ಲಖನೌ (ಪಿಟಿಐ): ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ದೀರ್ಘ ಕಾಲದ ನಂತರ ಫಿನಿಷರ್ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಿದರು. ಶಿವಂ ದುಬೆ (43, 37ಎ) ಜೊತೆ ಮುರಿಯದ ಆರನೇ ವಿಕೆಟ್‌ಗೆ ಉಪಯುಕ್ತ ಜೊತೆಯಾಟವಾಡಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲುವಿನ ಹಳಿಗೆ ಮರಳಿಸಿದರು.
ಆತಿಥೇಯ ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಸೋಮವಾರ ನಡೆದ ಈ ಐಪಿಎಲ್ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ಐದು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಈ ಬಾರಿಯ ಲೀಗ್‌ನಲ್ಲಿ ನಾಯಕ ರಿಷಭ್ ಪಂತ್ (63, 49ಎ, 4x4, 6x4) ಗಳಿಸಿದ ಮೊದಲ ಅರ್ಧ ಶತಕದ ನೆರವಿನಿಂದ ಲಖನೌ ತಂಡ 7 ವಿಕೆಟ್‌ಗೆ 166 ರನ್‌ಗಳ ಗೌರವಾರ್ಹ ಮೊತ್ತ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಧೋನಿ ಬಳಗ 3 ಎಸೆತಗಳಿರುವಂತೆ 5 ವಿಕೆಟ್‌ಗೆ 168 ರನ್ ಹೊಡೆಯಿತು.
ಆವೇಶ್ ಖಾನ್ ಮಾಡಿದ ಕೊನೆಯ ಓವರಿನ ಮೂರನೇ ಎಸೆತವನ್ನು ದುಬೆ ಅವರು ಕವರ್ಸ್ ಬೌಂಡರಿಗೆ ಅಟ್ಟಿ ಗೆಲುವನ್ನು ಪೂರೈಸಿದರು. ಕೀಪಿಂಗ್‌ನಲ್ಲೂ ಮಿಂಚಿದ್ದ ಧೋನಿ 11 ಎಸೆತಗಳಲ್ಲಿ ಅಜೇಯ 26 ರನ್ (4x4, 6x1) ಬಾರಿಸಿದರು. ದುಬೆ ಜೊತೆ ಮುರಿಯದ ಆರನೇ ವಿಕೆಟ್‌ಗೆ ಹರಿದುಬಂದ 57 ರನ್‌ಗಳು ತಂಡವನ್ನು ದಡ ಸೇರಿಸಿದವು.
ಸ್ಪಿನ್ನರ್‌ಗಳಾದ ರವಿ ಬಿಷ್ಣೋಯಿ (3–0–18–2) ಮತ್ತು ದಿಗ್ವೇಶ್ ರಾಠಿ (4–0–23–1) ಅವರು ಒಂದು ಹಂತದಲ್ಲಿ ಚೆನ್ನೈ ತಂಡವನ್ನು 15 ಓವರುಗಳ ಬಳಿಕ 5 ವಿಕೆಟ್‌ಗೆ 111 ರನ್‌ಗಳಿಗೆ ನಿಯಂತ್ರಿಸಿದ್ದರು. ಆದರೆ ದುಬೆ ಜೊತೆಗೂಡಿದ ಧೋನಿ ಈ ಬಾರಿ ನಿರಾಸೆಗೊಳಿಸಲಿಲ್ಲ.
ಪಂತ್ ಅರ್ಧಶತಕ: ಇದಕ್ಕೆ ಮೊದಲು, ಪಂತ್ ಹಾಲಿ ಐಪಿಎಲ್‌ನಲ್ಲಿ ಲಯ ಕಂಡುಕೊಂಡು ಅರ್ಧ ಶತಕ ದಾಖಲಿಸಿದರು. ಟಾಸ್ ಗೆದ್ದು ಬೌಲಿಂಗ್ ಮಾಡಲು ತೀರ್ಮಾನಿಸಿದ ನಂತರ ಚೆನ್ನೈ ತಂಡಕ್ಕೆ ‘ಕನಸಿನ ಆರಂಭ’ ದೊರೆಯಿತು. ಎಡಗೈ ವೇಗಿ ಖಲೀಲ್ ಅಹ್ಮದ್ (38ಕ್ಕೆ1) ಮೊದಲ ಓವರಿನಲ್ಲೇ ಮರ್ಕರಂ (6) ಅವರ ವಿಕೆಟ್ ಪಡೆದರು. ನೂರನೇ ಪಂದ್ಯ ಆಡುತ್ತಿರುವ ರಾಹುಲ್ ತ್ರಿಪಾಠಿ ಹಿಂದಕ್ಕೆ ಓಡುತ್ತಲೇ ಮಿಡ್‌ಆಫ್‌ನಲ್ಲಿ ಅಮೋಘ ರೀತಿಯಲ್ಲಿ ಪಡೆದ ಕ್ಯಾಚ್ ಇದಕ್ಕೆ ಕಾರಣವಾಯಿತು.
