ADVERTISEMENT

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕ ಕೈತಪ್ಪಿದ ಇನಿಂಗ್ಸ್ ಮುನ್ನಡೆ

ರಣಜಿ ಟ್ರೋಫಿ ಕ್ರಿಕೆಟ್: ಚೇತನ್–ದೊಡಿಯಾ ಜೊತೆಯಾಟದ ಮೋಡಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 19:15 IST
Last Updated 17 ಅಕ್ಟೋಬರ್ 2025, 19:15 IST
ಶ್ರೇಯಸ್  ಗೋಪಾಲ್ 
ಶ್ರೇಯಸ್  ಗೋಪಾಲ್    

ರಾಜ್‌ಕೋಟ್: ಸೌರಾಷ್ಟ್ರದ ಬಾಲಂಗೋಚಿ ಬ್ಯಾಟರ್‌ಗಳಾದ ಚೇತನ್ ಸಕಾರಿಯಾ ಮತ್ತು ಯುವರಾಜಸಿಂಹ ದೊಡಿಯಾ ಅವರು ಕರ್ನಾಟಕದಿಂದ ಇನಿಂಗ್ಸ್‌ ಮುನ್ನಡೆಯ ಅವಕಾಶವನ್ನು ಕಿತ್ತುಕೊಂಡರು.

ಕರ್ನಾಟಕದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರು ಎಂಟು ವಿಕೆಟ್ ಗಳಿಸಿದರೂ  ಸೌರಾಷ್ಟ್ರವು 4 ರನ್‌ಗಳ ಅಲ್ಪ ಅಂತರದ ಇನಿಂಗ್ಸ್ ಮುನ್ನಡೆ ಸಾಧಿಸಿತು. ಆದ್ದರಿಂದ ರಣಜಿ ಟ್ರೋಫಿ ಟೂರ್ನಿಯ ಬಿ ಗುಂಪಿನ ಮೊದಲ ಪಂದ್ಯದಲ್ಲಿ  ಪೂರ್ಣ ಅಂಕ ಗಳಿಸಬೇಕಾದರೆ ಕರ್ನಾಟಕವು ಜಯ ಗಳಿಸಬೇಕಿದೆ. ಡ್ರಾ ಆದರೆ ಒಂದು ಹಾಗೂ ಸೌರಾಷ್ಟ್ರಕ್ಕೆ ಮೂರು ಅಂಕ ಸಿಗುತ್ತವೆ. ಪಂದ್ಯದಲ್ಲಿ ಒಂದು ದಿನ ಮಾತ್ರ ಬಾಕಿ ಇದೆ. ಮಯಂಕ್ ಅಗರವಾಲ್ ಬಳಗವು ಜಯದತ್ತ ಚಿತ್ತ ನೆಟ್ಟಿದ್ದು ಎರಡನೇ ಇನಿಂಗ್ಸ್‌ನಲ್ಲಿ ವೇಗವಾಗಿ ರನ್‌ ಗಳಿಸಲು ಬ್ಯಾಟರ್‌ಗಳು ಪ್ರಯತ್ನಿಸಿದರು.  

ಮೂರನೇ ದಿನದಾಟದ ಮುಕ್ತಾಯಕ್ಕೆ ಕರ್ನಾಟಕ ತಂಡವು ಎರಡನೇ ಇನಿಂಗ್ಸ್‌ನಲ್ಲಿ  ಕರ್ನಾಟಕವು  28 ಓವರ್‌ಗಳಲ್ಲಿ 1 ವಿಕೆಟ್‌ಗೆ 89 ರನ್ ಗಳಿಸಿತು. ಅದರೊಂದಿಗೆ 85 ರನ್‌ಗಳ ಮುನ್ನಡೆ ಸಾಧಿಸಿತು. ಮಯಂಕ್ (ಬ್ಯಾಟಿಂಗ್ 31) ಮತ್ತು ದೇವದತ್ತ (ಬ್ಯಾಟಿಂಗ್ 18) ಕ್ರೀಸ್‌ನಲ್ಲಿದ್ದಾರೆ.  ಸ್ಪಿನ್ನರ್‌ಗಳೇ ಮೇಲುಗೈ ಸಾಧಿಸುತ್ತಿರುವ ಪಿಚ್‌ನಲ್ಲಿ ಕೊನೆಯ ದಿನದಂದು 200 ರಿಂದ 250 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಮುಟ್ಟುವುದು ಕೂಡ ಕಠಿಣವಾಗಲಿದೆ. 

ADVERTISEMENT

ಸಕಾರಿಯಾ–ದೊಡಿಯಾ ಜೊತೆಯಾಟ: ಕೊನೆಯ ವಿಕೆಟ್ ಜೊತೆಯಾಟದಲ್ಲಿ ಚೇತನ್ ಸಕಾರಿಯಾ (29; 72ಎಸೆತ) ಮತ್ತು ಯುವರಾಜಸಿಂಹ ದೊಡಿಯಾ (ಔಟಾಗದೇ 13; 34ಎ)  ಅವರು ಕೊನೆಯ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 34 ರನ್‌ಗಳು ಮಯಂಕ್ ಬಳಗಕ್ಕೆ ಕುತ್ತಾದವು. 

ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 372 ರನ್‌ ಗಳಿಸಿತ್ತು. ಅದಕ್ಕುತ್ತರವಾಗಿ ಸೌರಾಷ್ಟ್ರ ತಂಡವು 121.3 ಓವರ್‌ಗಳಲ್ಲಿ 376 ರನ್ ಗಳಿಸಿತು. 

ಶ್ರೇಯಸ್ ಅವರ ಅಮೋಘ ದಾಳಿಯಿಂದಾಗಿ ಸೌರಾಷ್ಟ್ರ ತಂಡವು 342 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ಆದರೆ ಕೊನೆಯ ವಿಕೆಟ್ ಗಳಿಸುವಲ್ಲಿ ಬೌಲರ್‌ಗಳು ಬೇಗ ಯಶಸ್ಸು ಗಳಿಸಲಿಲ್ಲ. ಕೊನೆಗೆ ಶ್ರೇಯಸ್ ಅವರೇ ತಮ್ಮ ಎಂಟನೇ ವಿಕೆಟ್ ರೂಪದಲ್ಲಿ ಚೇತನ್ ಸಕಾರಿಯಾ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಆದರೆ ಅದಕ್ಕಿಂತ ಮುಂಚೆ ಚೇತನ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. 72 ಎಸೆತಗಳನ್ನು ಎದುರಿಸಿದ ಅವರಿಗೆ ದೊಡಿಯಾ ಕೂಡ ಉತ್ತಮ ಬೆಂಬಲ ನೀಡಿದರು. 

ತಂಡದ ಮೊತ್ತವು 366 ಆಗಿದ್ದ ಸಂದರ್ಭದಲ್ಲಿ ಅಭಿಲಾಷ್ ಶೆಟ್ಟಿ ಎಸೆತವೊಂದು ದೊಡಿಯಾ ಅವರ ಬ್ಯಾಟ್ ಅಂಚು ಸವರಿಕೊಂಡು ಸ್ಲಿಪ್‌ ಫೀಲ್ಡರ್‌ಗಳ ಪಕ್ಕದಿಂದ ಬೌಂಡರಿಗೆರೆ ದಾಟಿತು. ನಂತರದ ಓವರ್‌ ಬೌಲಿಂಗ್ ಮಾಡಲು ಮಯಂಕ್ ಅವರು ಶ್ರೇಯಸ್‌ಗೆ ನೀಡಿದರು.  ಆದರೆ ನಾಯಕನ ನಿರೀಕ್ಷೆ ಕೈಗೂಡಲಿಲ್ಲ. 

ಶ್ರೇಯಸ್ ಎಸೆತವನ್ನು ಸ್ಲಾಗ್ ಸ್ವೀಪ್ ಮಾಡಿದ ಚೇತನ್ ಸಿಕ್ಸರ್‌ ಗಳಿಸಿದರು. ಸೌರಾಷ್ಟ್ರ ಪಾಳೆಯದಲ್ಲಿ ಸಂಭ್ರಮ ಕುಡಿಯೊಡೆಯಿತು. ಚೇತನ್ ಕೂಡ ಮುಷ್ಟಿ ಕಟ್ಟಿ ಗಾಳಿ ಗುದ್ದಿ ಸಂತಸಪಟ್ಟರು. ಎರಡು ಎಸೆತಗಳ ನಂತರ ಶ್ರೇಯಸ್ ಸೇಡು ತೀರಿಸಿಕೊಂಡರು. 

ಬೆಳಗಿನ ಅವಧಿಯಲ್ಲಿ ಅರ್ಪಿತ್ ವಸವದಾ (58 ರನ್) ಮತ್ತು ಸಮರ್ ಗಜರ್ (45 ರನ್) ತಂಡದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಶ್ರೇಯಸ್ ಅವರು ವಸವದಾ ವಿಕೆಟ್ ಗಳಿಸಿದರು. ಸಮರ್ ಮತ್ತು ಧರ್ಮೇಂದ್ರಸಿಂಹ ವಿಕೆಟ್‌ಗಳೂ ಶ್ರೇಯಸ್ ಬುಟ್ಟಿ ಸೇರಿದವು. 

ಉನದ್ಕತ್ ವಿಕೆಟ್ ಪಡೆದ ಸ್ಪಿನ್ನರ್ ಶಿಖರ್ ಶೆಟ್ಟಿ ರಣಜಿ ಟೂರ್ನಿಯಲ್ಲಿ ತಮ್ಮ ಖಾತೆ ತೆರೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.