ADVERTISEMENT

ದೇವದತ್ತ ಸುಂದರ ಶತಕ: ಕರ್ನಾಟಕದ ಮುನ್ನಡೆ

ರಣಜಿ ಕ್ರಿಕೆಟ್: ಶರತ್ ಅರ್ಧಶತಕ, ಶಹಬಾಜ್ ನದೀಮ್‌ಗೆ ಐದು ವಿಕೆಟ್

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 22:26 IST
Last Updated 25 ಜನವರಿ 2023, 22:26 IST
   

ಜೆಮ್ಶೆಡ್‌ಪುರ: ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ದಾಖಲಿಸಿದ ಚೆಂದದ ಶತಕದ ಬಲದಿಂದ ಕರ್ನಾಟಕ ತಂಡವು ಜಾರ್ಖಂಡ್ ಎದುರಿನ ರಣಜಿ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತು.

ಕೀನಾನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿ ಗುಂಪಿನ ಪಂದ್ಯದ ಎರಡನೇ ದಿನವಾದ ಬುಧವಾರ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 89.1 ಓವರ್‌ಗಳಲ್ಲಿ 300 ರನ್‌ ಗಳಿಸಿತು. ಇದರೊಂದಿಗೆ 136 ರನ್‌ಗಳ ಮುನ್ನಡೆ ಸಾಧಿಸಿತು.

ಎರಡನೇ ಇನಿಂಗ್ಸ್ ಆರಂಭಿಸಿದ ಆತಿಥೇಯ ಜಾರ್ಖಂಡ್ ತಂಡವು ದಿನದಾಟದ ಕೊನೆಗೆ 28 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 85 ರನ್‌ ಗಳಿಸಿದೆ. ಕುಮಾರ್ ಸೂರಜ್ (ಬ್ಯಾಟಿಂಗ್ 34) ಮತ್ತು ಕುಮಾರ್ ಕುಶಾಗ್ರ (ಬ್ಯಾಟಿಂಗ್ 24) ಕ್ರೀಸ್‌ನಲ್ಲಿದ್ದಾರೆ. ಪಂದ್ಯದಲ್ಲಿ ಇನ್ನೂ ಎರಡು ದಿನಗಳ ಆಟ ಬಾಕಿ ಇದೆ. ಮಯಂಕ್ ಅಗರವಾಲ್ ಬಳಗವು ಗೆಲುವಿನ ಕನಸು ಕಾಣುತ್ತಿದ್ದು ಬಿಗಿಹಿಡಿತ ಸಾಧಿಸಿದೆ. ಆದರೂ ಜಾರ್ಖಂಡ್ ತಂಡದ ಬ್ಯಾಟರ್‌ಗಳು ತಾಳ್ಮೆಯಿಂದ ಆಡಿ ಸೋಲು ತಪ್ಪಿಸಿಕೊಳ್ಳುವ ಅವಕಾಶವೂ ಇದೆ.

ADVERTISEMENT

ದೇವದತ್ತ ಶತಕ: ಅನಾರೋಗ್ಯದಿಂದಾಗಿ ಕೆಲವು ತಿಂಗಳುಗಳ ಕಾಲ ದೇವದತ್ತ ಕ್ರಿಕೆಟ್‌ನಿಂದ ದೂರವುಳಿದಿದ್ದರು. ಈ ರಣಜಿ ಟ್ರೋಫಿ ಟೂರ್ನಿಯ ಆರಂಭದ ಪಂದ್ಯಗಳಲ್ಲಿಯೂ ಆಡಿರಲಿಲ್ಲ. ಇದು ಅವರಿಗೆ ಮೂರನೇ ಪಂದ್ಯವಾಗಿದೆ. ರಾಜಸ್ಥಾನ ಮತ್ತು ಕೇರಳ ವಿರುದ್ಧದ ಪಂದ್ಯಗಳಲ್ಲಿ ಅವರು ದೊಡ್ಡ ಮೊತ್ತ ಗಳಿಸುವ ಪ್ರಯತ್ನದಲ್ಲಿ ಸಫಲರಾಗಿರಲಿಲ್ಲ. ಆದರೆ ಇಲ್ಲಿ ಮಿಂಚಿದರು.

ಜಾರ್ಖಂಡ್ ಸ್ಪಿನ್ನರ್ ಶಹಬಾಜ್ ನದೀಂ (141ಕ್ಕೆ5) ಅವರ ದಾಳಿಯ ಮುಂದೆ ಕರ್ನಾಟಕದ ಅದೂ ಪ್ರಮುಖ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ ಹೊತ್ತಿನಲ್ಲಿ ಒತ್ತಡವನ್ನು ಮೀರಿ ನಿಂತರು. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಎರಡನೇ ಶತಕ (114; 175ಎ, 4X7, 6X5) ದಾಖಲಿಸಿದರು.

