ADVERTISEMENT

ರಣಜಿ ಟ್ರೋಫಿ: ಮಧ್ಯಪ್ರದೇಶಕ್ಕೆ ಮಣಿದ ಮಯಂಕ್ ಪಡೆ

ಗಿರೀಶ ದೊಡ್ಡಮನಿ
Published 25 ಜನವರಿ 2026, 23:35 IST
Last Updated 25 ಜನವರಿ 2026, 23:35 IST
<div class="paragraphs"><p>ಬೆಂಗಳೂರು ಹೊರವಲಯದಲ್ಲಿರುವ ಆಲೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ತಂಡದ ವಿದ್ವತ್‌ ಕಾವೇರಪ್ಪ ವಿಕೆಟ್‌ ಪಡೆದ ಮಧ್ಯಪ್ರದೇಶದ ಸಾರಾಂಶ್ ಜೈನ್ ಸಹ ಆಟಗಾರರೊಂದಿಗೆ ಸಂಭ್ರಮಿಸಿದರು </p></div>

ಬೆಂಗಳೂರು ಹೊರವಲಯದಲ್ಲಿರುವ ಆಲೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ತಂಡದ ವಿದ್ವತ್‌ ಕಾವೇರಪ್ಪ ವಿಕೆಟ್‌ ಪಡೆದ ಮಧ್ಯಪ್ರದೇಶದ ಸಾರಾಂಶ್ ಜೈನ್ ಸಹ ಆಟಗಾರರೊಂದಿಗೆ ಸಂಭ್ರಮಿಸಿದರು

   

ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್. 

ಬೆಂಗಳೂರು: ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ಕ್ರಿಕೆಟ್ ತಂಡವು  ಹದಿನೆಂಟು ದಿನಗಳ ಅಂತರದಲ್ಲಿ ಮಧ್ಯಪ್ರದೇಶದ ಎದುರು ಎರಡನೇ ಬಾರಿ ಸೋತಿತು. 

ADVERTISEMENT

ಭಾನುವಾರ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ 217 ರನ್‌ಗಳಿಂದ ಮಧ್ಯಪ್ರದೇಶಕ್ಕೆ ಮಣಿಯಿತು. 362 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಕರ್ನಾಟಕ ತಂಡವನ್ನು ಅಗ್ರಕ್ರಮಾಂಕದ ಅನುಭವಿ ಬ್ಯಾಟರ್‌ಗಳ ವೈಫಲ್ಯ ಕಾಡಿತು.  ಡ್ರಾ ಮಾಡಿಕೊಳ್ಳುವ ಪ್ರಯತ್ನದಲ್ಲಿಯೂ ಬ್ಯಾಟರ್‌ಗಳು ವಿಫಲರಾದರು.  ಎದುರಾಳಿ ಸ್ಪಿನ್ನರ್‌ಗಳಾದ ಸಾಗರ್ ಸೋಳಂಕಿ (20ಕ್ಕೆ3) ಮತ್ತು ಸಾರಾಂಶ್ ಜೈನ್ (37ಕ್ಕೆ3) ಮೇಲುಗೈ ಸಾಧಿಸಿದರು.  

ಇದೇ ತಿಂಗಳ ಮೊದಲ ವಾರದಲ್ಲಿ ನಡೆದಿದ್ದ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿಯೂ ಮಧ್ಯಪ್ರದೇಶ ಎದುರು ಕರ್ನಾಟಕ ಸೋತಿತ್ತು. 

ರಣಜಿ ಟೂರ್ನಿಯ ಮೊದಲ ಹಂತದಲ್ಲಿ (ಟಿ20 ಮತ್ತು ಏಕದಿನ ದೇಶಿ ಟೂರ್ನಿಗಳಿಗೂ ಮುನ್ನ) ಮಯಂಕ್ ಬಳಗವು ಅಜೇಯವಾಗಿ ಉಳಿದಿತ್ತು. 21 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ಆದರೆ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ಮೂರನೇ ಸ್ಥಾನಕ್ಕೆ ಕುಸಿಯಿತು.  ಇದರಿಂದಾಗಿ ತಂಡದ ನಾಕೌಟ್ ಪ್ರವೇಶದ ಹಾದಿ ಕಠಿಣವಾಗಿದೆ. ಮಹಾರಾಷ್ಟ್ರ (24) ಮತ್ತು ಮಧ್ಯಪ್ರದೇಶ (22) ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿವೆ. ಗುಂಪಿನಲ್ಲಿರುವ ಎಲ್ಲ ತಂಡಗಳಿಗೂ ಇನ್ನೊಂದು ಸುತ್ತಿನ ಪಂದ್ಯ ಬಾಕಿ ಇದೆ. ಕರ್ನಾಟಕ ತಂಡವು ಮುಂದಿನ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಮೊಹಾಲಿಯಲ್ಲಿ ಎದುರಿಸಲಿದೆ. ಅದರಲ್ಲಿ ಜಯಿಸಿದರೆ ಮಾತ್ರ ನಾಕೌಟ್ ಪ್ರವೇಶಕ್ಕೆ ಒಂದು ಸಣ್ಣ ಅವಕಾಶ ಇರಲಿದೆ. 

