ್ವಿಶತಕ (ಔಟಾಗದೆ 215) ಹಾಗೂ ಶಾಹೀನ್‌ ಶಾ ಆಫ್ರಿದಿ ಮತ್ತು ನೂಮಾನ್ ಅಲಿ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಪಾಕಿಸ್ತಾನ ತಂಡವು ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. ಜಿಂಬಾಬ್ವೆ ತಂಡವನ್ನು ಇನಿಂಗ್ಸ್ ಹಾಗೂ 147 ರನ್‌ಗಳ ಅಂತರದಿಂದ ಮಣಿಸಿದ ಬಾಬರ್ ಅಜಂ ಪಡೆ 2–0ಯಿಂದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತು.

ಪಂದ್ಯದ ನಾಲ್ಕನೇ ದಿನದಾಟವಾದ ಸೋಮವಾರ ಪಾಕ್ ಗೆಲುವಿಗೆ ಕೇವಲ ಒಂದು ವಿಕೆಟ್ ಬೇಕಿತ್ತು. ಲ್ಯೂಕ್ ಜಾಂಗ್ವೆ ವಿಕೆಟ್ ಕಿತ್ತ ಶಾಹೀನ್ ಶಾ ಆಫ್ರಿದಿ ಜಯದ ಔಪಚಾರಿಕತೆ ಪೂರ್ಣಗೊಳಿಸಿದರು.

ಮೊದಲ ಟೆಸ್ಟ್‌ನಲ್ಲಿ ಪ್ರವಾಸಿ ತಂಡ ಇನಿಂಗ್ಸ್ ಮತ್ತು 116 ರನ್‌ಗಳಿಂದ ಜಯಿಸಿತ್ತು.

ADVERTISEMENT

ಈ ಪಂದ್ಯವೊಂದರಲ್ಲೇ ಪಾಕಿಸ್ತಾನ ಮೂವರು ಬೌಲರ್‌ಗಳು ಐದು ವಿಕೆಟ್‌ಗಳ ಗೊಂಚಲು ಗಳಿಸಿ ಇತಿಹಾಸ ಬರೆದರು. ಎರಡನೇ ಇನಿಂಗ್ಸ್‌ನಲ್ಲಿ ವೇಗಿ ಶಾಹೀನ್ ಶಾ ಆಫ್ರಿದಿ (52ಕ್ಕೆ 5) ಹಾಗೂ ಸ್ಪಿನ್ನರ್‌ ನೂಮಾನ್ ಅಲಿ (86ಕ್ಕೆ 5), ಈ ಶ್ರೇಯ ಗಳಿಸಿದರೆ, ಮೊದಲ ಇನಿಂಗ್ಸ್‌ನಲ್ಲಿ ಹಸನ್ ಅಲಿ (27ಕ್ಕೆ5) ಪಂಚಗುಚ್ಛ ಸಾಧನೆ ಮಾಡಿದ್ದರು. ಪಂದ್ಯವೊಂದರಲ್ಲಿ ಪಾಕಿಸ್ತಾನದ ಮೂವರು ಬೌಲರ್‌ಗಳು ಐದು ವಿಕೆಟ್‌ ಗೊಂಚಲು ಪಡೆದಿದ್ದು ಇದೇ ಮೊದಲು. ಒಟ್ಟಾರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1993ರ ಬಳಿಕ ಈ ಸಾಧನೆ ಮೂಡಿಬಂದಿದೆ.

ಪಂದ್ಯದ ಆರಂಭದಿಂದಲೂ ಪಾಕಿಸ್ತಾನ ಮೇಲುಗೈ ಸಾಧಿಸಿತ್ತು. ಅಬಿದ್ ಅಲಿ ದ್ವಿಶತಕ ಹಾಗೂ ಅಜರ್ ಅಲಿ ಶತಕದ(126) ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ ಕಳೆದುಕೊಂಡು 510 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಆತಿಥೇಯ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 132 ರನ್‌ಗಳಿಗೆ ಕಟ್ಟಿಹಾಕಿ ಫಾಲೊಆನ್ ಹೇರಿತ್ತು. ಬಳಿಕ ಎರಡನೇ ಇನಿಂಗ್ಸ್‌ನಲ್ಲಿ 231 ರನ್‌ಗಳಿಗೆ ಜಿಂಬಾಬ್ವೆ ತಂಡದ ಎಲ್ಲ ವಿಕೆಟ್‌ ಗಳಿಸಿತ್ತು.

ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾವನ್ನು ಅದರ ನೆಲದಲ್ಲೇ ಏಕದಿನ ಹಾಗೂ ಟಿ–20 ಸರಣಿಗಳಲ್ಲಿ ಮಣಿಸಿತ್ತು. ಜಿಂಬಾಬ್ವೆ ತಂಡದ ಎದುರಿನ ಟಿ–20 ಸರಣಿಯನ್ನೂ ಜಯಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ ಮೊದಲ ಇನಿಂಗ್ಸ್ 8 ವಿಕೆಟ್‌ಗೆ 510 ಡಿಕ್ಲೇರ್ಡ್‌: ಜಿಂಬಾಬ್ವೆ ಮೊದಲ ಇನಿಂಗ್ಸ್: 132 ಮತ್ತು ಎರಡನೇ ಇನಿಂಗ್ಸ್ 231(ಫಾಲೋ ಆನ್‌): (ರೇಜಿಸ್ ಚಾಕೊಬ್ವಾ 80, ಬ್ರೆಂಡನ್ ಟೇಲರ್ 49, ಲ್ಯೂಕ್‌ ಜಾಂಗ್ವೆ 37, ಮಿಲ್ಟನ್ ಶುಂಬಾ 16; ಶಾಹೀನ್ ಶಾ ಆಫ್ರಿದಿ 52ಕ್ಕೆ 5, ನೂಮಾನ್ ಅಲಿ 86ಕ್ಕೆ 5).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.