ನಾಗಪುರದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುರುವಾರ ಕೇರಳದ ಆದಿತ್ಯ ಸರವಟೆ ಮತ್ತು ಅಹಮ್ಮದ್ ಇಮ್ರಾನ್ ಜೊತೆಯಾಟ
–ಪಿಟಿಐ ಚಿತ್ರ
ನಾಗಪುರ: ಕೇರಳ ತಂಡವನ್ನು ಪ್ರತಿನಿಧಿಸುತ್ತಿರುವ ನಾಗಪುರ ಮೂಲದ ಆದಿತ್ಯ ಸರವಟೆ ಅಜೇಯ ಅರ್ಧಶತಕ ಗಳಿಸಿದರು. ಅದರೊಂದಿಗೆ ವಿದರ್ಭ ಎದುರಿಗಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕೇರಳ ತಂಡದ ಮರುಹೋರಾಟಕ್ಕೆ ಬಲ ತುಂಬಿದರು.
ವಿದರ್ಭ ಕ್ರಿಕೆಟ್ ಸಂಸ್ಥೆ (ವಿಸಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಗುರುವಾರ ಮೊದಲ ಇನಿಂಗ್ಸ್‌ನಲ್ಲಿ ವಿದರ್ಭ ತಂಡವು 123.1 ಓವರ್‌ಗಳಲ್ಲಿ 379 ರನ್ ಗಳಿಸಿತು.
ಇದಕ್ಕುತ್ತರವಾಗಿ ಕೇರಳ ತಂಡವು ದಿನದಾಟದ ಮುಕ್ತಾಯಕ್ಕೆ 39 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 131 ರನ್ ಗಳಿಸಿತು. ಮೊದಲ ಇನಿಂಗ್ಸ್ ಮೊತ್ತ ಚುಕ್ತಾ ಮಾಡಲು ಕೇರಳ ತಂಡಕ್ಕೆ 248 ರನ್‌ಗಳ ಅಗತ್ಯವಿದೆ. ಆದಿತ್ಯ (ಬ್ಯಾಟಿಂಗ್ 66; 120ಎ, 4X10) ಹಾಗೂ ನಾಯಕ ಸಚಿನ್ ಬೇಬಿ (ಬ್ಯಾಟಿಂಗ್ 7; 23ಎ, 4X1) ಕ್ರೀಸ್‌ನಲ್ಲಿದ್ದಾರೆ.
ವಿದರ್ಭ ತಂಡದ ವೇಗಿ ದರ್ಶನ್ ನಾಯ್ಕಂಡೆ (22ಕ್ಕೆ2) ಅವರ ದಾಳಿಯಿಂದಾಗಿ ಕೇರಳ ತಂಡವು ಆರಂಭದಲ್ಲಿಯೇ ಪೆಟ್ಟು ತಿಂದಿತು. ಇನಿಂಗ್ಸ್‌ನ ಮೊದಲ ಓವರ್ ಮತ್ತು 3ನೇ ಓವರ್ ಹಾಕಿದ ದರ್ಶನ್ ಅವರು ಕ್ರಮವಾಗಿ ಆರಂಭಿಕ ಬ್ಯಾಟರ್ ಅಕ್ಷಯ್ ಚಂದ್ರನ್ ಮತ್ತು ರೋಹನ್ ಕುನುಮ್ಮಾಳ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು.
ಈ ಹಂತದಲ್ಲಿ ಆದಿತ್ಯ ಮತ್ತು ಅಹಮದ್ ಇಮ್ರಾನ್ (37; 83ಎ, 4X3) ಅವರು 3ನೇ ವಿಕೆಟ್ ಜೊತೆಯಾಟದಲ್ಲಿ 93 ರನ್ ಸೇರಿಸಿದರು. ಇದರಿಂದಾಗಿ ತಂಡವು ಚೇತರಿಸಿಕೊಂಡಿತು.
ಆದಿತ್ಯ ತಾಳ್ಮೆಮತ್ತು ಏಕಾಗ್ರತೆಯಿಂದ ಬ್ಯಾಟಿಂಗ್ ಮಾಡಿದರು. ವಿದರ್ಭ ತಂಡದ ಬೌಲರ್‌ಗಳ ಉತ್ತಮ ದಾಳಿಯ ಮುಂದೆ ನೆಲಕಚ್ಚಿ ಆಡಿದರು.
ವಿದರ್ಭ ತಂಡವು ಮೊದಲ ದಿನದಾಟದಲ್ಲಿ 4ಕ್ಕೆ254 ರನ್ ಗಳಿಸಿತ್ತು. ದಾನಿಶ್ ಮಾಲೆವರ್ ಶತಕ ಮತ್ತು ಕರುಣ್ ನಾಯರ್ ಅರ್ಧಶತಕ ಗಳಿಸಿದ್ದರು. ದಾನಿಶ್ ಕ್ರೀಸ್‌ನಲ್ಲಿದ್ದರು. 400 ರನ್‌ಗಳಿಗಿಂತ ಹೆಚ್ಚಿನ ಮೊತ್ತವನ್ನು ದಾಖಲಿಸುವತ್ತ ಚಿತ್ತ ನೆಟ್ಟಿದ್ದ ಆತಿಥೇಯ ತಂಡಕ್ಕೆ ಕೇರಳದ ಬೌಲರ್ ನಿಧಶಿ್ (61ಕ್ಕೆ3), ಈಡನ್ ಆ್ಯಪಲ್ (102ಕ್ಕೆ3) ಮತ್ತು ಬಾಸಿಲ್ (60ಕ್ಕೆ2) ಅಡ್ಡಿಯಾದರು.
ವಿದರ್ಭ: 123.1 ಓವರ್‌ಗಳಲ್ಲಿ 379 (ದಾನಿಶ್ ಮಾಲೆವರ್ 153, ಯಶ್ ಠಾಕೂರ್ 25, ಅಕ್ಷಯ್ ವಾಡಕರ್ 23, ನಚಿಕೇತ್ ಭೂತೆ 32, ನಿಧೀಶ್ 61ಕ್ಕೆ3, ಈಡನ್ ಆ್ಯಪಲ್ 102ಕ್ಕೆ3, ನೆಡುಮಂಕುಝಿ ಬಾಸಿಲ್ 60ಕ್ಕೆ2)
ಕೇರಳ: 39 ಓವರ್‌ಗಳಲ್ಲಿ 3ಕ್ಕೆ131 (ಆದಿತ್ಯ ಸರವಟೆ ಬ್ಯಾಟಿಂಗ್ 66, ಅಹಮದ್ ಇಮ್ರಾನ್ 37, ದರ್ಶನ್ ನಾಯ್ಕಂಡೆ 22ಕ್ಕೆ2, ಯಶ್ ಠಾಕೂರ್ 45ಕ್ಕೆ1)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.