ADVERTISEMENT

ಭಾರತವೇ ಟಿ20 ವಿಶ್ವಕಪ್ ಗೆಲುವಿನ ನೆಚ್ಚಿನ ತಂಡ: ರಾಹುಲ್ ದ್ರಾವಿಡ್ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 16:22 IST
Last Updated 27 ಜನವರಿ 2026, 16:22 IST
ದಿ ರೈಸ್ ಆಫ್ ಹಿಟ್‌ಮ್ಯಾನ್ ಪುಸ್ತಕ ಕುರಿತು ‘ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್. ಕೃತಿಯ ಲೇಖಕ ಆರ್‌. ಕೌಶಿಕ್ ಇದ್ದಾರೆ  
ದಿ ರೈಸ್ ಆಫ್ ಹಿಟ್‌ಮ್ಯಾನ್ ಪುಸ್ತಕ ಕುರಿತು ‘ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್. ಕೃತಿಯ ಲೇಖಕ ಆರ್‌. ಕೌಶಿಕ್ ಇದ್ದಾರೆ     

ಬೆಂಗಳೂರು: ‘ಭಾರತ ತಂಡವು ಟಿ20 ಕ್ರಿಕೆಟ್ ಮಾದರಿಯಲ್ಲಿ ಬೇರೆಲ್ಲ ದೇಶಗಳಿಗಿಂತ ವಿಭಿನ್ನವಾಗಿ ಆಡುತ್ತಿದೆ. ಚುಟುಕು ಮಾದರಿಯಲ್ಲಿ ಇಲ್ಲಿಯ ಆಟಗಾರರ ಸಾಮರ್ಥ್ಯ ಅಮೋಘವಾಗಿದೆ. ಆದ್ದರಿಂದ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತವೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ’–

ಕ್ರಿಕೆಟ್  ದಂತಕಥೆ ರಾಹುಲ್ ದ್ರಾವಿಡ್ ಅವರ ವಿಶ್ವಾಸದ ನುಡಿಗಳಿವು. 2024ರಲ್ಲಿ ಭಾರತ ತಂಡವು ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಜಯಿಸಿತ್ತು. ಆಗ ದ್ರಾವಿಡ್ ಅವರು ತಂಡದ ಮುಖ್ಯ ಕೋಚ್ ಆಗಿದ್ದರು. ಮಂಗಳವಾರ ಕೆಎಸ್‌ಸಿಎ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕ್ರಿಕೆಟ್ ಪತ್ರಕರ್ತ ಆರ್‌. ಕೌಶಿಕ್ ಅವರು ರೋಹಿತ್ ಶರ್ಮಾ ಕುರಿತು ಬರೆದಿರುವ ‘ದಿ ರೈಸ್ ಆಫ್‌ ದಿ ಹಿಟ್‌ಮ್ಯಾನ್’  ಕೃತಿಯ ‘ಸಂಭ್ರಮ’ದಲ್ಲಿ ದ್ರಾವಿಡ್ ಸಂವಾದ ನಡೆಸಿದರು. 

ಮುಂದಿನ ತಿಂಗಳು ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. 

ADVERTISEMENT

‘ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಭಾರತದ್ದೇ ಪಾರಮ್ಯವಿದೆ. ಅದರಲ್ಲೂ ಟಿ20 ಕ್ರಿಕೆಟ್‌ನಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಶೇ 80ರಷ್ಟು ಯಶಸ್ಸು ಗಳಿಸಿದೆ. ಆದ್ದರಿಂದ ಈಬಾರಿ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ಗಂತೂ ಸರಾಗವಾಗಿ ತಲುಪಲಿದ್ದಾರೆ. ಆದರೆ; ಈ ಮಾದರಿಯಲ್ಲಿ ಯಾವ ತಂಡ ಬೇಕಾದರೂ ಆ ದಿನದಾಟದಲ್ಲಿ ಮಿಂಚಿಬಿಡಬಹುದು. ಅಂತಹ ಅಚ್ಚರಿಯ ಫಲಿತಾಂಶಗಳು ಬರುವ ಸಾಧ್ಯತೆಯೂ ಹೆಚ್ಚು’ ಎಂದರು. 

