ADVERTISEMENT

ಕೂಚ್‌ ಬೆಹಾರ್ ಟ್ರೋಫಿ ಕ್ರಿಕೆಟ್‌ ಟೂರ್ನಿ: ಗಜರಾಜ್‌, ಹೇಮಂತ್‌ ಶತಕ ಸಂಭ್ರಮ

ರಾಜಸ್ಥಾನ ತಂಡದ ವಿಕೆಟ್ ಕಬಳಿಸಿಲು ಹೆಣಗಾಡಿದ ಆತಿಥೇಯರು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 15:55 IST
Last Updated 3 ಡಿಸೆಂಬರ್ 2018, 15:55 IST
ಹುಬ್ಬಳ್ಳಿಯಲ್ಲಿ ಸೋಮವಾರ ಆರಂಭವಾದ ಕೂಚ್‌ ಬೆಹರ್‌ ಕ್ರಿಕೆಟ್‌ ಟ್ರೋಫಿ ಪಂದ್ಯದಲ್ಲಿ ಶತಕ ಬಾರಿಸಿದ ರಾಜಸ್ಥಾನ ತಂಡದ ಗಜರಾಜ್‌ (ಎಡ), ಹೇಮಂತ ಜೋಶಿ ಬ್ಯಾಟಿಂಗ್ ವೈಖರಿ –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌
ಹುಬ್ಬಳ್ಳಿಯಲ್ಲಿ ಸೋಮವಾರ ಆರಂಭವಾದ ಕೂಚ್‌ ಬೆಹರ್‌ ಕ್ರಿಕೆಟ್‌ ಟ್ರೋಫಿ ಪಂದ್ಯದಲ್ಲಿ ಶತಕ ಬಾರಿಸಿದ ರಾಜಸ್ಥಾನ ತಂಡದ ಗಜರಾಜ್‌ (ಎಡ), ಹೇಮಂತ ಜೋಶಿ ಬ್ಯಾಟಿಂಗ್ ವೈಖರಿ –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌   

ಹುಬ್ಬಳ್ಳಿ: ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡಿ. ಗಜರಾಜ್‌ ಮತ್ತು ಹೇಮಂತ್‌ ಜೋಶಿ ಅವರ ಶತಕಗಳ ಬಲದಿಂದ ರಾಜಸ್ಥಾನ ತಂಡ 19 ವರ್ಷದ ಒಳಗಿನವರ ಕೂಚ್‌ ಬೆಹಾರ್‌ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಕರ್ನಾಟಕ ಎದುರು ಮೊದಲ ದಿನ ಉತ್ತಮ ಮೊತ್ತ ಕಲೆಹಾಕಿದೆ.

ಇಲ್ಲಿನ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾದ ನಾಲ್ಕು ದಿನಗಳ ಪಂದ್ಯದಲ್ಲಿ ಟಾಸ್‌ ಗೆದ್ದ ರಾಜಸ್ಥಾನ 90 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 249 ರನ್‌ ಗಳಿಸಿತು. ಉಪನಾಯಕನ ಜವಾಬ್ದಾರಿಗೆ ತಕ್ಕಂತೆ ಆಡಿದ ಗಜರಾಜ್‌ 216 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿದಂತೆ 103 ರನ್‌ ಗಳಿಸಿದರು.

ಈ ಬಾರಿಯ ಟೂರ್ನಿಯಲ್ಲಿ ಗಜರಾಜ್‌ ಗಳಿಸಿದ ಎರಡನೇ ಶತಕವಿದು. ಹರಿಯಾಣ ಎದುರಿನ ಪಂದ್ಯದಲ್ಲಿ ಅವರು 189 ರನ್‌ ಗಳಿಸಿದ್ದರು. ಆರಂಭದಿಂದಲೂ ತಾಳ್ಮೆಯಿಂದ ಬ್ಯಾಟಿಂಗ್‌ ಮಾಡಿದ ಹೇಮಂತ್‌ ಜೋಶಿ 122 ರನ್ ಗಳಿಸಿದ್ದಾರೆ. ಇದಕ್ಕಾಗಿ 240 ಎಸೆತ ತೆಗೆದುಕೊಂಡರು. 12 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸಿದ್ದಾರೆ.

ADVERTISEMENT

ಈ ಜೋಡಿ ಮೊದಲ ವಿಕೆಟ್‌ಗೆ 194 ರನ್‌ಗಳ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿತು. ಹೇಮಂತ್‌, ಹರಿಯಾಣ ಹಾಗೂ ಹೈದರಾಬಾದ್‌ ವಿರುದ್ಧದ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದರು.

ಆರಂಭಿಕ ಜೋಡಿಯನ್ನು ಅಲುಗಿಸಲು ಕರ್ನಾಟಕ ತಂಡದ ನಾಯಕ ಶುಭಾಂಗ್‌ ಹೆಗ್ಡೆ ಸಾಕಷ್ಟು ಕಸರತ್ತು ಮಾಡಿದರು. ಎಂಟು ಬೌಲರ್‌ಗಳನ್ನು ಕಣಕ್ಕಿಳಿಸಿದರೂ ಮೊದಲ ವಿಕೆಟ್ ಕಬಳಿಸಲು 63ನೇ ಓವರ್‌ ತನಕ ಕಾಯಬೇಕಾಯಿತು. ಶುಭಾಂಗ್‌ ಬೌಲಿಂಗ್‌ನಲ್ಲಿ ಗಜರಾಜ್‌ ಔಟಾದರು.

ಸಂಕ್ಷಿಪ್ತ ಸ್ಕೋರು: ರಾಜಸ್ಥಾನ ಮೊದಲ ಇನಿಂಗ್ಸ್‌ 90 ಓವರ್‌ಗಳಲ್ಲಿ 1 ವಿಕೆಟ್‌ಗೆ 249 (ಡಿ. ಗಜರಾಜ್‌ 103, ಹೇಮಂತ್‌ ಜೋಶಿ ಬ್ಯಾಟಿಂಗ್‌ 122, ಸಮರಪ್ರೀತ್‌ ಜೋಶಿ ಬ್ಯಾಟಿಂಗ್‌ 24; ಶುಭಾಂಗ್‌ ಹೆಗ್ಡೆ 45ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.