ADVERTISEMENT

IPL 2024 | RR Vs DC: ಇಬ್ಬರು ವಿಕೆಟ್‌ಕೀಪರ್ ನಾಯಕರ ಮುಖಾಮುಖಿ

ರಾಜಸ್ಥಾನ ರಾಯಲ್ಸ್‌– ಡೆಲ್ಲಿ ಕ್ಯಾಪಿಟಲ್ಸ್‌ ಹಣಾಹಣಿ ಇಂದು: ರಿಷಭ್ ಪಂತ್ ಮೇಲೆ ಎಲ್ಲರ ಚಿತ್ತ

ಪಿಟಿಐ
Published 27 ಮಾರ್ಚ್ 2024, 22:09 IST
Last Updated 27 ಮಾರ್ಚ್ 2024, 22:09 IST
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್  –ಪಿಟಿಐ ಚಿತ್ರ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್  –ಪಿಟಿಐ ಚಿತ್ರ   

ಜೈಪುರ: ಭಾರತ ಕ್ರಿಕೆಟ್ ತಂಡದ ಇಬ್ಬರು ವಿಕೆಟ್‌ಕೀಪರ್‌ಗಳ ನಾಯಕತ್ವದ ತಂಡಗಳ ಮುಖಾಮುಖಿಗೆ ಸವಾಯಿ ಮಾನಸಿಂಗ್ ಕ್ರಿಕೆಟ್ ಕ್ರೀಡಾಂಗಣ ಸಜ್ಜಾಗಿದೆ.

ಗುರುವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡವು ರಿಷಭ್ ಪಂತ್ ಮುನ್ನಡೆಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕಣಕ್ಕಿಳಿಯಲಿದೆ.

ಉಭಯ ತಂಡಗಳು ತಲಾ ಒಂದು ಪಂದ್ಯ ಆಡಿವೆ. ರಾಯಲ್ಸ್‌ ತಂಡವು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದಿತ್ತು. ಅದರಲ್ಲಿ ನಾಯಕ ಸಂಜು (82 ರನ್) ಹಾಗೂ ರಿಯಾನ್ ಪರಾಗ್ (43 ರನ್) ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ವೇಗಿ ಟ್ರೆಂಟ್‌ ಬೌಲ್ಡ್ ಎರಡು ವಿಕೆಟ್ ಗಳಿಸಿ ಮಿಂಚಿದ್ದರು. ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ಹಾಗೂ ಆರ್. ಅಶ್ವಿನ್ ಅವರು ಎದುರಾಳಿಗಳ ರನ್‌ ಗಳಿಕೆಗೆ ತಡೆಯೊಡ್ಡಿದ್ದರು.

ADVERTISEMENT

ಆದರೆ, ಡೆಲ್ಲಿ ತಂಡವು ಇನ್ನೂ ಗೆಲುವಿನ ಖಾತೆ ತೆರೆಯಬೇಕಿದೆ. ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಮಣಿದಿತ್ತು. ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಿಷಭ್ ಸುಮಾರು 15 ತಿಂಗಳು ಕ್ರಿಕೆಟ್‌ನಿಂದ ದೂರವಿದ್ದರು. ಪಂಜಾಬ್ ಎದುರಿನ ಪಂದ್ಯದ ಮೂಲಕ ಕಣಕ್ಕೆ ಮರಳಿದ್ದ ಅವರು ಬ್ಯಾಟಿಂಗ್ ಮತ್ತು ವಿಕೆಟ್‌ಕೀಪಿಂಗ್ ನಿಭಾಯಿಸಿದ್ದರು.

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಅವರು 13 ಎಸೆತಗಳಲ್ಲಿ 18 ರನ್‌ ಗಳಿಸಿದ್ದರು. ತಮ್ಮ ಹಿಂದಿನ ನೈಜ ಆಟಕ್ಕೆ ಮರಳುವ ಪ್ರಯತ್ನ ಮಾಡಿದ್ದರು. ಅವರ ಫಿಟ್‌ನೆಸ್‌ನಲ್ಲಿ ಇನ್ನೂ ಕೊಂಚ ಜಡತ್ವ ಇರುವುದು ಹಾವಭಾವಗಳಿಂದ ಕಂಡುಬಂದಿತ್ತು. ಅವರು ಪಂದ್ಯದಿಂದ ಪಂದ್ಯಕ್ಕೆ ತಮ್ಮ ಆಟವನ್ನು ಉತ್ಕೃಷ್ಟಗೊಳಿಸುವ ವಿಶ್ವಾಸ ತಂಡದ ಕೋಚ್ ರಿಕಿ ಪಾಂಟಿಂಗ್ ಅವರಿಗೆ ಇದೆ.

‘ತಂಡಕ್ಕೆ ನಾಯಕ ಮರಳಿರುವುದು ಖುಷಿಯಾಗಿದೆ. ರಿಷಭ್ ನಮ್ಮ ಫ್ರ್ಯಾಂಚೈಸಿಯ ಜೀವನಾಡಿಯಿದ್ದಂತೆ. ಅವರು ಮರಳಿರುವುದರಿಂದ ಬಳಗ ಬಲಾಢ್ಯವಾಗಿದೆ’ ಎಂದು ಮೊದಲ ಪಂದ್ಯಕ್ಕೂ ಮುನ್ನ ಪಾಂಟಿಂಗ್ ಹೇಳಿದ್ದರು.

ಬ್ಯಾಟಿಂಗ್‌ನಲ್ಲಿ ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಅಭಿಷೆಕ್ ಪೊರೆಲ್ ಹಾಗೂ ಶಾಯ್ ಹೋಪ್  ಉತ್ತಮ ಲಯದಲ್ಲಿದ್ದಾರೆ. ಸ್ಪಿನ್ನರ್ ಕುಲದೀಪ್, ಅಕ್ಷರ್ ಪಟೇಲ್, ವೇಗಿ ಖಲೀಲ್ ಅಹಮದ್ ಹಾಗೂ ಅನುಭವಿ ಇಶಾಂತ್ ಶರ್ಮಾ ತಂಡದ ಬೌಲಿಂಗ್ ವಿಭಾಗವನ್ನು ಗಟ್ಟಿಗೊಳಿಸಿದ್ದಾರೆ. ಆತಿಥೇಯ ತಂಡದ ಆರಂಭಿಕ ಯಶಸ್ವಿ ಜೈಸ್ವಾಲ್, ಸಂಜು, ಧ್ರುವ ಜುರೇಲ್, ಜೋಸ್ ಬಟ್ಲರ್ ಅವರನ್ನು ಕಟ್ಟಿಹಾಕುವುದು ಈ ಬೌಲಿಂಗ್ ಪಡೆಯ ಮುಂದಿರುವ ದೊಡ್ಡ ಸವಾಲು. 

ಇಲ್ಲಿಯ ಪಿಚ್‌ನಲ್ಲಿ ಯಥಾಪ್ರಕಾರ ಬೌಂಡರಿ, ಸಿಕ್ಸರ್‌ಗಳು ಸಿಡಿಯುವ ಎಲ್ಲ ಸಾಧ್ಯತೆಗಳು ಈ ಪಂದ್ಯದಲ್ಲಿಯೂ ಇವೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೊ ಸಿನಿಮಾ ಆ್ಯಪ್

ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್  –ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.