ಪಂದ್ಯದ ಮೊದಲ ದಿನದಾಟವಾದ ಮಂಗಳವಾರ ಜಾರ್ಖಂಡ್ ತಂಡವು 64.2 ಓವರ್‌ಗಳಲ್ಲಿ 164 ರನ್ ಗಳಿಸಿ ಆಲೌಟ್ ಆಗಿತ್ತು. ಕರ್ನಾಟಕವು ದಿನದಾಟದ ಅಂತ್ಯಕ್ಕೆ 27 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 80 ರನ್ ಗಳಿಸಿತ್ತು. ದೇವದತ್ತ ಪಡಿಕ್ಕಲ್ (ಬ್ಯಾಟಿಂಗ್ 20) ಮತ್ತು ನಿಕಿನ್ ಜೋಸ್ (ಬ್ಯಾಟಿಂಗ್ 8) ಕ್ರೀಸ್‌ನಲ್ಲಿದ್ದರು. ಬುಧವಾರ ನಿಕಿನ್ ಜೋಸ್, ಮನೀಷ್ ಪಾಂಡೆ, ಶ್ರೇಯಸ್ ಗೋಪಾಲ್ ಮತ್ತು ಕೃಷ್ಣಪ್ಪ ಗೌತಮ್ ಬ್ಯಾಟ್‌ನಿಂದ ರನ್‌ಗಳು ಹರಿಯಲಿಲ್ಲ.

ಈ ಸಂದರ್ಭದಲ್ಲಿ ತಾಳ್ಮೆಯಿಂದ ಆಡಿದ ದೇವದತ್ತ ಅವರು ಯುವಪ್ರತಿಭೆ ಶುಭಾಂಗ್ ಹೆಗಡೆ (35; 74ಎ, 4X5) ಅವರೊಂದಿಗೆ ಆರನೇ ವಿಕೆಟ್‌ ಜೊತೆಯಾಟದಲ್ಲಿ 90 ರನ್ ಸೇರಿಸಿದರು. ಶುಭಾಂಗ್ ಔಟಾದ ನಂತರ ದೇವದತ್ತ ಮತ್ತು ಬಿ.ಆರ್. ಶರತ್ (60; 75ಎ, 4X10) ಏಳನೇ ವಿಕೆಟ್ ಜೊತೆಯಾಟದಲ್ಲಿ 50 ರನ್‌ ಸೇರಿಸಿದರು.

76ನೇ ಓವರ್‌ನಲ್ಲಿ ಪಡಿಕ್ಕಲ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಅನುಕೂಲ್ ರಾಯ್ ಜೊತೆಯಾಟವನ್ನೂ ಮುರಿದರು. ಬದಲೀ ಫೀಲ್ಡರ್ ಉತ್ಕರ್ಷ್‌ಸಿಂಗ್ ಪಡೆದ ಕ್ಯಾಚ್‌ಗೆ ಪಡಿಕ್ಕಲ್ ನಿರ್ಗಮಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಜಾರ್ಖಂಡ್: 64.2 ಓವರ್‌ಗಳಲ್ಲಿ 164. ಕರ್ನಾಟಕ: 89.1 ಓವರ್‌ಗಳಲ್ಲಿ 300 (ದೇವದತ್ತ ಪಡಿಕ್ಕಲ್ 114, ಶುಭಾಂಗ್ ಹೆಗಡೆ 35, ಬಿ.ಆರ್. ಶರತ್ 60, ಶಹಬಾಜ್ ನದೀಮ್ 141ಕ್ಕೆ5, ಅನುಕೂಲ್ ರಾಯ್ 66ಕ್ಕೆ3) ಎರಡನೇ ಇನಿಂಗ್ಸ್: ಜಾರ್ಖಂಡ್:28 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 85 (ಕುಮಾರ್ ದೇವವ್ರತ್ 20, ಕುಮಾರ್ ಸೂರಜ್ ಬ್ಯಾಟಿಂಗ್ 34, ಕುಮಾರ್ ಕುಶಾಗ್ರ ಬ್ಯಾಟಿಂಗ್ 24, ವಾಸುಕಿ ಕೌಶಿಕ್ 8ಕ್ಕೆ1, ಕೃಷ್ಣಪ್ಪ ಗೌತಮ್ 21ಕ್ಕೆ1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.