ADVERTISEMENT

ಐಪಿಎಲ್‌ನಲ್ಲಿ ಪವರ್ ಪ್ಲೇಯರ್?

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 19:25 IST
Last Updated 4 ನವೆಂಬರ್ 2019, 19:25 IST
   

ನವದೆಹಲಿ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ‘ಪವರ್‌ ಪ್ಲೇಯರ್‌’ ಕಾಣಿಸಿಕೊಳ್ಳಲಿದ್ದಾನೆಯೇ...?

ಹೌದು, ಈ ಹೊಸ ಪರಿಕಲ್ಪನೆಯನ್ನು ಜಾರಿಗೆ ತರಲು ಐಪಿಎಲ್ ಆಪರೇಷನ್ಸ್ ತಂಡ ಮುಂದಾಗಿದ್ದು ಬುಧವಾರ ಮುಂಬೈನಲ್ಲಿ ನಡೆಯಲಿರುವ ಆಡಳಿತ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಲಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಒಪ್ಪಿಗೆ ಲಭಿಸಿದರೆ ಮುಂದಿನ ಆವೃತ್ತಿಯಲ್ಲಿ ಜಾರಿಗೆ ಬರಲಿದೆ.

ಯಾವುದೇ ವಿಕೆಟ್ ಪತನಗೊಂಡಾಗ ಕ್ರೀಸ್‌ನಲ್ಲಿ ಕಾಣಿಸಿಕೊಳ್ಳುವ ಅಥವಾ ನಿರ್ದಿಷ್ಟ ಓವರ್ ಮುಕ್ತಾಯಗೊಂಡ ನಂತರ ಬೌಲಿಂಗ್‌ ಮಾಡಲು ಬರುವ ಆಟಗಾರನೇ ಪವರ್ ಪ್ಲೇಯರ್‌. ಈ ಆಟಗಾರ ಅಂತಿಮ 11ರ ಪಟ್ಟಿಯಲ್ಲಿ ಇರುವುದಿಲ್ಲ.

ADVERTISEMENT

‘ಇದನ್ನು ಜಾರಿಗೆ ತರಲು ಅನೇಕ ಅಡೆ ತಡೆಗಳಿವೆ. ಆದ್ದರಿಂದ ಒಪ್ಪಿಗೆ ಸಿಗುವುದು ಅಷ್ಟು ಸುಲಭವಲ್ಲ. ಆದರೂ ಸಭೆಯಲ್ಲಿ ಮಂಡಿಸಲಾಗುವುದು. ನಾಲ್ಕು ದಿನಗಳಲ್ಲಿ ಆರಂಭವಾಗಲಿರುವ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸುವ ಸಂಬಂಧ ಚರ್ಚೆ ನಡೆಸುವ ಸಾಧ್ಯತೆಯೂ ಇದೆ’ ಎಂದು ಬಿಸಿಸಿಐನ ಪದಾಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.