ADVERTISEMENT

ಪಾಂಡೆ ಬಳಗಕ್ಕೆ ಪಂಜಾಬ್ ಸವಾಲು

ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ ಯುವಿ, ಗುರುಕೀರತ್ ಆಕರ್ಷಣೆ

ಗಿರೀಶದೊಡ್ಡಮನಿ
Published 7 ಅಕ್ಟೋಬರ್ 2018, 18:14 IST
Last Updated 7 ಅಕ್ಟೋಬರ್ 2018, 18:14 IST
ಮನೀಶ್ ಪಾಂಡೆ
ಮನೀಶ್ ಪಾಂಡೆ   

ಬೆಂಗಳೂರು: ‘ಹಾಲಿ ಚಾಂಪಿಯನ್’ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಎಲೀಟ್ ‘ಎ’ ಗುಂಪಿನಲ್ಲಿ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಇದರೊಂದಿಗೆ ಅಭಿಯಾನವನ್ನು ಮುಗಿಸಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮನೀಷ್ ಪಾಂಡೆ ನಾಯಕತ್ವದ ಬಳಗವು ಪಂಜಾಬ್ ತಂಡವನ್ನು ಎದುರಿಸಲಿದೆ. ಮನದೀಪ್ ಸಿಂಗ್ ನಾಯಕತ್ವದ ತಂಡವು ಗುಂಪಿನಲ್ಲಿರುವ ಬಲಿಷ್ಠ ತಂಡಗಳಲ್ಲಿ ಒಂದು. ಅನುಭವಿ ಯುವ ರಾಜ್ ಸಿಂಗ್, ಗುರುಕೀರತ್ ಸಿಂಗ್ ಮಾನ್, ಶುಭಮನ್ ಗಿಲ್, ಮನನ್ ವೊಹ್ರಾ ಅವರು ತಂಡದಲ್ಲಿದ್ದಾರೆ.

ಟೂರ್ನಿಯಲ್ಲಿ ಇದುವರೆಗೆ ಪಂಜಾಬ್ ತಂಡವು ಕರ್ನಾಟಕಕ್ಕಿಂತಲೂ ತುಸು ಚೆನ್ನಾಗಿಯೇ ಆಡಿದೆ. ಏಳು ಪಂದ್ಯಗಳಲ್ಲಿ ಮೂರು ಗೆದ್ದು ಎರಡರಲ್ಲಿ ಸೋತಿದೆ. ಎರಡು ಮಳೆಯಿಂದಾಗಿ ರದ್ದಾಗಿದ್ದವು. ಒಟ್ಟು 16 ಪಾಯಿಂಟ್‌ಗಳು ಅದರ ಖಾತೆಯಲ್ಲಿವೆ. ತಂಡವು ಈ ಕೊನೆಯ ಪಂದ್ಯದಲ್ಲಿ ಗೆದ್ದರೂ ನಾಕೌಟ್ ಹಂತದ ಅವಕಾಶ ಸಿಗುವುದು ಕಷ್ಟ. ಏಕೆಂದರೆ ಎ ಮತ್ತು ಬಿ ಗುಂಪಿನ ಜಂಟಿ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಮೊದಲ ಐದು ತಂಡಗಳು ಎಂಟರ ಘಟ್ಟಕ್ಕೆ ಪ್ರವೇಶಿಸಲಿವೆ.

ADVERTISEMENT

ಆದರೆ ಕರ್ನಾಟಕ ತಂಡವು ಈಗಾಗಲೇ ನಾಕೌಟ್ ಪ್ರವೇಶದ ಹಾದಿಯಿಂದ ಹೊರಬಿದ್ದಿದೆ. ಮುಂದಿನ ತಿಂಗಳು ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಗೂ ಮುನ್ನ ಇದೊಂದು ತಾಲೀಮು ಅಷ್ಟೇ. ಮೊದಲ ನಾಲ್ಕು ಪಂದ್ಯಗಳ ಪೈಕಿ ಸತತ ಮೂರು ಸೋಲುಗಳನ್ನು ತಂಡವು ಅನುಭವಿಸಿತ್ತು. ಒಟ್ಟು ಏಳು ಪಂದ್ಯಗಳಲ್ಲಿ ತಂಡವು ಗೆದ್ದಿರುವುದು ಎರಡೇ ಪಂದ್ಯಗಳನ್ನು. ಮೂರರಲ್ಲಿ ಸೋತಿದೆ. ಎರಡು ರದ್ದಾಗಿದ್ದವು. ಆದ್ದರಿಂದ ಈ ಪಂದ್ಯದಲ್ಲಿ ಗೆದ್ದರೆ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೆರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.