ADVERTISEMENT

ಕ್ರಿಕೆಟಿಗರ ಕಂಗಳಲ್ಲಿ ’ಪಿಂಕ್ ಟೆಸ್ಟ್’ ಕನಸಿನ ಬಿಂಬ

ಚೊಚ್ಚಲ ಹಗಲು–ರಾತ್ರಿ ಟೆಸ್ಟ್ ಪಂದ್ಯ ಆಯೋಜನೆಗೆ ಈಡನ್ ಸಿದ್ಧ

ಪಿಟಿಐ
Published 19 ನವೆಂಬರ್ 2019, 19:45 IST
Last Updated 19 ನವೆಂಬರ್ 2019, 19:45 IST
ಹಗಲು ರಾತ್ರಿ ಟೆಸ್ಟ್ ಪಂದ್ಯ ನಡೆಯಲಿರುವ ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನವನ್ನು ವಿದ್ಯುತ್‌ದೀಪಗಳಿಂದ ಸಿಂಗರಿಸಲಾಗುತ್ತಿದೆ  –ಪಿಟಿಐ ಚಿತ್ರ
ಹಗಲು ರಾತ್ರಿ ಟೆಸ್ಟ್ ಪಂದ್ಯ ನಡೆಯಲಿರುವ ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನವನ್ನು ವಿದ್ಯುತ್‌ದೀಪಗಳಿಂದ ಸಿಂಗರಿಸಲಾಗುತ್ತಿದೆ  –ಪಿಟಿಐ ಚಿತ್ರ   

ಕೋಲ್ಕತ್ತ: ತಮ್ಮ ಕನಸಿನಲ್ಲಿಯೂ ನಸುಗೆಂಪು ಬಣ್ಣದ ಚೆಂಡು ಬರುತ್ತಿದೆ ಎಂದು ಟ್ವೀಟ್ ಮಾಡಿ ಸುದ್ದಿಯಾಗಿರುವ ಅಜಿಂಕ್ಯ ರಹಾನೆ ಮತ್ತು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮಂಗಳವಾರ ಕೋಲ್ಕತ್ತಕ್ಕೆ ಬಂದಿಳಿದರು.

ಭಾರತ ತಂಡದ ಆಟಗಾರರ ಪೈಕಿ ಇಲ್ಲಿಗೆ ಮೊದಲು ಬಂದವರು ಇವರಿಬ್ಬರೇ ಆಗಿದ್ದಾರೆ. ಬೆಳಿಗ್ಗೆ 9.40ಕ್ಕೆ ಇಂದೋರ್‌ನಿಂದ ಇಲ್ಲಿಗೆ ಬಂದಿಳಿದರು. ಕೆಲವು ಆಟಗಾರರು ಆಟಗಾರರು ಸಂಜೆ ಬಂದರು. ರೋಹಿತ್ ಶರ್ಮಾ ಮತ್ತು ಮಧ್ಯಮವೇಗಿ ಮೊಹಮ್ಮದ್ ಶಮಿ ಬುಧವಾರ ಇಲ್ಲಿಗೆ ಬರಲಿದ್ದಾರೆ ಎಂದು ತಂಡದ ಸ್ಥಳೀಯ ವ್ಯವಸ್ಥಾಪಕ ಸಮರ್ಥ್ ಭೌಮಿಕ್ ತಿಳಿಸಿದ್ದಾರೆ.

ಇಂದೋರ್‌ನಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಮೂರನೇ ದಿನವೇ ವಿಜಯ ಸಾಧಿಸಿತ್ತು. ಎರಡು ದಿವಸ ಅಲ್ಲಿಯೇ ಪಿಂಕ್‌ಬಾಲ್‌ ನಲ್ಲಿ ಅಭ್ಯಾಸ ಕೂಡ ನಡೆಸಿತ್ತು. ಕೋಲ್ಕತ್ತದ ಪಂದ್ಯವು ಉಭಯ ತಂಡಗಳಿಗೆ ಮೊದಲ ಪಿಂಕ್‌ ಬಾಲ್ ಟೆಸ್ಟ್ ಆಗಿದೆ. ಆದ್ದರಿಂದ ಕುತೂಹಲ ಕೆರಳಿಸಿದೆ.

ADVERTISEMENT

ಮಣಿಕಟ್ಟಿನ ಸ್ಪಿನ್ನರ್ಸ್‌ ಪರಿಣಾಮಕಾರಿ: ಹಗಲು–ರಾತ್ರಿ ಪಂದ್ಯಗಳಲ್ಲಿ ಬೆರಳುಗಳಿಂದ ಚೆಂಡನ್ನು ಸ್ಪಿನ್ ಮಾಡುವ ಬೌಲರ್‌ಗಳಿಗಿಂತಲೂ ಮಣಿಕಟ್ಟಿನ ಸ್ಪಿನ್ ಬೌಲರ್‌ಗಳು ಹೆಚ್ಚು ಪರಿಣಾಮಕಾರಿಯಾಗಬಲ್ಲರು ಎಂದು ಹಿರಿಯ ಕ್ರಿಕೆಟಿಗ ಹರಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

