ಐಪಿಎಲ್
ಚಿತ್ರ: IPL ವೆಬ್‌ಸೈಟ್
ಮುಲ್ಲನಪುರ: ವಾರಾಂತ್ಯ ನಡೆದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರ ಸುಂಟರಗಾಳಿಯ ಇನಿಂಗ್ಸ್‌ಗೆ ಸುಸ್ತುಹೊಡೆದಿರುವ ಪಂಜಾಬ್ ಕಿಂಗ್ಸ್ ತಂಡ, ಇದೀಗ ಮಂಗಳವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಸವಾಲನ್ನು ಎದುರಿಸಬೇಕಾಗಿದೆ.
ಹೈದರಾಬಾದಿನಲ್ಲಿ ನಡೆದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಅಭಿಷೇಕ್ ಕೇವಲ 55 ಎಸೆತಗಳಲ್ಲಿ 141 ರನ್ ಸಿಡಿಸಿದ್ದರು. 245ರಷ್ಟು ದೊಡ್ಡ ಮೊತ್ತ ಪೇರಿಸಿದ ಬಳಿಕವೂ ತಂಡವೊಂದು ಸೋಲುವ ಸಾಧ್ಯತೆ ಕಡಿಮೆ. ಆದರೆ ಉಪ್ಪಳದ ಸಪಾಟು ಪಿಚ್‌ನಲ್ಲಿ ಬೌಲರ್‌ಗಳದ್ದೇನೂ ನಡೆಯಲಿಲ್ಲ. ಇದೇ ಪಂದ್ಯದಲ್ಲಿ ಅಯ್ಯರ್ ಬರೇ 36 ಎಸೆತಗಳಲ್ಲಿ 82 ರನ್ ಸೂರೆ ಮಾಡಿದ್ದರು.
ಮುಲ್ಲನಪುರದ ಪಿಚ್ ಸಹ ಬ್ಯಾಟರ್‌ಗಳಿಗೆ ನೆರವಾಗುವಂತಿದೆ. ಈ ಹಿಂದೆ ಇಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಮೊದಲು ಆಡಿದ ತಂಡಗಳು 200ಕ್ಕಿಂತ ಹೆಚ್ಚಿನ ಮೊತ್ತ ಗಳಿಸುವಲ್ಲಿ ಯಶಸ್ವಿ ಆಗಿದ್ದವು.
ಸದ್ಯ ಪಂಜಾಬ್ ಬೌಲರ್‌ಗಳ ವಿಶ್ವಾಸ ಕದಡಿದೆ. ಪ್ರಮುಖ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್ ಮತ್ತು ಗ್ಲೆನ್ಸ್ ಮ್ಯಾಕ್ಸ್‌ವೆಲ್ ಅವರಿಬ್ಬರು ಮಾಡಿದ ಒಟ್ಟು ಏಳು ಓವರುಗಳಲ್ಲಿ 96 ರನ್‌ಗಳು ಹರಿದುಬಂದಿದ್ದವು. ಚಾಹಲ್ ಈ ಬಾರಿಯ 5 ಪಂದ್ಯಗಳಲ್ಲಿ ಓವರಿಗೆ ಸರಾಸರಿ 11ರಂತೆ ರನ್ ಕೊಟ್ಟಿದ್ದಾರೆ.
ಇನ್ನೊಂದು ರೀತಿ ಇದು ತಂಡದ ಉಭಯಸಂಕಟಕ್ಕೂ ಕಾರಣವಾಗಿದೆ. ಇಲ್ಲಿ ಮೊದಲು ಆಡಲು ಕಳಿಸಲ್ಪಟ್ಟರೆ 220ರ ಆಸುಪಾಸಿನ ಮೊತ್ತ ಗಳಿಸಿದರೂ ಅದು ಸುರಕ್ಷಿತವೆನಿಸದು. ಸುನಿಲ್ ನಾರಾಯಣ್, ವೆಂಕಟೇಶ್ ಅಯ್ಯರ್ ಅಂಥ ಬೀಸಾಟವಾಡುವ ಆಟಗಾರರು ಕೆಕೆಆರ್ ತಂಡದಲ್ಲಿದ್ದಾರೆ.
ಇಲ್ಲಿ ಚೆಂಡಿಗೆ ಪುಟಿತ, ತಿರುವು ನೀಡುವ ಪಿಚ್ ಸಿದ್ಧಪಡಿಸಿದರೆ ಅದೂ ತಿರುಗುಬಾಣವಾಗುವ ಸಾಧ್ಯತೆಯಿದೆ. ಕೆಕೆಆರ್ ತಂಡದಲ್ಲಿ ಇದರ ಲಾಭ ಪಡೆಯಲು ವರುಣ್ ಚಕ್ರವರ್ತಿ, ಸುನೀಲ್ ನಾರಾಯಣ ಅಂಥ ಬೌಲರ್‌ಗಳಿದ್ದಾರೆ. ಎರಡೂ ರೀತಿಯ ಪಿಚ್‌ಗಳಿಗೆ ಒಗ್ಗಿಕೊಳ್ಳುವ ಅಜಿಂಕ್ಯ ರಹಾನೆ ಆಟಗಾರರಿದ್ದಾರೆ. ಚೆನ್ನೈನಲ್ಲಿ ಸಿಎಸ್‌ಕೆ ಮೇಲೆ ಸುಲಭವಾಗಿ ಗೆದ್ದ ನಂತರ ಕೋಲ್ಕತ್ತ ತಂಡದ ವಿಶ್ವಾಸವೂ ವೃದ್ಧಿಸಿದೆ.
ಪಂಜಾಬ್ ಪರ ಮೂರು ಅರ್ಧ ಶತಕ ಗಳಿಸಿರುವ ಶ್ರೇಯಸ್ ಅಯ್ಯರ್ (250) ಉತ್ತಮ ಲಯದಲ್ಲಿದ್ದಾರೆ. ಪ್ರಿಯಾಂಶ್ ಆರ್ಯ (194) ಈ ಋತುವಿನ ಶೋಧ ಎನಿಸಿದ್ದಾರೆ. ನೇಹಲ್ ವಧೇರಾ (141), ಪ್ರಭಸಿಮ್ರನ್ ಸಿಂಗ್ (133) ಕೂಡ ಬಿರುಸಿನ ಆಟವಾಡುವವರು. ಆದರೆ ತಂಡದಲ್ಲಿರುವ ಆಸ್ಟ್ರೇಲಿಯನ್ನರಿಂದ ಕೊಡುಗೆ ಬರಬೇಕಾಗಿದೆ. ಮ್ಯಾಕ್ಸ್‌ವೆಲ್ (34) ಮತ್ತು ಮಾರ್ಕಸ್ ಸ್ಟೊಯಿನಿಸ್ (59) ಇನ್ನೂ ಅಬ್ಬರಿಸಿಲ್ಲ.
ಪಂದ್ಯ ಅರಂಭ: ರಾತ್ರಿ 7.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.