ADVERTISEMENT

ಗಾಯದೊಂದಿಗೆ ‘ಆಟ’ವಾಡುವುದೇ ಪಂತ್ ಶೈಲಿ!

ಅನಿಲ್ ಕುಂಬ್ಳೆ ದಿಟ್ಟ ಆಟ ನೆನಪಿಸಿದ ರಿಷಭ್

ಗಿರೀಶ ದೊಡ್ಡಮನಿ
Published 25 ಜುಲೈ 2025, 1:12 IST
Last Updated 25 ಜುಲೈ 2025, 1:12 IST
ಭಾರತ ತಂಡದ ರಿಷಭ್ ಪಂತ್ 
ಭಾರತ ತಂಡದ ರಿಷಭ್ ಪಂತ್    

ಬೆಂಗಳೂರು: ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಕ್ರಿಕೆಟ್ ಅಭಿಮಾನಿಗಳಲ್ಲಿ ಒಬ್ಬರಾಗಿದ್ದ ಆ ಬ್ರಿಟಿಷ್ ಮಹಿಳೆಯ ಮೇಲೆ ಟಿ.ವಿ. ಕ್ಯಾಮೆರಾದ ಕಣ್ಣು ಬಹಳ ಹೊತ್ತು ನಿಂತಿತು. ಆಕೆಯ ಮುಖದಲ್ಲಿ ಅಚ್ಚರಿ, ಮೆಚ್ಚುಗೆಯ ಭಾವ ಇದ್ದವು. ಆಕೆಯ ದೃಷ್ಟಿ ಮಾತ್ರ ಭಾರತದ ಪೆವಿಲಿಯನ್‌ ಮೆಟ್ಟಿಲುಗಳ ಮೇಲೆ ನೆಟ್ಟಿತ್ತು. ಆ ಮೆಟ್ಟಿಲುಗಳ ಮೇಲೆ ಕುಂಟುತ್ತ ಇಳಿಯುತ್ತಿದ್ದ ರಿಷಭ್ ಪಂತ್ ಅವರನ್ನು ನೋಡಿದ ಆಕೆಯ ಕಣ್ಣಂಚುಗಳು ತೇವಗೊಂಡಿದ್ದು ಸ್ಪಷ್ಟವಾಗಿತ್ತು. ಆಕೆಯಷ್ಟೇ ಅಲ್ಲ ಗುರುವಾರ ರಿಷಭ್ ಅವರ ಎದೆಗಾರಿಕೆ ನೋಡಿದವರೆಲ್ಲರೂ ಇದೇ ರೀತಿ ಪ್ರತಿಕ್ರಿಯಿಸಿದ್ದರಲ್ಲವೇ?

ಆದರೆ ವಿಕೆಟ್‌ಕೀಪರ್ ರಿಷಭ್ ಅವರಿಗೆ ಗಾಯದೊಂದಿಗೆ ಆಟವಾಡುವುದು ಒಂದು ರೀತಿಯಲ್ಲಿ ‘ಜೀವನಶೈಲಿ’ಯಾಗಿದೆ. ಮೂರು ವರ್ಷಗಳ ಹಿಂದೆ ದೊಡ್ಡ ಅಪಘಾತದಲ್ಲಿ ಜೀವನ್ಮರಣದ ಹೋರಾಟ ಮಾಡಿ ಬದುಕಿ ಬಂದ ಮೇಲೆ ಕ್ರಿಕೆಟ್ ಅಂಗಳದಲ್ಲಿ ಆಗುವ ಗಾಯಗಳಿಗೆ ಪಂತ್ ಹೆದರುತ್ತಲೇ ಇಲ್ಲ. ಬುಧವಾರ ಬ್ಯಾಟಿಂಗ್ ಮಾಡುವಾಗ ವೇಗಿ ಕ್ರಿಸ್ ವೋಕ್ಸ್ ಅವರ ಯಾರ್ಕರ್‌  ಎಸೆತವು ರಿಷಭ್ ಕಾಲ್ಬೆರಳಿಗೆ ಅಪ್ಪಳಿಸಿತ್ತು. ರಕ್ತ ಜಿನುಗಿತ್ತು. ಗಾಲ್ಫ್‌ ಕಾರ್ಟ್‌ನಲ್ಲಿ ಪೆವಿಲಿಯನ್‌ಗೆ ಮರಳಿದ್ದರು. ಗುರುವಾರ ‘ಅವರ ಕಾಲ್ಬೆರಳು ಮೂಳೆಮುರಿತವಾಗಿದೆ. ಮುಂದಿನ ಆರು ವಾರ ಅವರು ವಿಶ್ರಾಂತಿ ಪಡೆಯಬೇಕು’ ಎಂಬ ಮಾಧ್ಯಮ ಪ್ರಕಟಣೆಯೂ ಹೊರಬಿದ್ದಿತ್ತು. ಅದರಿಂದಾಗಿ ನಾಲ್ಕನೇ ಟೆಸ್ಟ್‌ನ ಎರಡನೇ ದಿನ ಅವರು ತಮ್ಮ ಬ್ಯಾಟಿಂಗ್ ಮುಂದುವರಿಸುವುದು ಅನುಮಾನವಿತ್ತು. ಆದರೆ ಎಲ್ಲರ ಲೆಕ್ಕಾಚಾರ ಬುಡಮೇಲು ಮಾಡಿದ ಅವರು ಕ್ರೀಸ್‌ಗೆ ಕಾಲಿಟ್ಟರು. ಕುಂಟುತ್ತಲೇ ಓಡಾಡಿದರು. ಆದರೆ ಕ್ರೀಸ್‌ನಲ್ಲಿ ಬಿದ್ದು, ಎದ್ದು ಪ್ರಯೋಗಿಸುವ ಹೊಡೆತಗಳಿಗೆ ಕಡಿವಾಣ ಹಾಕಿದರು.  

