ADVERTISEMENT

ಪ್ರಿ ಕ್ವಾರ್ಟರ್‌ಗೆ ಪಂಕಜ್, ಆದಿತ್ಯ ಮೆಹ್ತಾ

ಏಷ್ಯನ್ ಸ್ನೂಕರ್‌ ಟೂರ್‌ ಟೆನ್ ರೆಡ್ಸ್‌ ಚಾಂಪಿಯನ್‌ಷಿಪ್‌: ಸೌರವ್ ಕೊಠಾರಿ, ಸಂದೀಪ್ ಗುಲಾಟಿಗೆ ಸೋಲು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 19:18 IST
Last Updated 24 ಏಪ್ರಿಲ್ 2019, 19:18 IST
ಆದಿತ್ಯ ಮೆಹ್ತಾ ಅವರ ಆಟದ ಶೈಲಿ –ಪ್ರಜಾವಾಣಿ ಚಿತ್ರ/ಬಿ.ಎಚ್‌.ಶಿವಕುಮಾರ್‌
ಆದಿತ್ಯ ಮೆಹ್ತಾ ಅವರ ಆಟದ ಶೈಲಿ –ಪ್ರಜಾವಾಣಿ ಚಿತ್ರ/ಬಿ.ಎಚ್‌.ಶಿವಕುಮಾರ್‌   

ಬೆಂಗಳೂರು: ಗುಂಪು ಹಂತದಲ್ಲಿ ಎರಡು ದಿನವೂ ಮಿಶ್ರ ಫಲ ಕಂಡಿದ್ದ ಭಾರತದ ಪಂಕಜ್ ಅಡ್ವಾಣಿ 16ರ ಘಟ್ಟದಲ್ಲಿ ನೈಜ ಸಾಮರ್ಥ್ಯ ತೋರಿದರು. ಎದುರಾಳಿಯ ವಿರುದ್ಧ ಏಕಪಕ್ಷೀಯ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದರು.

ವಸಂತ ನಗರದ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆ ಆವರಣದಲ್ಲಿ ನಡೆಯುತ್ತಿರುವ ಎಸಿಬಿಎಸ್‌ ಏಷ್ಯನ್‌ ಸ್ನೂಕರ್ ಟೂರ್‌ 10 ರೆಡ್ಸ್ ಚಾಂಪಿಯನ್‌ಷಿಪ್‌ನ ಮೂರನೇ ಲೆಗ್‌ನ ಮೂರನೇ ದಿನ ಪಂಕಜ್‌ ಅಮೋಘ ಆಟ ಆಡಿ ಭಾರತದವರೇ ಆದ ಸೌರವ್ ಕೊಠಾರಿ ಎದುರು ಗೆಲುವು ಸಾಧಿಸಿದರು. ಎದುರಾಳಿ ಯಾವ ಹಂತದಲ್ಲೂ ಪಾರಮ್ಯ ಮರೆಯಲು ಅವಕಾಶ ನೀಡದ ಅವರು 55-44, 49-18, 64-00, 56-21, 54-51ರಲ್ಲಿ ವಿಜಯದ ನಗೆ ಸೂಸಿದರು.

16ರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಭಾರತದ ಆದಿತ್ಯ ಮೆಹ್ತಾ ಅವರು ಸಂದೀಪ್ ಗುಲಾಟಿ ವಿರುದ್ಧ 5–1ರಿಂದ ಗೆದ್ದು ಮುನ್ನುಗ್ಗಿದರು. ಮೊದಲ ಎರಡು ಫ್ರೇಮ್‌ಗಳಲ್ಲಿ ಆಧಿಪತ್ಯ ಮೆರೆದ ಅವರು ಮೂರನೇ ಫ್ರೇಮ್‌ನಲ್ಲಿ ನಿರಾಸೆ ಅನುಭವಿಸಿದರು. ಆದರೆ ನಂತರ ಸಿಡಿದೆದ್ದು ಮುನ್ನುಗ್ಗಿದರು. ಅಂತಿಮವಾಗಿ 51-15, 45-08, 99-01, 34-47, 51-01, 37-01ರಲ್ಲಿ ಜಯ ಸಾಧಿಸಿದರು.

ADVERTISEMENT

ಫಲಿತಾಂಶಗಳು: ಪ್ರಿ ಕ್ವಾರ್ಟರ್‌ ಫೈನಲ್: ಭಾರತದ ಪಂಕಜ್‌ ಅಡ್ವಾಣಿಗೆ ಸೌರವ್ ಕೊಠಾರಿ ಎದುರು 5–0ಯಿಂದ ಜಯ; ಭಾರತದ ಆದಿತ್ಯ ಮೆಹ್ತಾಗೆ ಸಂದೀಪ್ ಗುಲಾಟಿ ವಿರುದ್ಧ 5–1ರಿಂದ ಗೆಲುವು; ಥಾಯ್ಲೆಂಡ್‌ನ ಪೊಂಗ್‌ಸಕೊರ್ನ್‌ ಚೊಂಗ್‌ಜೈರಕ್‌ಗೆ ಭಾರತದ ಕಮಲ್ ಚಾವ್ಲಾ ವಿರುದ್ಧ 5–4ರಿಂದ ಜಯ; ಥಾಯ್ಲೆಂಡ್‌ನ ಥನಾವತ್ ತಿರಪೊಂಗ್‌ಪೈಬುನ್‌ಗೆ ಭಾರತದ ಲಕ್ಷ್ಮಣ್‌ ರಾವತ್ ವಿರುದ್ಧ 5–1ರಿಂದ ಗೆಲುವು; ಖತಾರ್‌ನ ಅಲಿ ಅಲೊಬೈದ್ಲಿಗೆ ಭಾರತದ ಮನನ್‌ ಚಂದ್ರ ವಿರುದ್ಧ 5–2ರಿಂದ ಗೆಲುವು; ಇರಾನ್‌ನ ಎಹ್ಸಾನ್‌ ಹೈದರಿ ನೆಜಾದ್‌ಗೆ ಸಿರಿಯಾದ ಯಜನ್‌ ಅಲ್ಹದದ್ ವಿರುದ್ಧ 5–2ರಿಂದ ಗೆಲುವು; ಹಾಂಕಾಂಗ್‌ನ ಫಂಗ್‌ ಕ್ವಾಕ್‌ ವಾಯ್‌ಗೆ ಇರಾನ್‌ನ ಅಮೀರ್ ಸರ್ಖೋಷ್‌ ಎದುರು 5–3ರಿಂದ ಜಯ; ಮ್ಯಾನ್ಮಾರ್‌ನ ಆಂಗ್‌ ಫಿಯೊಗೆ ಹಾಂಕಾಂಗ್‌ನ ಚೆಂಗ್‌ ಕಾ ವಾಯ್‌ ಎದುರು 5–3ರಿಂದ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.