ADVERTISEMENT

WPL | RCB Vs MI: ಎಲಿಸ್ ಪೆರಿಗೆ ದಾಖಲೆಯ ಗರಿ

ಪಿಟಿಐ
Published 12 ಮಾರ್ಚ್ 2024, 16:38 IST
Last Updated 12 ಮಾರ್ಚ್ 2024, 16:38 IST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಲಿಸ್ ಪೆರಿ ಬೌಲಿಂಗ್  –ಪಿಟಿಐ ಚಿತ್ರ 
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಲಿಸ್ ಪೆರಿ ಬೌಲಿಂಗ್  –ಪಿಟಿಐ ಚಿತ್ರ    

ನವದೆಹಲಿ: ಆಸ್ಟ್ರೇಲಿಯನ್ ಆಲ್‌ರೌಂಡರ್ ಎಲಿಸ್ ಪೆರಿ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಐತಿಹಾಸಿಕ ಸಾಧನೆ ಮಾಡಿದರು. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪೆರಿ (4–0–15–6) ಅವರ ದಾಳಿಯ ಮುಂದೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಸಾಧಾರಣ ಮೊತ್ತ ಕಲೆಹಾಕಿತು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ 113 ರನ್‌ಗಳ ಸಾಧಾರಣ ಗುರಿಯನ್ನು ಆರ್‌ಸಿಬಿಗೆ ನೀಡಿತು. ಡಬ್ಲ್ಯುಪಿಎಲ್‌ನಲ್ಲಿ ಪೆರಿ ಅವರ ಸಾಧನೆಯು ಶ್ರೇಷ್ಠ ಬೌಲಿಂಗ್ ದಾಖಲೆ ಗೌರವ ಗಳಿಸಿತು. 

ಟಾಸ್ ಗೆದ್ದ ಬೆಂಗಳೂರು ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ತಂಡಕ್ಕೆ ಹೆಯಲಿ ಮ್ಯಾಥ್ಯೂಸ್ (26; 23ಎ) ಮತ್ತು ಸಜೀವನ್ ಸಜನಾ (30; 21ಎ) ಜೋಡಿಯು ಪವರ್‌ಪ್ಲೇನಲ್ಲಿ 43 ರನ್‌ ಸೇರಿಸಿದರು. ಇದರಿಂದಾಗಿ ತಂಡವು ದೊಡ್ಡ ಮೊತ್ತ ಪೇರಿಸುವ ಭರವಸೆ ಮೂಡಿತ್ತು. 

ADVERTISEMENT

ಆದರೆ, ಆರನೇ ಓವರ್‌ನಲ್ಲಿ ಸೋಫಿ ಡಿವೈನ್ ಬೌಲಿಂಗ್‌ನಲ್ಲಿ ಮ್ಯಾಥ್ಯೂಸ್‌ ಕ್ಯಾಚ್ ಪಡೆದ ಎಲಿಸ್‌ ಪೆರಿ  ಸಂಭ್ರಮಿಸಿದರು. ನಂತರ ಬೌಲಿಂಗ್‌ನಲ್ಲಿ ಆರ್ಭಟಿಸಿದರು.

ಒಂಬತ್ತನೇ ಓವರ್‌ನಲ್ಲಿ ಸಜನಾ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಡಗ್‌ಔಟ್ ಮಾರ್ಗ ತೋರಿಸಿದರು. 11ನೇ ಓವರ್‌ನಲ್ಲಿ ಅಮೆಲಿಯಾ ಕೆರ್ ಹಾಗೂ ಅಮನ್ಜೋತ್ ಕೌರ್ ಅವರಿಗೂ ಕಾಲೂರಲು ಬಿಡಲಿಲ್ಲ. ಅವರ ನೇರ ಎಸೆತಗಳಿಗೆ ಬ್ಯಾಟರ್‌ಗಳು ಎಲ್‌ಬಿಡಬ್ಲ್ಯು ಮತ್ತು ಕ್ಲೀನ್‌ ಬೌಲ್ಡ್‌ ಆದರು. ಪೂಜಾ ವಸ್ತ್ರಕರ್ ಮತ್ತು ನತಾಲಿ ಶಿವರ್ ಬ್ರಂಟ್ (10 ರನ್) ವಿಕೆಟ್‌ಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡರು. 

ಉಳಿದ ಎರಡು ವಿಕೆಟ್‌ಗಳು ಸೋಫಿ ಮಾಲಿನೆ ಮತ್ತು ಬೆಂಗಳೂರಿನ ಆಟಗಾರ್ತಿ ಶ್ರೇಯಾಂಕಾ ಪಾಟೀಲ ಅವರ ಪಾಲಾದವು. ಮುಂಬೈನ ಕೇವಲ ನಾಲ್ಕು ಬ್ಯಾಟರ್‌ಗಳು ಮಾತ್ರ ಎರಡಂಕಿ ಮುಟ್ಟಿದರು. ನಾಯಕಿ ಕೌರ್ ಖಾತೆಯನ್ನೇ ತೆರೆಯಲಿಲ್ಲ.

ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್: 19 ಓವರ್‌ಗಳಲ್ಲಿ 113 (ಹೆಯಲಿ ಮ್ಯಾಥ್ಯೂಸ್ 26, ಸಜೀವನ್ ಸಜನಾ 30, ಪ್ರಿಯಾಂಕಾ ಬಾಲಾ  ಔಟಾಗದೆ 19, ಎಲಿಸ್ ಪೆರಿ 15ಕ್ಕೆ6) 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಲಿಸ್ ಪೆರಿ ಅವರನ್ನು ಅಭಿನಂದಿಸಿದ ಸಹ ಆಟಗಾರ್ತಿಯರು   –ಪಿಟಿಐ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.