‘ರಿಸ್ಟ್ ಸ್ಪಿನ್ನರ್‌ಗಳ ಎಸೆತದಲ್ಲಿ ಸೀಮ್ (ಚೆಂಡಿನಲ್ಲಿರುವ ಕಪ್ಪು ದಾರದ ಹೊಲಿಗೆ) ಅನ್ನು ಗುರುತಿಸುವುದು ಬ್ಯಾಟ್ಸ್‌ಮನ್‌ಗೆ ಕಷ್ಟವಾಗುತ್ತದೆ.ಅದೇ ಫಿಂಗರ್ಸ್‌ ಸ್ಪಿನ್ನರ್‌ಗಳು ಚೆಂಡಿನ ಸೀಮ್ ಮೂಲಕವೇ ಎಸೆತಗಳನ್ನು ಪ್ರಯೋಗಿಸುತ್ತಾರೆ. ಆಗ ಅದರ ಚಲನೆಯನ್ನು ಗುರುತಿಸುವುದು ಕಷ್ಟವಲ್ಲ’ ಎಂದರು.

‘ಮಧ್ಯಾಹ್ನ 3.30 ರಿಂದ 4.30ರ ಅವಧಿಯಲ್ಲಿ ಈಡನ್ ಗಾರ್ಡನ್ ಪಿಚ್‌ನಲ್ಲಿ ಮಧ್ಯಮವೇಗಿಗಳು ಹೆಚ್ಚು ಲಾಭ ಪಡೆಯುತ್ತಾರೆ. ಹಿಂದಿನ ಇತಿಹಾಸವನ್ನು ನೋಡಿದರೆ ಮಧ್ಯಮವೇಗಿಗಳು ಹೆಚ್ಚು ವಿಕೆಟ್ ಗಳಿಸಿದ್ದಾರೆ. ಸಂಜೆಯಾದಂತೆ ಸ್ಪಿನ್ನರ್‌ಗಳಿಗೆ ಪಿಚ್ ನೆರವಾಗುವ ಸಾಧ್ಯತೆಯೂ ಹೆಚ್ಚಿವೆ. ಟೆಸ್ಟ್ ಕ್ರಿಕೆಟ್ ಬೆಳೆಯಬೇಕೆಂದರೆ ಸ್ಪಿನ್ನರ್‌ಗಳು ಹೆಚ್ಚು ಮಿಂಚುವಂತಹ ವಾತಾವರಣ ಇರಬೇಕು’ ಎಂದು ಹೇಳಿದರು.

’ಈಡನ್‌ ಗಾರ್ಡನ್‌ನಲ್ಲಿ ನಡೆದಿದ್ದ ದುಲೀಪ್ ಟ್ರೋಫಿ ಟೂರ್ನಿಯ ಹೊನಲು ಬೆಳಕಿನ ಪಂದ್ಯದಲ್ಲಿ ಕುಲದೀಪ್ ಯಾದವ್ ಹೆಚ್ಚು ಯಶಸ್ವಿಯಾಗಿದ್ದರು. ಉಳಿದ ಬೌಲರ್‌ಗಳಿಗಿಂತ ಹೆಚ್ಚು ವಿಕೆಟ್‌ಗಳನ್ನು ಗಳಿಸಿದ್ದರು. ಗೂಗ್ಲಿ ಎಸೆತಗಳ ಚಲನೆಯನ್ನು ಗುರುತಿಸುವುದು ಕಷ್ಟವಾಗುತ್ತದೆ’ ಎಂದು ಹೇಳಿದರು.

‘ಎಸ್‌ಜಿ ಗುಲಾಬಿ ಚೆಂಡಿನಲ್ಲಿ ಬೌಲಿಂಗ್ ಮಾಡುವುದು ಸ್ಪಿನ್ನರ್‌ಗಳಿಗೆ ಯಾವಾಗಲೂ ಸವಾಲಿನದ್ದು. ಇಬ್ಬನಿ ಬೀಳುವ ಸಂಜೆಯಲ್ಲಿ ಚೆಂಡು ಜಾರುತ್ತದೆ. ಅದನ್ನು ಬಿಗಿಯಾಗಿ ಹಿಡಿದು ಬೌಲಿಂಗ್ ಮಾಡುವುದು ಎಲ್ಲರ ಸ್ಪಿನ್ನರ್‌ಗಳಿಗೂ ಕಷ್ಟ’ ಎಂದು ಹರಭಜನ್ ಹೇಳಿದರು.‌

‘ನಿಗದಿಯ ಓವರ್‌ಗಳ ಪಂದ್ಯಗಳಲ್ಲಿ ಚೆಂಡು ತೇವಗೊಂಡರೆ ಲೈನ್ ಮತ್ತು ಲೆಂಗ್ತ್‌ನಲ್ಲಿ ತುಸು ಬದಲಾವಣೆ ಮಡಿಕೊಂಡು ಪ್ರಯೋಗಿಸುತ್ತಾರೆ.ಆದರೆ ಟೆಸ್ಟ್‌ ಪಂದ್ಯದಲ್ಲಿ ಹಾಗಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

