ಕ್ರಿಕೆಟ್
(ಸಾಂಕೇತಿಕ ಚಿತ್ರ)
ಮುಲ್ತಾನ್: ಸ್ಪಿನ್ನರ್‌ಗಳಾದ ಸಾಜಿದ್ ಖಾನ್ ಮತ್ತು ಅಬ್ರಾರ್ ಅಹ್ಮದ್ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಪಾಕಿಸ್ತಾನ ತಂಡ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವಾದ ಭಾನುವಾರ ವೆಸ್ಟ್ ಇಂಡೀಸ್ ತಂಡದ ಮೇಲೆ 127 ರನ್‌ಗಳ ಜಯ ಪಡೆಯಿತು.
ಆಫ್ ಸ್ಪಿನ್ನರ್ ಸಾಜಿದ್ ಖಾನ್ 50 ರನ್ನಿಗೆ 5 ವಿಕೆಟ್ (ಪಂದ್ಯದಲ್ಲಿ ಒಟ್ಟು 115ಕ್ಕೆ9) ಕಬಳಿಸಿದರೆ, ಲೆಗ್ ಸ್ಪಿನ್ನರ್ ಅಬ್ರಾರ್ ಅಹ್ಮದ್ 27 ರನ್ನಿಗೆ 4 ವಿಕೆಟ್ ಕಿತ್ತರು. ಗೆಲ್ಲಲು 251 ರನ್‌ಗಳ ಗುರಿ ಎದುರಿಸಿದ ವೆಸ್ಟ್ ಇಂಡೀಸ್ 36.3 ಓವರುಗಳಲ್ಲಿ 123 ರನ್ನಿಗೆ ಕುಸಿಯಿತು.
ಇದಕ್ಕೆ ಮೊದಲು, ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 109 ರನ್‌ಗಳೊಡನೆ ದಿನದಾಟ ಮುಂದುವರಿಸಿದ ಆತಿಥೇಯ ಪಾಕಿಸ್ತಾನ 157 ರನ್‌ಗಳಿಗೆ ಆಟ ಮುಗಿಸಿತು. ಎಡಗೈ ಸ್ಪಿನ್ನರ್ ಜೋಮೆಲ್ ವಾರಿಕನ್ 32 ರನ್‌ಗಳಿಗೆ 7 ವಿಕೆಟ್ ಪಡೆದು ಮಿಂಚಿದ್ದರು.
ಇದು ಪಾಕಿಸ್ತಾನದಲ್ಲಿ ವೆಸ್ಟ್ ಇಂಡೀಸ್ ಬೌಲರ್ ಒಬ್ಬರ ಶ್ರೇಷ್ಠ ಪ್ರದರ್ಶನ ಎನಿಸಿತು. ಮಾಲ್ಕಂ ಮಾರ್ಷಲ್ ಲಾಹೋರ್‌ನಲ್ಲಿ (1986) 33 ರನ್ನಿಗೆ 5 ವಿಕೆಟ್ ಪಡೆದಿದ್ದು ಪಾಕ್ ನೆಲದಲ್ಲಿ ವಿಂಡೀಸ್ ಬೌಲರ್ ಒಬ್ಬರ ಇದುವರೆಗಿನ ಉತ್ತಮ ಸಾಧನೆ ಎನಿಸಿತು.
ಎರಡನೇ ಮತ್ತು ಅಂತಿಮ ಟೆಸ್ಟ್ ಇದೇ 25ರಂದು ಮುಲ್ತಾನ್‌ನಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 230 ಮತ್ತು 46.4 ಓವರುಗಳಲ್ಲಿ 157 (ಶಾನ್ ಮಸೂದ್ 52, ಮೊಹಮ್ಮದ್ ಹುರೈರ 29, ಕ್ರಮಾನ್ ಗುಲಾಂ 27; ಜೋಮೆಲ್ ವಾರಿನ್ 32ಕ್ಕೆ7); ವೆಸ್ಟ್ ಇಂಡೀಸ್: 36.3 ಓವರುಗಳಲ್ಲಿ 123 (ಅಲಿಕ್ ಅಥನೇಜ್ 55; ಸಾಜಿದ್ ಖಾನ್ 50ಕ್ಕೆ5, ಅಬ್ರಾರ್ ಅಹ್ಮದ್ 27ಕ್ಕೆ4). ಪಂದ್ಯದ ಆಟಗಾರ: ಸಾಜಿದ್ ಖಾನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.