ADVERTISEMENT

100ನೇ ಟೆಸ್ಟ್ ಪಂದ್ಯದಲ್ಲಿ ಕುಂಬ್ಳೆ, ಕಪಿಲ್ ದಾಖಲೆ ಮುರಿದ ಅಶ್ವಿನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮಾರ್ಚ್ 2024, 10:50 IST
Last Updated 9 ಮಾರ್ಚ್ 2024, 10:50 IST
<div class="paragraphs"><p>ರವಿಚಂದ್ರನ್ ಅಶ್ವಿನ್</p></div>

ರವಿಚಂದ್ರನ್ ಅಶ್ವಿನ್

   

(ಪಿಟಿಐ ಚಿತ್ರ)

ಧರ್ಮಶಾಲಾ: ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅನೇಕ ದಾಖಲೆಗಳನ್ನು ಬರೆದಿದ್ದಾರೆ.

ADVERTISEMENT

ಧರ್ಮಶಾಲಾದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 64 ರನ್ ಅಂತರದ ಜಯ ದಾಖಲಿಸಿದೆ. ಆ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 4-1ರ ಅಂತರದಲ್ಲಿ ವಶಪಡಿಸಿಕೊಂಡಿದೆ.

ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಸೇರಿದಂತೆ ಪಂದ್ಯದಲ್ಲಿ ಒಟ್ಟು ಒಂಬತ್ತು ವಿಕೆಟ್‌ಗಳನ್ನು ಅಶ್ವಿನ್ ಕಬಳಿಸಿದ್ದಾರೆ. ಟೆಸ್ಟ್ ಇನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಲ ಐದು ವಿಕೆಟ್‌ಗಳನ್ನು ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ದಿಗ್ಗಜ ಅನಿಲ್ ಕುಂಬ್ಳೆ ದಾಖಲೆಯನ್ನು ಅಶ್ವಿನ್ ಮುರಿದಿದ್ದಾರೆ. ಅಲ್ಲದೆ ರಿಚರ್ಡ್ ಹಾಡ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಐದು ವಿಕೆಟ್ ಸಾಧನೆ (ಇನಿಂಗ್ಸ್):

  • ಮುತ್ತಯ್ಯ ಮುರಳೀಧರನ್: 67

  • ಶೇನ್ ವಾರ್ನ್: 37

  • ರಿಚರ್ಡ್ ಹಾಡ್ಲಿ: 36

  • ಆರ್. ಅಶ್ವಿನ್: 36

  • ಅನಿಲ್ ಕುಂಬ್ಳೆ: 35

100ನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಸಾಧನೆ:

ತಮ್ಮ ಕ್ರಿಕೆಟ್ ವೃತ್ತಿ ಜೀವನದ 100ನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗಳಿಸಿದ ಮೊದಲ ಬೌಲರ್ ಎಂದೆನಿಸಿಕೊಳ್ಳುವ ಅವಕಾಶದಿಂದ ಅಶ್ವಿನ್ ಸ್ವಲ್ಪದರಲ್ಲೇ ವಂಚಿತರಾದರು. ಮೊದಲ ಇನಿಂಗ್ಸ್‌ನಲ್ಲಿ 51ಕ್ಕೆ ನಾಲ್ಕು ವಿಕೆಟ್ ಗಳಿಸಿದ್ದ ಅಶ್ವಿನ್ ಎರಡನೇ ಇನಿಂಗ್ಸ್‌ನಲ್ಲಿ 77ಕ್ಕೆ ಐದು ವಿಕೆಟ್ ಪಡೆದರು. ಇದು 100ನೇ ಟೆಸ್ಟ್ ಪಂದ್ಯದಲ್ಲಿ ಬೌಲರ್ ನೀಡಿದ (9/128) ಶ್ರೇಷ್ಠ ಪ್ರದರ್ಶನವಾಗಿದೆ. ಈ ಹಿಂದೆ 1996ರಲ್ಲಿ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ 141 ರನ್ ತೆತ್ತು ಒಟ್ಟು ಒಂಬತ್ತು ವಿಕೆಟ್ ಕಬಳಿಸಿದ್ದರು. 1989ರಲ್ಲಿ ಕಪಿಲ್ ದೇವ್, ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ 151 ರನ್ ನೀಡಿ ಒಟ್ಟು 7 ವಿಕೆಟ್ ಗಳಿಸಿದ್ದರು.

100ನೇ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಸಾಧನೆ:

ಇನ್ನು 100ನೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಪಡೆದ ದಿಗ್ಗಜರ ಸಾಲಿಗೆ ಅಶ್ವಿನ್ ಸಹ ಸೇರ್ಪಡೆಗೊಂಡರು. ಈ ಹಿಂದೆ 2002ರಲ್ಲಿ ಶೇನ್ ವಾರ್ನ್, 2005ರಲ್ಲಿ ಅನಿಲ್ ಕುಂಬ್ಳೆ, 2006ರಲ್ಲಿ ಮುತ್ತಯ್ಯ ಮುರಳೀಧರನ್ ಸಹ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗಳಿಸಿದ್ದರು. ಈ ಪೈಕಿ ಅಶ್ವಿನ್ ಪದಾರ್ಪಣೆ ಹಾಗೂ 100ನೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗಳಿಸಿದ ಏಕಮಾತ್ರ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.