ಮನಿಲಾ, ಪಿಲಿಪ್ಪೀನ್ಸ್: ವೀರೋಚಿತ ಹೋರಾಟದಲ್ಲಿ ಸೋತ ಭಾರತದ ಪಿ.ವಿ.ಸಿಂಧು ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ಇಲ್ಲಿ ಶನಿವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು21-13 19-21 16-21ರಿಂದ ಜಪಾನ್‌ನ ಅಕಾನೆ ಯಾಮಗುಚಿ ಎದುರು ಮಣಿದರು. ಒಂದು ತಾಸು ಆರು ನಿಮಿಷಗಳ ಹಣಾಹಣಿಯಲ್ಲಿ ಅಗ್ರಶ್ರೇಯಾಂಕದ ಜಪಾನ್ ಆಟಗಾರ್ತಿಗೆ ಜಯ ಒಲಿಯಿತು.
26 ವರ್ಷದ ಸಿಂಧು ಅವರಿಗೆ ಟೂರ್ನಿಯಲ್ಲಿ ಇದು ಎರಡನೇ ಪದಕ. 2014ರ ಗಿಮ್ಚಿಯೊನ್ ಆವೃತ್ತಿಯಲ್ಲಿ ಅವರಿಗೆ ಕಂಚು ಒಲಿದಿತ್ತು.
ಈ ವರ್ಷ ಸೈಯದ್ ಮೋದಿ ಮತ್ತು ಸ್ವಿಸ್ ಓಪನ್ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದ ಸಿಂಧು, ಮೊದಲ ಗೇಮ್‌ಅನ್ನು 16 ನಿಮಿಷಗಳಲ್ಲೇ ಸುಲಭವಾಗಿ ಕೈವಶ ಮಾಡಿಕೊಂಡರು.
ನಾಲ್ಕನೇ ಶ್ರೇಯಾಂಕದ ಸಿಂಧು, ಎರಡನೇ ಗೇಮ್‌ನಲ್ಲಿ ಪಾಯಿಂಟ್‌ಗಳ ಮಧ್ಯೆ ನಿಗದಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದಕ್ಕೆ ಪೆನಾಲ್ಟಿಯಾಗಿ ಒಂದು ಪಾಯಿಂಟ್ ಕಳೆದುಕೊಂಡರು. ಈ ಹಂತದಲ್ಲಿ ರೆಫರಿ ಜೊತೆ ವಾಗ್ವಾದ ಕೂಡ ನಡೆಸಿದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಗೇಮ್‌ಅನ್ನು ಅಕಾನೆ ಗೆದ್ದುಕೊಂಡರು.
ಅಂತಿಮ ಮತ್ತು ನಿರ್ಣಾಯಕ ಗೇಮ್‌ನಲ್ಲೂ ಲಯ ಮುಂದುವರಿಸಿದ ಜಪಾನ್ ಆಟಗಾರ್ತಿ, ಆರಂಭದಿಂದಲೇ ಸಿಂಧು ಹಿನ್ನಡೆಯಲ್ಲಿರುವಂತೆ ನೋಡಿಕೊಂಡರು. ಕೊನೆಯ ಹಂತದಲ್ಲಿ ಐದರಲ್ಲಿ ಎರಡು ಗೇಮ್ ಪಾಯಿಂಟ್ಸ್‌ಗಳನ್ನು ಅಕಾನೆ ಉಳಿಸಿಕೊಂಡರು.
ಉಭಯ ಆಟಗಾರ್ತಿಯರ ನಡುವಣ ಇದುವರೆಗಿನ ಮುಖಾಮುಖಿಯಲ್ಲಿ ಸಿಂಧು 13ರಲ್ಲಿ, ಅಕಾನೆ ಒಂಬತು ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.
ಸಿಂಧು ಅವರ ಸೋಲಿನೊಂದಿಗೆ ಚಾಂಪಿಯನ್‌ಷಿಪ್‌ನ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.