ADVERTISEMENT

ಪಾಕ್‌ ನೆಲದಲ್ಲಿ ದಶಕದ ನಂತರ ಟೆಸ್ಟ್‌: ಉತ್ತಮ ಆರಂಭದ ನಂತರ ಲಂಕಾ ಪರದಾಟ

ಏಜೆನ್ಸೀಸ್
Published 11 ಡಿಸೆಂಬರ್ 2019, 20:15 IST
Last Updated 11 ಡಿಸೆಂಬರ್ 2019, 20:15 IST
   

ರಾವಲ್ಪಿಂಡಿ: ದಶಕದ ನಂತರ ಬಹುನಿರೀಕ್ಷಿತ ಟೆಸ್ಟ್‌ ಪಂದ್ಯ ಪಾಕ್‌ ನೆಲದಲ್ಲಿ ಬುಧವಾರ ಆರಂಭವಾಯಿತು. ಪಾಕಿಸ್ತಾನದ ಯುವ ಆಟಗಾರ ನಸೀಮ್‌ ಷಾ ವೇಗದ ದಾಳಿಯೊಡನೆ ಮೊದಲ ದಿನ ಗಮನಸೆಳೆದು ಶ್ರೀಲಂಕಾ ತಂಡಕ್ಕೆ ಕಡಿವಾಣ ಹಾಕಿದರು.

ರಾವಲ್ಪಿಂಡಿ ಸ್ಟೇಡಿಯಂನಲ್ಲಿ ಟಾಸ್‌ ಗೆದ್ದ ಶ್ರೀಲಂಕಾ 5 ವಿಕೆಟ್‌ಗೆ 202 ರನ್‌ ಗಳಿಸಿ ದಿನದಾಟ ಪೂರೈಸಿತು. 16 ವರ್ಷದ ನಸೀಮ್‌ 51 ರನ್ನಿಗೆ 2 ವಿಕೆಟ್‌ ಪಡೆದರು.ಮಂದ ಬೆಳಕಿನಿಂದಾಗಿ 20.5 ಓವರುಗಳು ಬಾಕಿಯಿರುವಾಗಲೇ ದಿನದಾಟವನ್ನು ಸ್ಥಗಿತಗೊಳಿಸಲಾಯಿತು.

ಆರಂಭ ಆಟಗಾರರಾದ ಕರುಣಾರತ್ನೆ (59) ಮತ್ತು ಒಷಾಡ ಫರ್ನಾಂಡೊ (40) ಮೊದಲ ವಿಕೆಟ್‌ಗೆ 96 ರನ್‌ ಸೇರಿಸಿದ್ದರು. ಆದರೆ ಈ ಉತ್ತಮ ಬುನಾದಿಯ ಮೇಲೆ ಇನಿಂಗ್ಸ್‌ ಕಟ್ಟಲು ಲಂಕಾ ಪರದಾಡುತ್ತಿದೆ. ಲಂಚ್‌ ಬಳಿಕ ಶಹೀನ್‌ ಆಫ್ರೀದಿ, ಲಂಕಾ ನಾಯಕ ದಿಮುತ್‌ ಅವರನ್ನು ಎಲ್‌ಬಿಡಬ್ಲ್ಯು ಆಗಿ ಪಡೆದರು.

ADVERTISEMENT

ಕುಶಲ್‌ ಮೆಂಡಿಸ್‌ (10) ಅವರನ್ನು ಔಟ್‌ ಮಾಡುವ ಮೂಲಕಎಡಗೈ ವೇಗಿ ಉಸ್ಮಾನ್‌ ಶಿನ್ವಾರಿ ಟೆಸ್ಟ್‌ನಲ್ಲಿ ಮೊದಲ ವಿಕೆಟ್‌ ಪಡೆದರು.

ಸುಮಾರು ಎಂಟು ಸಹಸ್ರ ಪ್ರೇಕ್ಷಕರು ಕ್ರೀಡಾಂಗಣದಲ್ಲಿದ್ದು ಹರ್ಷೋದ್ಗಾರಗಳನ್ನು ಮಾಡಿದರು. ನಾಯಕ ಅಜರ್‌ ಅಲಿ ಟಾಸ್‌ ಹಾಕಿದ ಸಂದರ್ಭದಲ್ಲಿ ಅವರು ರಾಷ್ಟ್ರಗೀತೆ ಹಾಡಿದರು.

ಸ್ಕೋರುಗಳು: ಶ್ರೀಲಂಕಾ: 68.1 ಓವರುಗಳಲ್ಲಿ 5 ವಿಕೆಟ್‌ಗೆ 202 (ದಿಮುತ್‌ ಕರುಣಾರತ್ನೆ 59, ಒಷಾಡ ಫರ್ನಾಂಡೊ 40, ಆ್ಯಂಜೆಲೊ ಮ್ಯಾಥ್ಯೂಸ್‌ 31, ಧನಂಜಯ ಡಿಸಿಲ್ವ ಬ್ಯಾಟಿಂಗ್ 38, ನಿರೋಷನ್‌ ಡಿಕ್ವೆಲಾ ಬ್ಯಾಟಿಂಗ್ 11; ನಸೀಮ್‌ ಷಾ 51ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.