ಕ್ರಿಕೆಟ್
(ಸಾಂಕೇತಿಕ ಚಿತ್ರ)
ಇಂದೋರ್: ಮಧ್ಯಪ್ರದೇಶ ಮತ್ತು ಕರ್ನಾಟಕ ನಡುವಣ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ‘ಸಿ’ ಗುಂಪಿನ ಪಂದ್ಯದ ಎರಡನೇ ದಿನದಾಟ ಶನಿವಾರ ಮಳೆ, ಕ್ರೀಡಾಂಗಣ ತೇವಗೊಂಡಿದ್ದರಿಂದ ನಡೆಯಲಿಲ್ಲ. ಮೊದಲ ದಿನವಾದ ಶುಕ್ರವಾರ ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ಆತಿಥೇಯ ಮಧ್ಯಪ್ರದೇಶ 83 ಓವರುಗಳ ಆಟದಲ್ಲಿ 4 ವಿಕೆಟ್‌ಗೆ 232 ರನ್ ಗಳಿಸಿತ್ತು.
ಮಧ್ಯಮ ಕ್ರಮಾಂಕದ ಬ್ಯಾಟರ್ ಹರ್‌ಪ್ರೀತ್ ಸಿಂಗ್ ಭಾಟಿಯಾ ಅವರ ಅಜೇಯ 75 ರನ್‌ಗಳು (164 ಎಸೆತ, 4x8) ಮೊದಲ ದಿನದಾಟದಲ್ಲಿ ಗಮನ ಸೆಳೆಯಿತು. ಉಳಿದ ಆಟಗಾರರು ಉತ್ತಮ ಆರಂಭ ಮಾಡಿದರೂ ಅದನ್ನು ದೊಡ್ಡಮೊತ್ತವಾಗಿ ಪರಿವರ್ತಿಸಲು ವಿಫಲರಾದರು.
ಆರಂಭ ಆಟಗಾರ ಹಿಮಾಂಶು ಮಂತ್ರಿ ಎರಡನೇ ಓವರಿನಲ್ಲೇ ವೇಗಿ ಪ್ರಸಿದ್ಧಕೃಷ್ಣ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಯಶ್ ದುಬೆ (20), ಶುಭ್ರಾಂಶು ಸೇನಾಪತಿ (28) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.
ನಾಯಕ ಶುಭ್ರಾಂಶು ಸೇನಾಪತಿ 40 ರನ್ (88ಎ, 4x2) ಗಳಿಸಿದ್ದಾಗ ಕಾಲಿನ ಸ್ನಾಯು ಸೆಳೆತದಿಂದ ಹೊರನಡೆಯಬೇಕಾಯಿತು. ರಜತ್ ಪಾಟೀದಾರ್ 31 ರನ್ ಗಳಿಸಿದರೂ ಬೇರೂರಲಿಲ್ಲ. ಆದರೆ ಹರಪ್ರೀತ್ ಇನ್ನೊಂದು ತುದಿಯಲ್ಲಿ ತಂಡದ ರಕ್ಷಣೆಗೆ ನಿಂತು ಜೊತೆಯಾಟಗಳಲ್ಲಿ ಭಾಗಿಯಾದರು. ಅವರು ಮುರಿಯದ ಐದನೇ ವಿಕೆಟ್‌ಗೆ ವೆಂಕಟೇಶ ಅಯ್ಯರ್ (ಔಟಾಗದೇ 31) ಜೊತೆ 48 ರನ್ ಸೇರಿಸಿ ಮಧ್ಯಮ ಕ್ರಮಾಂಕ ಕುಸಿಯದಂತೆ ನೋಡಿಕೊಂಡರು.
ಪದಾರ್ಪಣೆ: ಬ್ಯಾಟರ್ ಆರ್.ಸ್ಮರಣ್ ಅವರು ಈ ಪಂದ್ಯದ ಮೂಲಕ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದರು. ರಾಜ್ಯ ತಂಡವನ್ನು ರಣಜಿಯಲ್ಲಿ ಪ್ರತಿನಿಧಿಸಿದ 311ನೇ ಆಟಗಾರ ಎನಿಸಿದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕರ್ನಾಟಕ: 83 ಓವರುಗಳಲ್ಲಿ 4 ವಿಕೆಟ್‌ಗೆ 232 (ಶುಭ್ರಾಂಶು ಸೇನಾಪತಿ 28, ಹರ್‌ಪ್ರೀತ್ ಸಿಂಗ್ ಔಟಾಗದೇ 75, ಶುಭಂ ಶರ್ಮಾ (ಗಾಯಾಳಾಗಿ ನಿವೃತ್ತ) 40, ರಜತ್ ಪಾಟೀದಾರ್ 31, ವೆಂಕಟೇಶ ಅಯ್ಯರ್ ಔಟಾಗದೇ 31; ವಾಸುಕಿ ಕೌಶಿಕ್ 44ಕ್ಕೆ1, ಪ್ರಸಿದ್ಧ ಕೃಷ್ಣ 20ಕ್ಕೆ1, ವೈಶಾಖ ವಿಜಯಕುಮಾರ್ 39ಕ್ಕೆ1, ಹಾರ್ದಿಕ್ ರಾಜ್ 38ಕ್ಕೆ1).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.