ಮಯಂಕ್, ದೇವದತ್ತ ವೈಫಲ್ಯ

ಮೊದಲ ಇನಿಂಗ್ಸ್‌ನಲ್ಲಿ 132 ರನ್‌ ಮುನ್ನಡೆ ಸಾಧಿಸಿದ್ದ ಪ್ರವಾಸಿ ಬಳಗವು ಭಾನುವಾರ ಬೆಳಿಗ್ಗೆ 8 ವಿಕೆಟ್‌ಗಳಿಗೆ 229 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಶನಿವಾರ ಮಧ್ಯಪ್ರದೇಶ ತಂಡವು ಉತ್ತಮ ಮುನ್ನಡೆ ಪಡೆಯಲು ಕಾರಣರಾಗಿ ಕ್ರೀಸ್‌ನಲ್ಲಿ ಉಳಿದಿದ್ದ ಹಿಮಾಂಶು ಮಂತ್ರಿ ಅವರು (96; 214ಎ, 4X4) ಶತಕದ ಗಡಿ ದಾಟಲು ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಬಿಡಲಿಲ್ಲ. ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು. 

ಗುರಿ ಬೆನ್ನಟ್ಟಿದ  ಆತಿಥೇಯ ತಂಡದ ನಾಯಕ, ಟೆಸ್ಟ್ ಕ್ರಿಕೆಟ್ ಆಡಿದ ಅನುಭವಿ ಮಯಂಕ್ ಅಗರವಾಲ್ (7 ರನ್) ಉತ್ತಮ ಆರಂಭ ಕೊಡುವಲ್ಲಿ ಮತ್ತೊಮ್ಮೆ ವಿಫಲರಾದರು. ಆದರೆ ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ಕೆ.ವಿ. ಅನೀಶ್ ದಿಟ್ಟ ಆಟವಾಡಿದರು. ಎರಡನೇ ಇನಿಂಗ್ಸ್‌ನಲ್ಲಿಯೂ ಅವರು 142 ಎಸೆತಗಳಲ್ಲಿ 57 ರನ್ ಗಳಿಸಿದರು. 

ಆದರೆ, ದೇವದತ್ತ ಪಡಿಕ್ಕಲ್ ಅವರೂ ಆರ್ಯನ್ ಪಾಂಡ್ಯ ಎಸೆತದ ಚಲನೆಯನ್ನು ಅಂದಾಜಿಸುವಲ್ಲಿ ಎಡವಿದರು. ಚೆಂಡು ಸ್ಟಂಪ್ ಎಗರಿಸಿತು. 

ಮೂರನೇ ದಿನದಾಟದಲ್ಲಿ ಗಾಯಗೊಂಡಿದ್ದ ಕರುಣ್ ನಾಯರ್ ಅವರ ಬದಲು ‘ಬದಲಿ ಬ್ಯಾಟರ್’ ಆಗಿ ಕಣಕ್ಕಿಳಿದ ನಿಕಿನ್ ಜೋಸ್ (26; 101ಎ, 4X2) ಅವರು ಅನೀಶ್ ಜೊತೆಗೂಡಿ 61 ರನ್ ಸೇರಿಸಿದರು. ಊಟದ ವಿರಾಮದ ನಂತರ ನಿಕಿನ್ ಔಟಾಗುವುದರೊಂದಿಗೆ ಕರ್ನಾಟಕ ಬಳಗವು ಸೋಲಿನತ್ತ ಮುಖಮಾಡಿತು.  ನಂತರದ 67 ರನ್‌ಗಳ ಅಂತರದಲ್ಲಿ ಏಳು ವಿಕೆಟ್‌ಗಳು ಪತನಗೊಂಡವು. ತಂಡವು ಈ ಋತುವಿನಲ್ಲಿ ಮೊದಲ ಸೋಲಿಗೆ ಶರಣಾಯಿತು.  ವಿದ್ಯಾಧರ್ ಪಾಟೀಲ (ಔಟಾಗದೇ 26; 69ಎ, 4X5) ಅವರ ಅಜೇಯ ಆಟ ಗಮನ ಸೆಳೆಯಿತು. 

