ADVERTISEMENT

ಐದನೇ ಕ್ರಮಾಂಕಕ್ಕೆ ರಾಹುಲ್‌ ಸೂಕ್ತ

ಹಿರಿಯ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 19:30 IST
Last Updated 23 ಮಾರ್ಚ್ 2020, 19:30 IST
ಸಂಜಯ್‌ ಮಾಂಜ್ರೇಕರ್‌
ಸಂಜಯ್‌ ಮಾಂಜ್ರೇಕರ್‌   
""

ಮುಂಬೈ (ಪಿಟಿಐ): ಏಕದಿನ ಪಂದ್ಯಗಳಲ್ಲಿ ಐದನೇ ಕ್ರಮಾಂಕದ ಬ್ಯಾಟಿಂಗ್‌ಗೆ ಕೆ.ಎಲ್‌.ರಾಹುಲ್‌ ಅತ್ಯಂತ ಸೂಕ್ತ ಆಯ್ಕೆ ಎಂದು ಹಿರಿಯ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುರೇಶ್‌ ರೈನಾ ಹಾಗೂ ಯುವರಾಜ್‌ರಂತಹ ಆಟಗಾರರತ್ತಲೂ ಭಾರತ ತಂಡದ ಆಡಳಿತ ಮಂಡಳಿ ಗಮನಹರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ತಮ್ಮ ಟ್ವಿಟರ್‌ ಖಾತೆಯಲ್ಲಿ ‘ಟಾಕ್‌ ಕ್ರಿಕೆಟ್‌’ ಎಂಬ ಶೋ ನಲ್ಲಿ ಅವರು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಾ ಈ ಮಾತುಗಳನ್ನು ಹೇಳಿದರು.

ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದಲ್ಲಿ ನಡೆದ ಏಕದಿನ ಸರಣಿಯಲ್ಲಿ ರಾಹುಲ್‌ ಮಿಂಚಿದ್ದರು. ಬಳಿಕ ನ್ಯೂಜಿಲೆಂಡ್‌ ಎದುರಿನ ಸೀಮಿತ ಓವರ್‌ಗಳ ಸರಣಿಯಲ್ಲಿ ಅವರ ಬ್ಯಾಟ್‌ನಿಂದ ರನ್‌ಗಳು ಹರಿದುಬಂದಿದ್ದವು. ಕರ್ನಾಟಕದ ಈ ಬ್ಯಾಟ್ಸ್‌ಮನ್‌, ವಿಕೆಟ್‌ ಕೀಪಿಂಗ್‌ ಕೂಡ ಮಾಡಿ ಗಮನಸೆಳೆದಿದ್ದಾರೆ.

ADVERTISEMENT

ಏಕದಿನ ಮಾದರಿಯಲ್ಲಿ ರಾಹುಲ್‌ ಮೇಲೇಯೇ ಹೆಚ್ಚು ಭರವಸೆ ಇಡಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಮೆಂಟೇಟರ್‌ ಕೂಡ ಆಗಿರುವ ಮಾಂಜ್ರೇಕರ್‌, ‘ಸದ್ಯಕ್ಕೆ ರಾಹುಲ್‌ ಉತ್ತಮ ಆಯ್ಕೆ. ಒಂದೊಮ್ಮೆ ಅವರು ಅಗ್ರ ಕ್ರಮಾಂಕದಲ್ಲಿ ಆಡಿದರೆ ಐದನೇ ಕ್ರಮಾಂಕದಲ್ಲಿ ರೈನಾ ಹಾಗೂ ಯುವರಾಜ್‌ರಂತಹ ಆಟಗಾರರತ್ತ ಚಿತ್ತ ಹರಿಸಬೇಕು’ ಎಂದು ಹೇಳಿದರು.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್‌ನಲ್ಲಿ ನಾಲ್ಕನೇ ಕ್ರಮಾಂಕ ಮತ್ತು ಆಲ್‌ರೌಂಡರ್‌ ಸ್ಥಾನಕ್ಕೆ ನಿಮ್ಮ ಆಯ್ಕೆ ಯಾರು ಎಂಬುದಕ್ಕೆ ಕ್ರಮವಾಗಿ ಶ್ರೇಯರ್‌ ಅಯ್ಯರ್‌ ಹಾಗೂ ಹಾರ್ದಿಕ್‌ ಪಾಂಡ್ಯ ಅವರನ್ನು ಹೆಸರಿಸಿದರು.

ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಮುಂಬೈ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಅವರು, ‘ಅಸಾಧಾರಣ ನಾಯಕತ್ವ’ದ ಕೊರತೆಯಿಂದ ಉತ್ತಮ ಸಾಮರ್ಥ್ಯ ತೋರಲು ಸಾಧ್ಯವಾಗಲಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.