ADVERTISEMENT

ಕ್ರಿಕೆಟ್: ಸ್ಟಾರ್ಕ್‌ ದಾಳಿಗೆ ತತ್ತರಿಸಿದ ಕಿವೀಸ್

ಏಜೆನ್ಸೀಸ್
Published 13 ಡಿಸೆಂಬರ್ 2019, 19:45 IST
Last Updated 13 ಡಿಸೆಂಬರ್ 2019, 19:45 IST
ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ವೈಖರಿ  –ಎಎಫ್‌ಪಿ ಚಿತ್ರ
ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ವೈಖರಿ  –ಎಎಫ್‌ಪಿ ಚಿತ್ರ   

ಪರ್ತ್ : ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರ ಬಿರುಗಾಳಿ ವೇಗದ ದಾಳಿಗೆ ನ್ಯೂಜಿಲೆಂಡ್ ತಂಡವು ತತ್ತರಿಸಿತು.

ಇಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಮಾರ್ನಸ್ ಲಾಬುಶೇನ್ (143 ರನ್) ಶತಕ ಮತ್ತು ಟ್ರಾವಿಸ್ ಹೆಡ್ (56 ರನ್) ಅರ್ಧಶತಕದ ಬಲದಿಂದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 146.2 ಓವರ್‌ಗಳಲ್ಲಿ 416 ರನ್‌ ಗಳಿಸಿತು. ಕಿವೀಸ್ ತಂಡದ ಟಿಮ್ ಸೌಥಿ ಮತ್ತು ನೀಲ್ ವಾಗ್ನರ್ ಅವರು ತಲಾ ನಾಲ್ಕು ವಿಕೆಟ್ ಗಳಿಸಿದರು.

ಅದಕ್ಕುತ್ತರವಾಗಿ ನ್ಯೂಜಿಲೆಂಡ್ ತಂಡವು ಎರಡನೇ ದಿನವಾದ ಶುಕ್ರವಾರ ದಿನದಾಟದ ಅಂತ್ಯಕ್ಕೆ 32 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 109 ರನ್‌ ಗಳಿಸಿದೆ. ಇದಕ್ಕೆ ಕಾರಣವಾಗಿದ್ದು ಸ್ಟಾರ್ಕ್ (31ಕ್ಕೆ4) ಬೌಲಿಂಗ್.

ADVERTISEMENT

ಟಾಮ್ ಲಥಾಮ್, ನಾಯಕ ಕೇನ್ ವಿಲಿಯಮ್ಸನ್, ಹೆನ್ರಿ ನಿಕೋಲ್ಸ್‌ ಮತ್ತು ನೀಲ್ ವಾಗ್ನರ್ ವಿಕೆಟ್‌ಗಳನ್ನು ಗಳಿಸಿದರು. ಲಥಾಮ್ ಮತ್ತು ನೀಲ್ ಖಾತೆಯನ್ನೇ ತೆರೆಯಲಿಲ್ಲ. ಸ್ಟಾರ್ಕ್‌ಗೆ ಉತ್ತಮ ಜೊತೆ ನೀಡಿದ ಹ್ಯಾಜಲ್‌ವುಡ್ ಆರಂಭಿಕ ಆಟಗಾರ ಜೀತ್ ರಾವಳ್ (1) ವಿಕೆಟ್‌ ಕಿತ್ತರು.

ಆದರೆ ಆಸ್ಟ್ರೇಲಿಯಾದ ವೇಗಿಗಳ ದಾಳಿಯನ್ನು ದಿಟ್ಟತನದಿಂದ ಎದುರಿಸಿದ ರಾಸ್ ಟೇಲರ್ (ಬ್ಯಾಟಿಂಗ್ 66, 86ಎ, 8ಬೌಂ) ತಂಡದ ಹೋರಾಟವನ್ನು ಜೀವಂತವಾಗಿಟ್ಟಿದ್ದಾರೆ. ಅವರೊಂದಿಗೆ ಬ್ರಾಡ್ಲಿ ವಾಟ್ಲಿಂಗ್ ಕೂಡ ಕ್ರೀಸ್‌ನಲ್ಲಿದ್ದಾರೆ. ಎಂಟು ಎಸೆತಗಳನ್ನು ಎದುರಿಸಿರುವ ಅವರು ಇನ್ನೂ ಖಾತೆ ತೆರೆದಿಲ್ಲ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 146.2 ಓವರ್‌ಗಳಲ್ಲಿ 416 (ಡೇವಿಡ್ ವಾರ್ನರ್ 43, ಮಾರ್ನಸ್ ಲಾಬುಶೇನ್ 143, ಸ್ಟೀವ್ ಸ್ಮಿತ್ 43, ಟ್ರಾವಿಸ್ ಹೆಡ್ 56, ಟಿಮ್ ಪೆನ್ 39, ಪ್ಯಾಟ್ ಕಮಿನ್ಸ್ 20, ಮಿಚೆಲ್ ಸ್ಟಾರ್ಕ್ 30, ಟಿಮ್ ಸೌಥಿ 93ಕ್ಕೆ4, ನೀಲ್ ವಾಗ್ನರ್ 92ಕ್ಕೆ4) ನ್ಯೂಜಿಲೆಂಡ್: 32 ಓವರ್‌ಗಳಲ್ಲಿ 5ಕ್ಕೆ109 (ಕೇನ್ ವಿಲಿಯಮ್ಸನ್ 34, ರಾಸ್ ಟೇಲರ್ ಬ್ಯಾಟಿಂಗ್ 66, ಮಿಚೆಲ್ ಸ್ಟಾರ್ಕ್ 31ಕ್ಕೆ4)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.