ADVERTISEMENT

ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಹಾವಳಿ: ಕ್ರಿಕೆಟ್ ಪಂದ್ಯ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 15:51 IST
Last Updated 26 ನವೆಂಬರ್ 2021, 15:51 IST
ಪಂದ್ಯ ನಿಂತಾಗ ತಂಡಗಳ ಆಟಗಾರರು ತಮ್ಮ ಡಗ್‌ಔಟ್‌ನಲ್ಲಿ ಸೇರಿದರು
ಪಂದ್ಯ ನಿಂತಾಗ ತಂಡಗಳ ಆಟಗಾರರು ತಮ್ಮ ಡಗ್‌ಔಟ್‌ನಲ್ಲಿ ಸೇರಿದರು   

ಜೋಹಾನ್ಸ್‌ಬರ್ಗ್: ಕೋವಿಡ್ ವೈರಾಣುವಿನ ಹೊಸ ತಳಿಯ ಹಾವಳಿ ಹೆಚ್ಚುತ್ತಿದ್ದಂತೆಯೇ ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಯಾಗಿರುವ ಕ್ರೀಡಾಕೂಟಗಳ ಸ್ಥಿತಿ ಡೋಲಾಯಮಾನವಾಗಿವೆ.

ಶುಕ್ರವಾರ ಸೆಂಚುರಿಯನ್‌ನಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್‌ ನಡುವಣ ಕ್ರಿಕೆಟ್ ಪಂದ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಯಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆತಿಥೇಯ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 277 ರನ್ ಗಳಿಸಿತ್ತು. ನೆದರ್ಲೆಂಡ್ಸ್‌ ತಂಡವು ಎರಡು ಓವರ್‌ಗಳಲ್ಲಿ 11 ರನ್ ಮಾಡಿದ್ದ ಸಂದರ್ಭದಲ್ಲಿ ಪಂದ್ಯ ಸ್ಥಗಿತವಾಯಿತು. ಸರಣಿಯಿಂದಲೇ ಹಿಂದೆ ಸರಿಯುವತ್ತ ನೆದರ್ಲೆಂಡ್ಸ್ ಚಿತ್ತ ನೆಟ್ಟಿದೆ ಎನ್ನಲಾಗಿದೆ.

ಶುಕ್ರವಾರ ಯುನೈಟೆಡ್‌ ಕಿಂಗ್‌ಡಮ್ ಸರ್ಕಾರವು ದಕ್ಷಿಣ ಆಫ್ರಿಕಾಕ್ಕೆ ವಿಮಾನಯಾನವನ್ನು ಸ್ಘಗಿತಗೊಳಿಸಿದೆ. ಇದರಿಂದಾಗಿ ಇಲ್ಲಿ ನಡೆಯುತ್ತಿರುವ ಗಾಲ್ಫ್ ಮತ್ತು ರಗ್ಬಿ ಟೂರ್ನಿಗಳಲ್ಲಿ ಭಾಗವಹಿಸಿರುವ ಇಂಗ್ಲೆಂಡ್ ಮತ್ತು ಐರ್ಲೆಂಡ್ ಕ್ರೀಡಾಪಟುಗಳು ತಮ್ಮ ತವರಿಗೆ ಮರಳಲು ಪರದಾಡುತ್ತಿದ್ದಾರೆಂದು ವರದಿಯಾಗಿದೆ.

ADVERTISEMENT

ಗುರುವಾರವಷ್ಟೇ ಡಿಪಿ ವಿಶ್ವ ಗಾಲ್ಪ್‌ ಟೂರ್ ಆರಂಭವಾಗಿತ್ತು. ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಿದ್ದರಿಂದ ಈಗಾಗಲೇ 12ಕ್ಕೂ ಹೆಚ್ಚು ಸ್ಪರ್ಧಿಗಳು ಹಿಂದೆ ಸರಿದಿದ್ದಾರೆ ಎಂದು ಟೂರ್ ವಕ್ತಾರ ಸ್ಟೀವ್ ಟಾಡ್ ಖಚಿತಪಡಿಸಿದ್ದಾರೆ.

ಮುಂದಿನ ಎರಡು ವಾರಾಂತ್ಯದ ದಿನಗಳಲ್ಲಿ ನಿಗದಿಯಾಗಿದ್ದ ಯುನೈಟೆಡ್ ರಗ್ಬಿ ಚಾಂಪಿಯನ್‌ಷಿಪ್ ಪಂದ್ಯಗಳನನ್ನೂ ಅನಿರ್ದಿಷ್ಠಾವಧಿಗೆ ಮುಂದೂಡಲಾಗಿದೆ.

‘ಈಗಾಗಲೇ ತೆಗೆದುಕೊಂಡಿರುವ ಲಸಿಕೆಗಳು ಆಫ್ರಿಕಾ ತಳಿಯ ವೈರಾಣುವಿನ ಮುಂದೆ ಹೆಚ್ಚು ಪ್ರಯೋಜನಕಾರಿಯಲ್ಲ. ಆದ್ದರಿಂದ ದಕ್ಷಿಣ ಆಫ್ರಿಕಾದಿಂದ ಇಂಗ್ಲೆಂಡ್‌ಗೆ ಬರುವ ಪ್ರಯಾಣಿಕರಿಗೆ ಕಡ್ಡಾಯ ಪ್ರತ್ಯೇಕವಾಸದ ನಿಯಮವನ್ನು ಮತ್ತೆ ಜಾರಿಗೆ ತರಲಾಗಿದೆ’ ಎಂದು ಇಂಗ್ಲೆಂಡ್‌ನ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ತಿಳಿಸಿದ್ದಾರೆ.

ಜಿಂಬಾಬ್ವೆಯಲ್ಲಿ ಮಹಿಳಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳನ್ನೂ ಆಯೋಜಿಸಲಾಗಿದೆ. ಅಮೆರಿಕ, ವೆಸ್ಟ್ ಇಂಡೀಸ್, ನೆದರ್ಲೆಂಡ್ಸ್, ಥಾಯ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ಮುಂದಿನ ವಾರ ಜಿಂಬಾಬ್ವೆಗೆ ಬಂದಿಳಿಯಬೇಕು. ಇದೀಗ ಆ ಪಂದ್ಯಗಳನ್ನೂ ಮುಂದೂಡುವುದು ಬಹುತೇಕ ಖಚಿತವಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.