ADVERTISEMENT

ಮುಚ್ಚಿದ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿರುವ ಭಾರತ-ಇಂಗ್ಲೆಂಡ್ ಏಕದಿನ ಸರಣಿ

ಪಿಟಿಐ
Published 28 ಫೆಬ್ರುವರಿ 2021, 5:45 IST
Last Updated 28 ಫೆಬ್ರುವರಿ 2021, 5:45 IST
ಟೀಮ್ ಇಂಡಿಯಾ (ಸಂಗ್ರಹ ಚಿತ್ರ)
ಟೀಮ್ ಇಂಡಿಯಾ (ಸಂಗ್ರಹ ಚಿತ್ರ)   

ಪುಣೆ: ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಪುಣೆಯಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನಸರಣಿಯನ್ನು ಮುಚ್ಚಿದ ಕ್ರೀಡಾಂಗಣದಲ್ಲಿ ಆಯೋಜಿಸಲು ಮಹಾರಾಷ್ಟ್ರ ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ.

ಪುಣೆಯಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯು ಅನುಕ್ರಮವಾಗಿ ಮಾರ್ಚ್ 23, 26 ಹಾಗೂ 28ರಂದು ನಿಗದಿಯಾಗಿದೆ

ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣವು ಹೆಚ್ಚುತ್ತಿರುವುದರ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ಪ್ರೇಕ್ಷಕರು ಇಲ್ಲದೆ ಏಕದಿನ ಸರಣಿಗೆ ಅನುಮತಿ ನೀಡಲಾಗುವುದು ಎಂದು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಭಾರತ-ಇಂಗ್ಲೆಂಡ್ ಏಕದಿನ ಸರಣಿ ಆಯೋಜನೆ ಕುರಿತಂತೆ ಎಂಸಿಎ ಅಧ್ಯಕ್ಷ ಕಾಕಟ್ಕರ್, ಆಡಳಿತ ಮಂಡಳಿ ಮುಖ್ಯಸ್ಥ ಮಿಲಿಂದ್ ನಾರ್ವೆಕರ್ ಅವರು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಮತ್ತು ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆದಿತ್ಯಜೀ ಠಾಕ್ರೆ ಅವರನ್ನು ಭೇಟಿ ಮಾಡಿಮಾತುಕತೆ ನಡೆಸಿದ್ದರು.

ಆಟಗಾರರು ಅಧಿಕಾರಿಗಳಿಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಅಗತ್ಯ ಮುನ್ನಚ್ಚೆರಿಕೆಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂಬುದನ್ನು ಸಂಸ್ಥೆಯು ತಿಳಿಸಿದೆ.

ಇದರೊಂದಿಗೆ ಪುಣೆಯಲ್ಲಿ ಏಕದಿನ ಪಂದ್ಯಗಳನ್ನು ಆಯೋಜಿಸುವುದಕ್ಕೆ ಸಂಬಂಧಿಸಿದಂತೆ ಎದ್ದಿರುವ ಅನಿಶ್ಚಿತತೆಯು ದೂರವಾಗಲಿದ್ದು, ಪಂದ್ಯಗಳನ್ನು ಸುಗಮವಾಗಿ ಆಯೋಜಿಸಲು ಪೂರ್ವಸಿದ್ಧತೆಯನ್ನು ಪ್ರಾರಂಭಿಸಬಹುದಾಗಿದೆ ಎಂದು ಹೇಳಿದೆ.

ಇದೇ ಸಂದರ್ಭದಲ್ಲಿ ಬಿಸಿಸಿಐ,ಐಸಿಸಿ ಹಾಗೂ ಎಂಸಿಎ ಮಾಜಿ ಅಧ್ಯಕ್ಷ ಶರದ್ ಪವಾರ್ ಅವರು ನೀಡಿರುವ ಮಾರ್ಗದರ್ಶನ ಹಾಗೂ ನೆರವಿಗೂ ಸಂಸ್ಥೆಯು ಧನ್ಯವಾದ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.