ADVERTISEMENT

ಇಂಗ್ಲೆಂಡ್‌ಗೆ ಮಣಿದ ಅಧ್ಯಕ್ಷರ ಇಲೆವನ್‌

ಕ್ರಿಕೆಟ್‌: ಅಭ್ಯಾಸ ಪಂದ್ಯದಲ್ಲಿ ‘ಭಾರತ’ದ ಪ್ರಮುಖ ಆಟಗಾರ್ತಿಯರು ವಿಫಲ

ಪಿಟಿಐ
Published 18 ಫೆಬ್ರುವರಿ 2019, 20:30 IST
Last Updated 18 ಫೆಬ್ರುವರಿ 2019, 20:30 IST
ಇಂಗ್ಲೆಂಡ್‌ ಆಟಗಾರ್ತಿಯರ ಸಂಭ್ರಮ
ಇಂಗ್ಲೆಂಡ್‌ ಆಟಗಾರ್ತಿಯರ ಸಂಭ್ರಮ   

ಮುಂಬೈ: ಅಮೋಘ ಆಲ್‌ರೌಂಡ್ ಆಟದ ಮೂಲಕ ಮಿಂಚಿದ ಇಂಗ್ಲೆಂಡ್ ಮಹಿಳೆಯರ ಕ್ರಿಕೆಟ್‌ ತಂಡ ಭಾರತ ಪ್ರವಾಸದಲ್ಲಿ ಶುಭಾರಂಭ ಮಾಡಿದೆ. ಇಲ್ಲಿ ಸೋಮವಾರ ನಡೆದ ಭಾರತ ಮಂಡಳಿ ಅಧ್ಯಕ್ಷರ ಇಲೆವನ್‌ ಮಹಿಳಾ ತಂಡದ ಎದುರಿನ ಏಕದಿನ ಅಭ್ಯಾಸ ಪಂದ್ಯದಲ್ಲಿ ಪ್ರವಾಸಿ ತಂಡ ಎರಡು ವಿಕೆಟ್‌ಗಳಿಂದ ಗೆದ್ದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಮಂಡಳಿ ಅಧ್ಯಕ್ಷರ ಇಲೆವನ್‌ ಎದುರಾಳಿಗಳಿಗೆ ಕೇವಲ 155 ರನ್‌ಗಳ ಗೆಲುವಿನ ಗುರಿ ನೀಡಿತು. ರಾಷ್ಟ್ರೀಯ ತಂಡದ ಆಟಗಾರ್ತಿಯರಾದ ಸ್ಮೃತಿ ಮಂದಾನ, ಪ್ರಿಯಾ ಪೂನಿಯಾ, ವೇದಾ ಕೃಷ್ಣಮೂರ್ತಿ ಮುಂತಾದವರು ನಿರೀಕ್ಷಿತ ಮೊತ್ತ ಗಳಿಸಲಿಲ್ಲ.

ಸುಲಭ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ಮಹಿಳೆಯರು 75 ಎಸೆತ ಬಾಕಿ ಇರುವಾಗಲೇ ಜಯ ತಮ್ಮದಾಗಿಸಿಕೊಂಡರು. ನಾಗಪುರದ ಮಧ್ಯಮ ವೇಗಿ ಕೋಮಲ್ ಜನ್ಜಾದ್‌ ಅಗ್ರ ಕ್ರಮಾಂಕದ ಇಬ್ಬರು ಸೇರಿದಂತೆ ಮೂವರ ವಿಕೆಟ್ ಕಬಳಿಸಿದರು. ರೀಮಾಲಕ್ಷ್ಮಿ ಎಕ್ಕ ಮತ್ತು ತನುಜಾ ಕನ್ವರ್ ಕೂಡ ಉತ್ತಮ ದಾಳಿ ಸಂಘಟಿಸಿದರು. ಆದರೆ ಹೆದರ್ ನೈಟ್‌ (64; 86 ಎಸೆತ, 9 ಬೌಂಡರಿ) ಏಕಾಂಗಿಯಾಗಿ ಹೋರಾಡಿ ಇಂಗ್ಲೆಂಡ್‌ ತಂಡಕ್ಕೆ ಗೆಲುವು ತಂದುಕೊಟ್ಟರು.

