
ನವದೆಹಲಿ: ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಈ ಬಾರಿಯ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ಪರ ಕಣಕ್ಕಿಳಿಯಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಥಾನಪಡೆಯಲು ವಿಫಲವಾಗಿರುವ ಜಡೇಜಾ, ರಣಜಿ ಟ್ರೋಫಿಯ ಎರಡನೇ ಸುತ್ತಿಗೆ ಸೌರಾಷ್ಟ್ರ ತಂಡವನ್ನು ಕೂಡಿಕೊಂಡಿದ್ದಾರೆ.
ರಾಜ್‌ಕೋಟ್‌ನಲ್ಲಿ ಶನಿವಾರದಿಂದ ಆರಂಭವಾಗಲಿರುವ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಜಡೇಜಾ ಆಡಲಿದ್ದಾರೆ.
ಇತ್ತೀಚೆಗೆ ರಾಜ್‌ಕೋಟ್‌ನಲ್ಲಿ ನಡೆದ ಕರ್ನಾಟಕದ ವಿರುದ್ಧದ ಪಂದ್ಯದಲ್ಲಿ ಪಿಚ್ ಸ್ಪಿನರ್‌ಗಳಿಗೆ ನೆರವು ನೀಡಿತ್ತು. ಪಂದ್ಯದಲ್ಲಿ ಉರುಳಿದ 35 ವಿಕೆಟ್‌ಗಳ ಪೈಕಿ 31 ವಿಕೆಟ್‌ಗಳನ್ನು ಸ್ಪಿನರ್‌ಗಳು ಕಬಳಿಸಿದ್ದರು. ಇದೀಗ ಅದೇ ಕ್ರೀಡಾಂಗಣದಲ್ಲಿ ಮಧ್ಯಪ್ರದೇಶ ವಿರುದ್ಧ ಪಂದ್ಯ ಜರುಗುತ್ತಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದ ಜಡೇಜಾ, ಮೊದಲ ಪಂದ್ಯದಲ್ಲಿ ಶತಕಗಳಿದ್ದರು, ಸರಣಿಯಲ್ಲಿ ಒಟ್ಟು 8 ವಿಕೆಟ್ ಕಬಳಿಸಿದ್ದರು. ಟೆಸ್ಟ್ ಅಲ್‌ರೌಂಡರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
‘ಆಯ್ಕೆದಾರರ ನಿರ್ಧಾರದಿಂದ ನನಗೆ ಆಶ್ಚರ್ಯವಾಗಿಲ್ಲ. ತಂಡ ಪ್ರಕಟಿಸುವ ಮೊದಲೇ ನನ್ನನ್ನು ತಂಡದಿಂದ ಕೈಬಿಡಲು ಕಾರಣವನ್ನು ತಿಳಿಸಿದ್ದರು. ನನಗೆ ಅವಕಾಶ ಸಿಕ್ಕಾಗಲೆಲ್ಲಾ, ನಾನು ಉತ್ತಮ ಆಟವಾಡಲು ಪ್ರಯತ್ನಿಸುತ್ತೇನೆ. ಇಷ್ಟು ವರ್ಷಗಳಲ್ಲಿ ಅದನ್ನೇ ಮಾಡಿದ್ದೇನೆ’ಎಂದು ಆಸ್ಟ್ರೇಲಿಯಾ ಸರಣಿಯಲ್ಲಿ ಸ್ಥಾನಪಡೆಯಲು ವಿಫಲವಾದ ನಂತರ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.