ADVERTISEMENT

ರಣಜಿ: ಹಿಮಾಚಲ ಪ್ರದೇಶಕ್ಕೆ ಇನಿಂಗ್ಸ್‌ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 19:45 IST
Last Updated 26 ಡಿಸೆಂಬರ್ 2019, 19:45 IST
ಎದುರಾಳಿ ತಂಡದ ವಿಕೆಟ್‌ ಪಡೆದ ಕರ್ನಾಟಕದ ವಿ.ಕೌಶಿಕ್‌ ಸಹ ಆಟಗಾರರ ಜತೆ ಸಂಭ್ರಮಿಸಿದರು
ಎದುರಾಳಿ ತಂಡದ ವಿಕೆಟ್‌ ಪಡೆದ ಕರ್ನಾಟಕದ ವಿ.ಕೌಶಿಕ್‌ ಸಹ ಆಟಗಾರರ ಜತೆ ಸಂಭ್ರಮಿಸಿದರು   

ಮೈಸೂರು: ಪ್ರಿಯಾಂಶು ಖಂಡೂರಿ (69) ಮತ್ತು ರಿಷಿ ಧವನ್ (ಅಜೇಯ 72) ಅವರ ಅರ್ಧಶತಕಗಳ ನೆರವಿನಿಂದ ಹಿಮಾಚಲ ಪ್ರದೇಶ ತಂಡ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಇನಿಂಗ್ಸ್‌ ಮುನ್ನಡೆ ಸಾಧಿಸಿದೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎರಡನೇ ದಿನವಾದ ಗುರುವಾರದ ಆಟದ ಅಂತ್ಯಕ್ಕೆ ಹಿಮಾಚಲ ಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 235 ರನ್‌ ಗಳಿಸಿದ್ದು, 69 ರನ್‌ಗಳ ಮುನ್ನಡೆ ಸಾಧಿಸಿದೆ. ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ 166 ರನ್‌ಗಳಿಗೆ ಆಲೌಟಾಗಿತ್ತು.

ಮೂರು ವಿಕೆಟ್‌ಗೆ 29 ರನ್‌ಗಳಿಂದ ಗುರುವಾರ ಆಟ ಮುಂದುವರಿಸಿದ ಹಿಮಾಚಲ ಪ್ರದೇಶ ತಂಡಕ್ಕೆ ಖಂಡೂರಿ ಮತ್ತು ರಿಷಿ ಧವನ್‌ ಆಸರೆಯಾದರು. ಖಂಡೂರಿ ಅವರು ನಿಖಿಲ್‌ ಗಾಂಗ್ಟ (46) ಜತೆ ಐದನೇ ವಿಕೆಟ್‌ಗೆ 90 ರನ್‌ ಸೇರಿಸಿದರೆ, ರಿಷಿ ಧವನ್‌ ಅವರೊಂದಿಗೆ ಆರನೇ ವಿಕೆಟ್‌ಗೆ 75 ರನ್‌ಗಳನ್ನು ಕಲೆಹಾಕಿದರು.

ADVERTISEMENT

ತಾಳ್ಮೆಯ ಆಟವಾಡಿದ ಖಂಡೂರಿ 240 ಎಸೆತಗಳನ್ನು ಎದುರಿಸಿ 8 ಬೌಂಡರಿ ಗಳಿಸಿದರು. ರಿಷಿ ಧವನ್‌ ವೇಗವಾಗಿ ರನ್‌ ಗಳಿಸಿದರು. 96 ಎಸೆತಗಳನ್ನು ಎದುರಿಸಿದ ಅವರು ಏಳು ಬೌಂಡರಿ, ಮೂರು ಸಿಕ್ಸರ್‌ ಬಾರಿಸಿದ್ದು, ಶುಕ್ರವಾರಕ್ಕೆ ಬ್ಯಾಟಿಂಗ್‌ ಕಾಯ್ದಿರಿಸಿಕೊಂಡಿದ್ದಾರೆ.
48 ರನ್‌ಗಳಿಗೆ ಮೂರು ವಿಕೆಟ್‌ ಪಡೆದ ವಿ.ಕೌಶಿಕ್‌ ಅವರು ಕರ್ನಾಟಕದ ಪರ ಯಶಸ್ವಿ ಬೌಲರ್‌ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್: ಕರ್ನಾಟಕ ಮೊದಲ ಇನಿಂಗ್ಸ್‌ 67.2 ಓವರ್‌ಗಳಲ್ಲಿ 166. ಹಿಮಾಚಲ ಪ್ರದೇಶ ಮೊದಲ ಇನಿಂಗ್ಸ್ 93 ಓವರ್‌ಗಳಲ್ಲಿ 7 ವಿಕೆಟ್‌ಗೆ 235 (ರಿಷಿ ಧವನ್‌ ಬ್ಯಾಟಿಂಗ್ 72, ಪ್ರಿಯಾಂಶು ಖಂಡೂರಿ 69, ನಿಖಿಲ್‌ ಗಾಂಗ್ಟ 46, ವಿ.ಕೌಶಿಕ್‌ 48ಕ್ಕೆ 3, ಪ್ರತೀಕ್‌ ಜೈನ್‌ 40ಕ್ಕೆ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.