ADVERTISEMENT

SA vs PAK: ಕೇಶವ ಮಹಾರಾಜ್‌ಗೆ ಏಳು ವಿಕೆಟ್‌

ಪಿಟಿಐ
Published 21 ಅಕ್ಟೋಬರ್ 2025, 15:39 IST
Last Updated 21 ಅಕ್ಟೋಬರ್ 2025, 15:39 IST
ಏಳು ವಿಕೆಟ್‌ ಪಡೆದ ದಕ್ಷಿಣ ಆಫ್ರಿಕಾ ತಂಡದ ಕೇಶವ ಮಹಾರಾಜ್‌ –ಎಎಫ್‌ಪಿ ಚಿತ್ರ
ಏಳು ವಿಕೆಟ್‌ ಪಡೆದ ದಕ್ಷಿಣ ಆಫ್ರಿಕಾ ತಂಡದ ಕೇಶವ ಮಹಾರಾಜ್‌ –ಎಎಫ್‌ಪಿ ಚಿತ್ರ   

ರಾವಲ್ಪಿಂಡಿ: ಅನುಭವಿ ಸ್ಪಿನ್ನರ್‌ ಕೇಶವ ಮಹಾರಾಜ್‌ (102ಕ್ಕೆ 7) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡವನ್ನು 333 ರನ್‌ಗಳಿಗೆ ನಿಯಂತ್ರಿಸಿತು. 

ಮೊದಲ ದಿನ 5 ವಿಕೆಟ್‌ಗೆ 259 ರನ್‌ ಗಳಿಸಿದ್ದ ಆತಿಥೇಯ ಪಾಕ್‌ ತಂಡವು ಎರಡನೇ ದಿನವಾದ ಮಂಗಳವಾರ 74 ರನ್‌ ಸೇರಿಸಿ ಆಲೌಟ್‌ ಆಯಿತು. ಸಾದ್ ಶಕೀಲ್ 66 ಮತ್ತು ಸಲ್ಮಾನ್‌ ಆಘಾ 45 ತಂಡದ ಮೊತ್ತವನ್ನು ಕೊಂಚ ಹಿಗ್ಗಿಸಿದರು.

ಇದಕ್ಕೆ ಉತ್ತರವಾಗಿ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು 54 ರನ್‌ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರರಾದ ಏಡನ್‌ ಮರ್ಕರಂ (32) ಮತ್ತು ರೆಯಾನ್ ರಿಕೆಲ್ಟನ್ (14) ಪೆವಿಲಿಯನ್‌ ಸೇರಿಕೊಂಡರು.

ADVERTISEMENT

ಟ್ರಿಸ್ಟನ್‌ ಸ್ಟಬ್ಸ್‌ (ಔಟಾಗದೇ 68) ಮತ್ತು ಟೋನಿ ಡಿ ಜೋರ್ಜಿ (55) ಮೂರನೇ ವಿಕೆಟ್‌ಗೆ 113 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ದಿನದಾಟದ ಅಂತ್ಯಕ್ಕೆ ಪ್ರವಾಸಿ ತಂಡವು 65 ಓವರ್‌ಗಳಲ್ಲಿ 4 ವಿಕೆಟ್‌ಗೆ 185 ರನ್‌ ಗಳಿಸಿದೆ. 

ಅನುಭವಿ ಸ್ಪಿನ್ನರ್‌ ಆಸಿಫ್‌ ಆಫ್ರಿದಿ ಅವರು ಪದಾರ್ಪಣೆ ಪಂದ್ಯದಲ್ಲಿ ಎರಡು ವಿಕೆಟ್‌ ಪಡೆದು ದಕ್ಷಿಣ ಆಫ್ರಿಕಾಕ್ಕೆ ಆಘಾತ ನೀಡಿದರು. 15 ಓವರ್‌ ಬೌಲಿಂಗ್‌ ಮಾಡಿದ 38 ವರ್ಷದ ಆಸಿಫ್‌ ಅವರು ಟೋನಿ ಮತ್ತು ಡೆವಾಲ್ಡ್ ಬ್ರೆವಿಸ್ ವಿಕೆಟ್‌ ಪಡೆದರು.  

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಪಾಕಿಸ್ತಾನ: 113.4 ಓವರ್‌ಗಳಲ್ಲಿ 333 (ಸಾದ್ ಶಕೀಲ್ 66, ಸಲ್ಮಾನ್‌ ಆಘಾ 45; ಕೇಶವ ಮಹಾರಾಜ್‌ 102ಕ್ಕೆ 7). ದಕ್ಷಿಣ ಆಫ್ರಿಕಾ: 65 ಓವರ್‌ಗಳಲ್ಲಿ 4 ವಿಕೆಟ್‌ಗೆ 185 (ಏಡನ್‌ ಮರ್ಕರಂ 32, ಟ್ರಿಸ್ಟನ್‌ ಸ್ಟಬ್ಸ್‌ ಔಟಾಗದೇ 68, ಟೋನಿ ಡಿ ಜೋರ್ಜಿ 55;  ಆಸಿಫ್‌ ಆಫ್ರಿದಿ 24ಕ್ಕೆ 2). 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.