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಮಧ್ಯಪ್ರದೇಶ: 116.1 ಓವರ್‌ಗಳಲ್ಲಿ 323. ಕರ್ನಾಟಕ: 64.1 ಓವರ್‌ಗಳಲ್ಲಿ 191. ಎರಡನೇ ಇನಿಂಗ್ಸ್: ಮಧ್ಯಪ್ರದೇಶ: 75.1 ಓವರ್‌ಗಳಲ್ಲಿ 8ಕ್ಕೆ229 ಡಿಕ್ಲೇರ್ಡ್ (ಹಿಮಾಂಶು ಮಂತ್ರಿ 96, ಶುಭಂ ಶರ್ಮಾ 32, ಆರ್ಯನ್ ಪಾಂಡೆ 18, ಕುಮಾರ್ ಕಾರ್ತಿಕೇಯ 11, ವಿದ್ಯಾಧರ್ ಪಾಟೀಲ 54ಕ್ಕೆ4, ಶಿಖರ್ ಶೆಟ್ಟಿ 41ಕ್ಕೆ2, ಶ್ರೇಯಸ್ ಗೋಪಾಲ್ 58ಕ್ಕೆ2)

ಕರ್ನಾಟಕ: 67.5 ಓವರ್‌ಗಳಲ್ಲಿ 144 (ಕೆ.ವಿ. ಅನೀಶ್ 57, ನಿಕಿನ್ ಜೋಸ್ 26, ವಿದ್ಯಾಧರ್ ಪಾಟೀಲ ಔಟಾಗದೇ 26, ಆರ್ಯನ್ ಪಾಂಡೆ 9ಕ್ಕೆ2, ಸಾರಾಂಶ್ ಜೈನ್ 37ಕ್ಕೆ3, ಸಾಗರ್ ಸೋಳಂಕಿ 20ಕ್ಕೆ3) ಫಲಿತಾಂಶ: ಮಧ್ಯಪ್ರದೇಶ ತಂಡಕ್ಕೆ 217 ರನ್‌ ಜಯ. ಪಂದ್ಯದ ಆಟಗಾರ: ಸಾರಾಂಶ್ ಜೈನ್. 

ಕರುಣ್‌ ಬದಲಿಗೆ ನಿಕಿನ್ ಬ್ಯಾಟಿಂಗ್

ಶನಿವಾರ ಕೈಬೆರಳಿಗೆ ಪೆಟ್ಟು ಬಿದ್ದು ಮೈದಾನ ತೊರೆದಿದ್ದ ಕರುಣ್ ನಾಯರ್ ಅವರು ಕೊನೆಯ ದಿನದಾಟದಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಅವರ ಬದಲಿಗೆ ‘ಬದಲೀ ಬ್ಯಾಟರ್’ ಆಗಿ ನಿಕಿನ್ ಜೋಸ್ ಆಡಿದರು.  ಈ ಮೊದಲು ಕಂಕಷನ್‌ (ತಲೆ ಕುತ್ತಿಗೆ ಭಾಗಕ್ಕೆ ಪೆಟ್ಟಾದರೆ) ಮಾತ್ರ ಬದಲೀ ಆಟಗಾರನನ್ನು  ಒದಗಿಸುವ ಅವಕಾಶ ಇತ್ತು. ಈಚೆಗೆ ಜಾರಿಯಾದ ಹೊಸ ನಿಯಮದನ್ವಯ ಯಾವುದೇ ಆಟಗಾರ ಗಂಭೀರವಾಗಿ ಗಾಯಗೊಂಡು ನಿರ್ಗಮಿಸಿದರೆ ಸಬ್‌ಸ್ಟಿಟ್ಯೂಟ್ ನೀಡಬೇಕು.  ಆ ನಿಯಮ ಕರುಣ್ ವಿಷಯದಲ್ಲಿ ಪಾಲನೆಯಾಯಿತು. 

‘ಬ್ಯಾಟಿಂಗ್ ಮಾಡಲು ಪಿಚ್‌ ಉತ್ತಮವಾಗಿತ್ತು. ಆದರೆ ಕಳಪೆ ಪ್ರದರ್ಶನದಿಂದಾಗಿ ಸೋಲುಂಟಾಗಿದೆ. ಎಲ್ಲ ಲೋಪಗಳನ್ನೂ ತಿದ್ದಿಕೊಂಡು ಮುಂದಿನ ಪಂದ್ಯದಲ್ಲಿ ಪಂಜಾಬ್ ಎದುರು ಕಣಕ್ಕಿಳಿಯುತ್ತೇವೆ.
ಯರೇಗೌಡ, ಕರ್ನಾಟಕ ತಂಡದ ಕೋಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.