ಅಭ್ಯಾಸ ಮಾಡಲು ಅಂಪೈರ್‌ಗಳಿಗೆ ಸಲಹೆ

ಕೋಲ್ಕತ್ತ: ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಕಾರ್ಯನಿರ್ವಹಿಸಲಿರುವ ಅಂಪೈರ್‌ಗಳು ಹೊನಲು ಬೆಳಕಿನಲ್ಲಿ ಪೂರ್ವಾಭ್ಯಾಸ ಮಾಡಬೇಕು. ಚೆಂಡಿನ ಚಲನೆಯನ್ನು ಗುರುತಿಸುವ ಅಭ್ಯಾಸ ಮಾಡಬೇಕು ಎಂದು ಆಸ್ಟ್ರೇಲಿಯಾದ ಮಾಜಿ ಅಂಪೈರ್ ಸೈಮನ್ ಟಾಫೆಲ್ ಮಂಗಳವಾರ ಹೇಳಿದ್ದಾರೆ. ಅಡಿಲೇಡ್‌ನಲ್ಲಿ ನಡೆದಿದ್ದ ವಿಶ್ವದ ಪ್ರಥಮ ಹಗಲು–ರಾತ್ರಿ ಟೆಸ್ಟ್‌ನಲ್ಲಿ ಐಸಿಸಿ ಅಂಪೈರ್ ತರಬೇತಿ ಮ್ಯಾನೇಜರ್ ಆಗಿ ಸೈಮನ್ ಕಾರ್ಯನಿರ್ವಹಿಸಿದ್ದರು.

‘ವಿಶೇಷ ಲೆನ್ಸ್‌ಗಳನ್ನು ಬಳಸಿ ಅಂಪೈರಿಂಗ್ ಮಾಡುವುದು ಅವರವರಿಗೆ ಬಿಟ್ಟ ವಿಚಾರ. ನೆಟ್ಸ್‌ನಲ್ಲಿ ಅವರು ಹೆಚ್ಚು ಅಭ್ಯಾಸ ಮಾಡಿಕೊಂಡಷ್ಟೂ ಒಳ್ಳೆಯದು’ ಎಂದರು.

ಚೆಂಡನ್ನು ನೀರಿನಲ್ಲಿ ಅದ್ದಿ ಬೌಲಿಂಗ್ ಮಾಡಿದ ಬೌಲರ್‌ಗಳು

ಇಂದೋರ್: ಸೋಮವಾರ ಇಲ್ಲಿಯ ಹೋಳ್ಕರ್ ಮೈದಾನದಲ್ಲಿ ಅಭ್ಯಾಸ ನಡೆಸಿದ ಬಾಂಗ್ಲಾದೇಶದ ಮಧ್ಯಮವೇಗದ ಬೌಲರ್‌ಗಳು ಚೆಂಡನ್ನು ನೀರಿನಲ್ಲಿ ಅದ್ದಿ ತೆಗೆದು ಬೌಲಿಂಗ್ ಮಾಡಿದರು.

ಕೋಲ್ಕತ್ತದಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಸಂಜೆಯ ಹೊತ್ತು ಬೀಳುವ ಇಬ್ಬನಿಯಲ್ಲಿ ಚೆಂಡು ತೇವಗೊಳ್ಳುತ್ತದೆ. ಆದ್ದರಿಂದ ಅದನ್ನು ಪ್ರಯೋಗಿಸುವುದು ಬೌಲರ್‌ಗಳಿಗೆ ಕಷ್ಟವಾಗುತ್ತದೆ. ಅದಕ್ಕಾಗಿ ಅದರ ರೂಢಿ ಮಾಡಿಕೊಳ್ಳಲು ಚೆಂಡನ್ನು ನೀರಿನಲ್ಲಿ ನೆನಸಿ ಬೌಲಿಂಗ್ ಮಾಡಿದರು.

‘ನಾನು ನೆಟ್ಸ್‌ನಲ್ಲಿ ಪಿಂಕ್ ಚೆಂಡನ್ನು ಎದುರಿಸಿದೆ. ಪಿಚ್‌ ಮೇಲೆ ಪುಟಿದ ಕೂಡಲೇ ಚೆಂಡು ಹೆಚ್ಚು ವೇಗ ಮತ್ತು ಸ್ವಿಂಗ್ ಆಗುತ್ತದೆ. ಬ್ಯಾಟ್‌ಗೆ ಬಡಿದ ಮೇಲೂ ವೇಗವಾಗಿ ಸಾಗುತ್ತದೆ. ಈ ತರಹದ ಚೆಂಡಿನ ಚಲನೆಯನ್ನು ಗುರುತಿಸಿ ಆಡುವುದು ಕ್ರಮೇಣ ರೂಢಿಯಾಗಬೇಕು’ ಎಂದು ಬಾಂಗ್ಲಾ ತಂಡದ ಬ್ಯಾಟ್ಸ್‌ಮನ್ ಮೆಹದಿ ಹಸನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.