ನವದೆಹಲಿ: ರಿಷಭ್ ಪಂತ್ ಅವರು ತಮ್ಮ ಶತಕಗಳನ್ನು ದ್ವಿಶತಕಗಳನ್ನಾಗಿ ಪರಿವರ್ತಿಸುವತ್ತ ಹೆಚ್ಚು ಗಮನ ಕೊಡಬೇಕು. ಭಾರತದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಸಮಯ ಆಡಬೇಕು ಎಂದು ಮಾಜಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸಲಹೆ ನೀಡಿದ್ದಾರೆ.
ಲೀಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಶುಭಮನ್ ಗಿಲ್ ನಾಯಕತ್ವದ ಭಾರತ ತಂಡವು 5 ವಿಕೆಟ್‌ಗಳಿಂದ ಸೋತಿತ್ತು. ಈ ಕುರಿತು ತಮ್ಮ ಯೂಟ್ಯೂಬ್ ವಾಹಿನಿಯ ‘ಆ್ಯಷ್ ಕಿ ಬಾತ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
‘ಯಾವುದೇ ಹಂತದಲ್ಲಿಯೂ ಆಂತಕಕ್ಕೆ ಒಳಗಾಗಬೇಡಿ. ತಂತ್ರಗಾರಿಕೆಯನ್ನು ಹೆಚ್ಚು ಬದಲಿಸಬೇಡಿ. ಮುಂದಿನ ಟೆಸ್ಟ್‌ನಲ್ಲಿ ಗೆದ್ದು ಸರಣಿಯಲ್ಲಿ ಸಮಬಲ ಮಾಡುವ ಅವಕಾಶ ಭಾರತಕ್ಕೆ ಇದೆ. ಇಂಗ್ಲೆಂಡ್ ತಂಡದವರ ತಂತ್ರಗಾರಿಕೆಯನ್ನು ಪೂರ್ಣವಾಗಿ ಅರಿತರೆ ಮಾತ್ರ ಸರಣಿಯಲ್ಲಿ ಹಿಡಿತ ಸಾಧಿಸಲು ಸಾಧ್ಯವಿದೆ. ಇಲ್ಲದಿದ್ದರೆ ಗೆಲುವು ಕೈಜಾರುವುದು ಖಚಿತ’ ಎಂದು ಅಶ್ವಿನ್ ಹೇಳಿದ್ದಾರೆ.
‘ಭಾರತ ತಂಡವು ಐದನೇ ದಿನದವರೆಗೂ ಬ್ಯಾಟಿಂಗ್ ಮುಂದುವರಿಸಬೇಕಿತ್ತು. ಇಂಗ್ಲೆಂಡ್ ತಂಡವು ಎಷ್ಟೇ ಮೊತ್ತದ ಗುರಿ ಸಿಕ್ಕರೂ ತಾವು ಗೆಲ್ಲುವದು ಖಚಿತ ಎಂದು ಹೇಳಿಕೊಂಡಿತ್ತು. ಇದನ್ನು ಭಾರತ ಗಂಭೀರವಾಗಿ ಪರಿಗಣಿಸಿ, ಎಷ್ಟು ಸಾಧ್ಯವೋ ಅಷ್ಟು ಬ್ಯಾಟಿಂಗ್ ನಲ್ಲಿ ಸಮಯ ಹೆಚ್ಚು ಕಳೆಯಬೇಕಿತ್ತು. ಎದುರಾಳಿಗೆ ದೊಡ್ಡ ಗುರಿ ಮತ್ತು ಕಡಿಮೆ ಸಮಯ ಕೊಟ್ಟಾಗ ಮಾತ್ರ ನಾವು ನಿಯಂತ್ರಣ ಸಾಧಿಸಬಹುದಿತ್ತು. 400 ರಿಂದ 450 ರನ್‌ಗಳ ಗುರಿ ಕೊಟ್ಟಿದ್ದರೆ ಸೂಕ್ತವಾಗುತ್ತಿತ್ತು’ ಎಂದು ವಿಶ್ಲೇಷಿಸಿದರು.
‘ರಿಷಭ್ ಪಂತ್ ಅವರನ್ನು ವಿರಾಟ್ ಕೊಹ್ಲಿ ಅವರೊಂದಿಗೆ ಹೋಲಿಕೆ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಮಹೇಂದ್ರಸಿಂಗ್ ಧೋನಿ ಅವರೊಂದಿಗೆ ಹೋಲಿಕೆ ಸಮಂಜಸವಲ್ಲ. ಏಕೆಂದರೆ ಅವರು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರಲಿಲ್ಲ. ಪಂತ್ ಅವರು ತಂಡದ ಮುಖ್ಯ ಬ್ಯಾಟರ್ ಆಗಿದ್ದಾರೆ. ಅವರ ಟೈಮಿಂಗ್ ಅಮೋಘವಾಗಿದೆ. ಚೆಂಡಿನ ಚಲನೆ, ಲೈನ್ ಮತ್ತು ಲೆಂಗ್ತ್ ಗುರುತಿಸುವಲ್ಲಿ ಚುರುಕಾಗಿದ್ದಾರೆ. ಇದೊಂದು ಅಪರೂಪದ ಗುಣ. ಪಾಕಿಸ್ತಾನ ದಿಗ್ಗಜ ಇಂಜಮಾಮ್ ಉಲ್ ಹಕ್ ಅವರಿಗೂ ಆ ಗುಣವಿತ್ತು. ರಿಷಭ್ ಅವರು ಅಮೋಘವಾಗಿ ಆಡಿದ್ದಾರೆ. ಅವರು ತಮ್ಮ ಶತಕಗಳನ್ನು ದ್ವಿಶತಕಗಳನ್ನಾಗಿ ಪರಿವರ್ತಿಸುವತ್ತ ಚಿತ್ತ ಹರಿಸಬೇಕು. ಏಕೆಂದರೆ; ಕೆಳಕ್ರಮಾಂಕದಿಂದ ಯಾವಾಗಲೂ ಹೆಚ್ದಿನ ಕಾಣಿಕೆ ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ರಿಷಭ್ ತಮ್ಮ ಇನಿಂಗ್ಸ್ ಅನ್ನು ಇನ್ನಷ್ಟು ಬೆಳೆಸಿದರೆ ತಂಡಕ್ಕೆ ಹೆಚ್ಚು ಲಾಭ’ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಪಂತ್ ಅವರು ಲೀಡ್ಸ್ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿ ದಾಖಲೆ ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.