ADVERTISEMENT

ಮಂದಾನ, ಪೂನಿಯಾ ವಿಫಲ: ಸ್ಫೋಟಕ ಬ್ಯಾಟ್ಸ್‌ವುಮನ್‌ ಸ್ಮೃತಿ ಮಂದಾನ ನಾಯಕತ್ವದ ಅಧ್ಯಕ್ಷರ ಇಲೆವನ್‌ ಪರ ಮಂದಾನ ಅವರೇ ವೈಫಲ್ಯ ಕಂಡರು. ಪ್ರಿಯಾ ಪೂನಿಯಾ ಜೊತೆ ಇನಿಂಗ್ಸ್ ಆರಂಭಿಸಿದ ಅವರು ಮೊದಲ ವಿಕೆಟ್‌ಗೆ 27 ರನ್ ಸೇರಿಸಿ ಔಟಾದರು. ನಂತರ ಯಾರಿಗೂ ಕ್ರೀಸ್‌ನಲ್ಲಿ ತಳವೂರಲು ಆಗಲಿಲ್ಲ. ಕೇರಳದ ಎಡಗೈ ಬ್ಯಾಟ್ಸ್‌ವುಮನ್‌ ಮಿನ್ನು ಮಣಿ ತಂಡದ ಪರ ಅತ್ಯಧಿಕ, 28 ರನ್ ಕಲೆ ಹಾಕಿದರು.

ಉಭಯ ತಂಡಗಳ ಮೂರು ಪಂದ್ಯಗಳ ಏಕದಿನ ಸರಣಿ ಇದೇ 22ರಿಂದ ಮುಂಬೈನಲ್ಲಿ ನಡೆಯಲಿದೆ. ಮೂರು ಟ್ವೆಂಟಿ–20 ಪಂದ್ಯಗಳ ಸರಣಿಗೆ ಗುವಾಹಟಿ ಆತಿಥ್ಯ ವಹಿಸಲಿದೆ.

ಸಂಕ್ಷಿಪ್ತ ಸ್ಕೋರು: ಭಾರತ ಮಂಡಳಿ ಅಧ್ಯಕ್ಷರ ಮಹಿಳಾ ಇಲೆವನ್‌: 49 ಓವರ್‌ಗಳಲ್ಲಿ 154 (ಪ್ರಿಯಾ ಪೂನಿಯಾ 15, ಸ್ಮೃತಿ ಮಂದಾನ 19, ಹರ್ಲಿನ್ ಡಿಯಾಲ್‌ 21, ವೇದಾ ಕೃಷ್ಣಮೂರ್ತಿ 10, ಭಾರತಿ ಫುಲ್ಮಲಿ 23, ಆರ್‌.ವಿ.ಕಲ್ಪನಾ 10, ಮಿನ್ನು ಮಣಿ 28, ಟಿ.ಕನ್ವರ್‌ 11; ಅನ್ಯಾ ಶ್ರಬ್‌ಸೊಲ್‌ 30ಕ್ಕೆ4, ಜಾರ್ಜಿಯಾ ಎಲ್ವಿಸ್‌ 20ಕ್ಕೆ2, ಎಕ್ಲಿಸ್ಟೋನ್‌ 13ಕ್ಕೆ1, ಎಲ್‌.ಎ. ಮಾರ್ಶ್‌ 22ಕ್ಕೆ1, ಎ.ಹಾರ್ಟ್ಲಿ 11ಕ್ಕೆ1); ಇಂಗ್ಲೆಂಡ್‌: 37.3 ಓವರ್‌ಗಳಲ್ಲಿ 8ಕ್ಕೆ 157 (ಹೆದರ್ ನೈಟ್‌ ಅಜೇಯ 64, ಡ್ಯಾನಿಯಲಿ ವ್ಯಾಟ್‌ 22, ಶ್ರಬ್‌ಸೊಲೆ 23, ವಿನಿಫೀಲ್ಡ್‌ 23; ಕೋಮಲ್ ಜನ್ಜಾದ್‌ 14ಕ್ಕೆ3, ರೀಮಾಲಕ್ಷ್ಮಿ ಎಕ್ಕ 24ಕ್ಕೆ2, ತನುಜಾ ಕನ್ವರ್ 34ಕ್ಕೆ2). ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 2 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.