ಎರಡು ಓವರುಗಳ ಬಳಿಕ ವೇಗಿ ಅನ್ಶುಲ್ ಕಾಂಭೋಜ್ ಅವರು ಅಮೋಘ ಲಯದಲ್ಲಿರುವ ನಿಕೋಲಸ್ ಪೂರನ್ (8, 9ಎ) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಕಳೆದ ಪಂದ್ಯ ತಪ್ಪಿಸಿಕೊಂಡಿದ್ದ ಮಿಚೆಲ್ ಮಾರ್ಷ್ ಮತ್ತು ಪಂತ್ ಮೂರನೇ ವಿಕೆಟ್‌ಗೆ 50 ರನ್ ಸೇರಿಸಿ ಕುಸಿತ ತಪ್ಪಿಸಿದರು.
ಮಾರ್ಷ್ ವಿಕೆಟ್ ಕಳೆದುಕೊಂಡ ನಂತರ ಆಡಲಿಳಿದ ಆಯುಷ್ ಬಡೋನಿ (22) ರನ್ ವೇಗ ಹೆಚ್ಚಿಸುವ ಭರದಲ್ಲಿ ಧೋನಿ ಅವರಿಂದ ಮಿಂಚಿನ ಸ್ಟಂಪಿಂಗ್‌ಗೆ ಒಳಗಾದರು. ಇದು ಅವರ 46ನೇ ಸ್ಟಂಪಿಂಗ್. 155 ಕ್ಯಾಚುಗಳನ್ನು ಪಡೆದಿದ್ದ ಅವರು ಐಪಿಎಲ್‌ನಲ್ಲಿ 200 ಕ್ಯಾಚ್/ಸ್ಟಂಪಿಂಗ್ ಮೈಲಿಗಲ್ಲು ತಲುಪಿದ ಮೊದಲ ವಿಕೆಟ್ ಕೀಪರ್ ಎನಿಸಿದರು.
ಪಂತ್ ಅವರು ಎದುರಾಳಿ ಸ್ಪಿನ್ನರ್ ನೂರ್ ಅಹ್ಮದ್ (4–0–13–0) ಎದುರು ಪರದಾಡಿದರೂ, ಪಥಿರಾಣ ಮತ್ತು ಇತರ ವೇಗಿಗಳನ್ನು ವಿಶ್ವಾಸದಿಂದ ಎದುರಿಸಿದರು.
ಸಂಕ್ಷಿಪ್ತ ಸ್ಕೋರು: ಲಖನೌ ಸೂಪರ್ ಜೈಂಟ್ಸ್: 20 ಓವರುಗಳಲ್ಲಿ 7ಕ್ಕೆ 166 (ಮಿಚೆಲ್ ಮಾರ್ಷ್ 30, ರಿಷಭ್ ಪಂತ್ 63, ಆಯುಷ್ ಬಡೋನಿ 22, ಅಬ್ದುಲ್ ಸಮದ್ 20; ಖಲೀಲ್ ಅಹ್ಮದ್ 38ಕ್ಕೆ1, ರವೀಂದ್ರ ಜಡೇಜ 24ಕ್ಕೆ2, ಮಥೀಶ ಪಥಿರಾಣ 45ಕ್ಕೆ2);
ಚೆನ್ನೈ ಸೂಪರ್ ಕಿಂಗ್ಸ್: 19.3 ಓವರುಗಳಲ್ಲಿ 5 ಕ್ಕೆ 168 (ಶೇಖ್ ರಷೀದ್ 27, ರಚಿನ್ ರವೀಂದ್ರ 37, ಶಿವಂ ದುಬೆ ಔಟಾಗದೇ 43, ಎಂ.ಎಸ್.ಧೋನಿ ಔಟಾಗದೇ 26; ರಾಠಿ 23ಕ್ಕೆ1, ಆವೇಶ್ ಖಾನ್ 32ಕ್ಕೆ1, ರವಿ ಬಿಷ್ಣೋಯಿ 18ಕ್ಕೆ2, ಏಡನ್ ಮರ್ಕರಂ 25ಕ್ಕೆ1); ಪಂದ್ಯದ ಆಟಗಾರ: ಮಹೇಂದ್ರ ಸಿಂಗ್ ಧೋನಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.