‘ರೋಹಿತ್ ಶರ್ಮಾ ಅವರು ನಾಯಕತ್ವದ ಕೌಶಲಗಳನ್ನು ಬಹಳ ಚುರುಕಾಗಿ ಕಲಿತುಕೊಂಡರು. ಆ ಕಾಲದಲ್ಲಿ ತಂಡದಲ್ಲಿ ಪರಿವರ್ತನೆ ನಡೆಯುತ್ತಿತ್ತು. ಯುವ ಆಟಗಾರರು ಇದ್ದರು. ತಮ್ಮ ವೈಯಕ್ತಿಕ ಸಾಧನೆ, ದಾಖಲೆಗಳನ್ನು ಪರಿವೆಗೆ ತೆಗೆದುಕೊಳ್ಳದೇ ತಂಡವನ್ನು ಕಟ್ಟಿ ಯಶಸ್ಸಿನತ್ತ ಮುನ್ನಡೆಸಲು ರೋಹಿತ್ ಎಲ್ಲ ರೀತಿಯಿಂದಲೂ ಶ್ರಮಿಸಿದರು. ಅದರಿಂದಾಗಿ ಕೋಚ್ ಆಗಿ ನನ್ನ ಕೆಲಸ ಹಗುರವಾಯಿತು’ ಎಂದರು. 

ಟೆಸ್ಟ್ ಕ್ರಿಕೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ‘ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಆರಂಭವಾದ ನಂತರ ಸ್ಪಷ್ಟ ಫಲಿತಾಂಶ ಪಡೆಯಲು ಪೈಪೋಟಿ ಹೆಚ್ಚಿದೆ. ಅದರಿಂದಾಗಿ ಪಿಚ್‌ಗಳ ನಿರ್ವಹಣೆಯ ಮಾದರಿಯೂ ಬದಲಾಗಿದೆ. ಸ್ಪಿನ್ನರ್‌ಗಳ ಪಾತ್ರವೂ ಕಡಿಮೆಯಾಗುತ್ತಿದೆ. ಇದು ಭಾರತಕ್ಕಷ್ಟೇ ಅಲ್ಲ, ಇತ್ತೀಚಿನ  ವರ್ಷಗಳಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್‌ ತಂಡಗಳಲ್ಲಿಯೂ ಇದೇ ಪರಿಸ್ಥಿತಿ ಇದೆ’ ಎಂದರು. 

‘ಇವತ್ತು ಬಹಳಷ್ಟು ಆಟಗಾರರು ಮೂರು ಮಾದರಿಗಳಲ್ಲಿಯೂ ಆಡುತ್ತಿದ್ದಾರೆ. ಅದರಿಂದಾಗಿ ಒಂದರಿಂದ, ಮತ್ತೊಂದು ಮಾದರಿಗೆ ಹೊಂದಿಕೊಂಡು ಆಡುವುದೇ ದೊಡ್ಡ ಸವಾಲು. ನಮ್ಮ ಕಾಲದಲ್ಲಿ  ಎರಡೇ ಮಾದರಿಗಳಿದ್ದವು. ಟೆಸ್ಟ್ ಸರಣಿಗಳಿಗಾಗಿ ಕನಿಷ್ಠ ಒಂದು ತಿಂಗಳ ಪೂರ್ವಭಾವಿ ಸಿದ್ದತೆ ಮಾಡುತ್ತಿದ್ದೆವು. ಈಗ ಅಷ್ಟು ಸಮಯ ಯಾರಿಗೂ ಸಿಗುವುದಿಲ್ಲ’ ಎಂದು ವಿಶ್ಲೇಷಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.