ಪಿಯೂಷ್ ಚಾವ್ಲಾ (ಬಲಬದಿಯಿಂದ ಮೂರನೇಯವರು)
(ರಾಯಿಟರ್ಸ್ ಚಿತ್ರ)
ನವದೆಹಲಿ: ಎರಡು ಸಲ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ, ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಸಲ್ಲಿಸಿದ್ದಾರೆ.
ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 36 ವರ್ಷದ ಪಿಯೂಷ್ ಚಾವ್ಲಾ ಮಾಹಿತಿ ನೀಡಿದ್ದಾರೆ.
'ಮೈದಾನದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಕಳೆದ ಬಳಿಕ ಈ ಸುಂದರ ಆಟಕ್ಕೆ ವಿದಾಯ ಹೇಳುವ ಸಮಯ ಬಂದಿದೆ' ಎಂದು ಹೇಳಿದ್ದಾರೆ.
'ಕ್ರೀಸ್‌ನಿಂದ ದೂರ ಸರಿದರೂ ನನ್ನೊಳಗೆ ಸದಾ ಕ್ರಿಕೆಟ್ ಇರುತ್ತದೆ. ಈ ಸುಂದರ ಆಟದ ಅನುಭವಗಳೊಂದಿಗೆ ಹೊಸ ಪ್ರಯಾಣವನ್ನು ಎದುರು ನೋಡುತ್ತೇನೆ' ಎಂದು ತಿಳಿಸಿದ್ದಾರೆ.
ಕ್ರಿಕೆಟ್ ವೃತ್ತಿ ಜೀವನದಲ್ಲಿ ಕೋಚ್ ಸೇರಿದಂತೆ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಚಾವ್ಲಾ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಪಿಯೂಷ್ ಚಾವ್ಲಾ, 2007ರ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು.
ಮೂರು ಟೆಸ್ಟ್, 25 ಏಕದಿನ ಹಾಗೂ ಏಳು ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಒಟ್ಟು 43 ವಿಕೆಟ್‌ಗಳನ್ನು ಗಳಿಸಿದ್ದಾರೆ.
ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್, ಕೋಲ್ಕತ್ತ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದರು.
2014ರಲ್ಲಿ ಐಪಿಎಲ್ ಗೆದ್ದ ಕೆಕೆಆರ್ ತಂಡದ ಸದಸ್ಯರೂ ಆಗಿದ್ದರು. ಅಲ್ಲದೆ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಿದ್ದ ಫೈನಲ್‌ನಲ್ಲಿ ಗೆಲುವಿನ ರನ್ ಕೂಡ ಗಳಿಸಿದ್ದರು.
ದೇಶೀಯ ಕ್ರಿಕೆಟ್‌ನಲ್ಲಿ ಚಾವ್ಲಾ 1,000ಕ್ಕೂ ಹೆಚ್ಚು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.