ರಿಷಭ್ ಅವರ ಆಟವು, 2002ರಲ್ಲಿ ಸ್ಪಿನ್ ದಿಗ್ಗಜ  ಅನಿಲ್ ಕುಂಬ್ಳೆಯವರು ತೋರಿದ್ದ ವೀರಾವೇಷದ  ಆಟವನ್ನೂ ನೆನಪಿಗೆ ತಂದಿತು.  ಆ್ಯಂಟಿಗಾದಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್‌ನಲ್ಲಿ ಮರ್ವಿನ್ ಡಿಲ್ಲೊನ್ ಹಾಕಿದ್ದ ಬೌನ್ಸರ್‌ ಎಸೆತವು ಕುಂಬ್ಳೆಯ  ಅವರ ದವಡೆಗೆ ಅಪ್ಪಳಿಸಿತ್ತು. ಇದರಿಂದ ಅವರು ತೀವ್ರವಾಗಿ ಗಾಯಗೊಂಡರು. ಆದರೆ ವಿಂಡೀಸ್ ಬ್ಯಾಟಿಂಗ್‌ ಆರಂಭಿಸಿದಾಗ ಕುಂಬ್ಳೆ ಬೌಲಿಂಗ್ ಮಾಡಲು ಕಣಕ್ಕಿಳಿದರು. ತಮ್ಮ ದವಡೆಗೆ ಬ್ಯಾಂಡೇಜ್ ಹಾಕಿಸಿಕೊಂಡೇ ಆಡಿದರು.  

ADVERTISEMENT

2021ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಹನುಮವಿಹಾರಿ ಕೂಡ ಸ್ನಾಯುಸೆಳೆತದ ಅಪಾರ ನೋವಿನಲ್ಲಿಯೂ ದೀರ್ಘ ಇನಿಂಗ್ಸ್ ಆಡಿ ಭಾರತವನ್ನು ಸೋಲಿನಿಂದ ಪಾರು ಮಾಡಿದ್ದರು. 2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ  ಯುವರಾಜ್‌ ಸಿಂಗ್ ಅವರು ತಮ್ಮ ಅನಾರೋಗ್ಯದ ನಡುವೆಯೂ ತಂಡದ ಗೆಲುವಿನ ರೂವಾರಿಯಾಗಿದ್ದರು. ಟೂರ್ನಿಯ ನಂತರ ಯುವರಾಜ್ ಸಿಂಗ್‌ಗೆ ಕ್ಯಾನ್ಸರ್‌ ಇರುವುದು ಬಹಿರಂಗವಾಗಿತ್ತು. 2010ರಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ಎದುರು ನಡೆದಿದ್ದ ಟೆಸ್ಟ್‌ನಲ್ಲಿ ವಿವಿಎಸ್ ಲಕ್ಷ್ಮಣ್ ಅವರು ತಮಗಿದ್ದ ವಿಪರೀತ ಬೆನ್ನುನೋವಿನಲ್ಲಿಯೂ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಸೊಂಟಕ್ಕೆ ಬೆಲ್ಟ್‌ ಕಟ್ಟಿಕೊಂಡು ಅವರು ಬ್ಯಾಟಿಂಗ್ ಮಾಡಿದ್ದರು. 

ರಿಷಭ್ ಕುಂಟುತ್ತ, ನೋವನ್ನು ಅವಡುಗಚ್ಚಿ ತಡೆದುಕೊಳ್ಳುತ್ತ ಆಡಿದರು. ಮೂರನೇ ಟೆಸ್ಟ್‌ನಲ್ಲಿಯೂ ಅವರ ಕೈಬೆರಳಿಗೆ ಪೆಟ್ಟಾಗಿತ್ತು. ಅದರಲ್ಲಿಯೇ ಬ್ಯಾಟಿಂಗ್ ಮಾಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.