
ಪಿ.ವಿ.ಸಿಂಧು
ಕ್ವಾಲಾಲಂಪುರ: ಎರಡು ಬಾರಿ ಒಲಿಂಪಿಕ್ ಪದಕ ಗೆದ್ದಿರುವ ಪಿ.ವಿ.ಸಿಂಧು ಅವರು ತಮ್ಮ ಎದುರಾಳಿ, ಜಪಾನ್‌ನ ಅಕಾನೆ ಯಮಾಗುಚಿ ಅವರು ಗಾಯದ ಕಾರಣ ನಿವೃತ್ತರಾದ ಕಾರಣ ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ತಲುಪಿದರು.
ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದ ಮೊದಲ ಗೇಮ್‌ಅನ್ನು ಸಿಂಧೂ 21–11 ರಿಂದ ಪಡೆದಿದ್ದರು. ಈ ಹಂತದಲ್ಲಿ ಮೂರು ಬಾರಿಯ ವಿಶ್ವ ಚಾಂಪಿಯನ್ ಹಾಗೂ ಇಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದ ಯಮಾಗುಚಿ ಮೊಣಕಾಲು ನೋವಿನಿಂದ ಪಂದ್ಯದಿಂದ ಹಿಂದೆಸರಿದರು. ಪಂದ್ಯದ ವೇಳೆ ಅವರು ಮೊಣಕಾಲಿಗೆ ಪಟ್ಟಿ ಕಟ್ಟಿಕೊಂಡಿದ್ದರು.
ಇದರೊಂದಿಗೆ ಸಿಂಧು ಅವರು ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಯಮಾಗುಚಿ ಗೆಲುವಿನ ದಾಖಲೆಯನ್ನು 15–12ಕ್ಕೆ ಹೆಚ್ಚಿಸಿದರು.
ಗಾಯದ ಸಮಸ್ಯೆಯಿಂದ ದೀರ್ಘಕಾಲ ವಿಶ್ರಾಂತಿಯ ನಂತರ ಸಿಂಧು ಇದೇ ಮೊದಲ ಬಾರಿ ಈ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಸೆಮಿಫೈನಲ್‌ನಲ್ಲಿ ಅವರು ಎರಡನೇ ಶ್ರೇಯಾಂಕದ ವಾಂಗ್ ಝಿಹಿ ಅವರನ್ನು ಎದುರಿಸಲಿದ್ದಾರೆ. ಚೀನಾದ ಝಿಹಿ ಅವರು ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಆರನೇ ಶ್ರೇಯಾಂಕದ ಇಂಡೊನೇಷ್ಯಾ ಆಟಗಾರ್ತಿ ಪುತ್ರಿ ಕುಸುಮ ವಾರ್ದನಿ ಅವರನ್ನು 21–17, 21–18 ರಿಂದ ಸೋಲಿಸಿದರು.
ಸಾತ್ವಿಕ್–ಚಿರಾಗ್ ಜೋಡಿಗೆ ನಿರಾಸೆ
ಪುರುಷರ ಡಬಲ್ಸ್‌ನಲ್ಲಿ ಭಾರತದ ಅಗ್ರ ಆಟಗಾರರಾದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲನುಭವಿಸಿತು. ಇಂಡೊನೇಷ್ಯಾದ ಫಝರ್ ಅಲ್ಫಿಯಾನ್– ಮುಹಮ್ಮದ್ ಶೊಹಿಬುಲ್ ಫಿಕ್ರಿ ಜೋಡಿ 21–10, 23–21 ರಿಂದ ಭಾರತದ ಅನುಭವಿ ಜೋಡಿಯನ್ನು ಸೋಲಿಸಿ ಸೆಮಿಫೈನಲ್ ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.